ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | 45 ಗ್ರಾಮಗಳಲ್ಲಿ ನೀರಿನ ಕೊರತೆ

ಜೀವಜಲಕ್ಕಾಗಿ ಜನರ ಪರದಾಟ: 15ಕ್ಕೂ ಹೆಚ್ಚು ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ವಿತರಣೆ
ಆರ್.ಸಿ.ಮಹೇಶ್
Published 6 ಮೇ 2024, 7:21 IST
Last Updated 6 ಮೇ 2024, 7:21 IST
ಅಕ್ಷರ ಗಾತ್ರ

ಹುಳಿಯಾರು: ದಿನದಿಂದ ದಿನಕ್ಕೆ ತಾಪಮಾನ ಏರುತ್ತಿದ್ದು ಹೋಬಳಿ ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಈಗಾಗಲೇ 45 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಸುಮಾರು 10ಕ್ಕೂ ಹೆಚ್ಚು ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ತಾಲ್ಲೂಕು ವ್ಯಾಪ್ತಿಯಲ್ಲಿ ಬೋರನಕಣಿವೆ ಜಲಾಶಯದಿಂದ ಹುಳಿಯಾರು ಪಟ್ಟಣಕ್ಕೆ ಹೊರತುಪಡಿಸಿದರೆ ಬೇರೆ ಯಾವುದೇ ಪಟ್ಟಣ ಹಾಗೂ ಗ್ರಾಮಗಳಿಗೆ ಕೆರೆಗಳ ನೀರು ಸರಬರಾಜಿನ ವ್ಯವಸ್ಥೆ ಇಲ್ಲ. ಆಯಾಯ ಗ್ರಾಮ ಹಾಗೂ ಪಟ್ಟಣಗಳಲ್ಲಿ ಹಾಕಲಾಗಿರುವ ಕೊಳವೆಬಾವಿಗಳೇ ಕುಡಿಯುವ ನೀರಿಗೆ ಆಧಾರವಾಗಿವೆ.

ಗ್ರಾಮಗಳಲ್ಲಿನ ಕೊಳವೆ ಬಾವಿ ಬತ್ತುತ್ತಿವೆ. ಇನ್ನೂ ಕೆಲ ಕೊಳವೆಬಾವಿಗಳಲ್ಲಿ ಅಲ್ಪಸ್ವಲ್ಪ ನೀರು ಬಂದರೂ ಇಡೀ ಗ್ರಾಮಕ್ಕೆ ಸರಬರಾಜು ಮಾಡುವಷ್ಟು ಸಾಕಾಗುವುದಿಲ್ಲ. ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯ ಕೆಲ ಗ್ರಾಮಗಳು ಹೊರತು ಪಡಿಸಿದರೆ ಹುಳಿಯಾರು, ಹಂದನಕೆರೆ, ಕಂದಿಕೆರೆ, ಚಿಕ್ಕನಾಯಕನಹಳ್ಳಿ ಕಸಬಾ ಹೋಬಳಿಯ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಸಾವಿರ ಅಡಿ ದಾಟಿದೆ. ಕೆಲ ಕೊಳವೆಬಾವಿಗಳಲ್ಲಿ ಬರುವ ಒಂದಿಷ್ಟು ನೀರಿಗೆ ಗ್ರಾಮಗಳಲ್ಲಿ ನೀರು ಹಿಡಿಯುವುದೇ ಒಂದು ಕೆಲಸವಾಗಿದೆ. ಕೊಳಾಯಿಗಳ ಮುಂದೆ ಸರದಿ ಸಾಲಿನಲ್ಲಿ ಬಿಂದಿಗೆಗಳ ಸಾಲು ಕಾಣಿಸುತ್ತಿದೆ.

ಎಲ್ಲೆಲ್ಲಿ ನೀರಿಗೆ ಬರ: ತಾಲ್ಲೂಕಿನ ಗೊಟ್ಟೆಗೇನಹಳ್ಳಿ, ಉಪಲೀಕನಹಳ್ಳಿ, ಮೈಲುಕಬ್ಬೆ ಗೊಲ್ಲರಹಟ್ಟಿ, ಮಲ್ಲೇನಹಳ್ಳಿ, ದೊಡ್ಡರಾಂಪುರ, ತಮ್ಮಡಿಹಳ್ಳಿ ಗೊಲ್ಲರಹಟ್ಟಿ, ಜಡಿಯಪ್ಪನಪಾಳ್ಯ, ತರಬೇನಹಳ್ಳಿ ಕಾಲೋನಿ, ಬಲ್ಲಪ್ಪನಹಟ್ಟಿ, ಬಡಕೆಗುಡ್ಲು ಭೋವಿ ಕಾಲೋನಿ, ಲಿಂಗದಹಳ್ಳಿ ಗೊಲ್ಲರಹಟ್ಟಿ, ಬೀಮಸಂದ್ರ, ಮಲ್ಲಿಗೆರೆ, ಮಲ್ಲಿಗೆರೆ ಗೊಲ್ಲರಹಟ್ಟಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಪ್ರಾರಂಭವಾಗಿದೆ.

ಈ ಗ್ರಾಮಗಳಲ್ಲಿದ್ದ ಕೊಳವೆಬಾವಿಗಳನ್ನು ರಿಬೋರ್ ಮಾಡಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ಪ್ರತಿದಿನ ಒಂದೆರಡು ಗ್ರಾಮಗಳ ಕೊಳವೆಬಾವಿಗಳಲ್ಲಿ ನೀರು ಬತ್ತುತ್ತಿರುವುದು ತಾಲ್ಲೂಕು ಆಡಳಿತಕ್ಕೆ ತಲೆನೋವು ತಂದಿದೆ.

ಈಗಾಗಲೇ ಬಾದೆಹಟ್ಟಿ, ಮಲ್ಲಿಗೆರೆ ಗೊಲ್ಲರಹಟ್ಟಿ, ಬಂಗಾರಗೆರೆ, ಕಾರೇಹಳ್ಳಿ, ಲಿಂಗದಹಳ್ಳಿ ಗೊಲ್ಲರಹಟ್ಟಿ, ಹರೇನಹಳ್ಳಿ, ಉಪ್ಪಾರಹಳ್ಳಿ ಗೊಲ್ಲರಹಟ್ಟಿ, ಮಲ್ಲೇನಹಳ್ಳಿ ತಾಂಡಾ, ಮಾದಾಪುರ ತಾಂಡಾ, ಸೋಮನಹಳ್ಳಿ ಭೋವಿ ಕಾಲೋನಿ, ದವನದ ಹೊಸಹಳ್ಳಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಇನ್ನೂ 15 ಗ್ರಾಮಗಳಿಗೆ ಗ್ರಾಮದ ಸರ್ಕಾರಿ ಕೊಳವೆಬಾವಿ ಹಾಗೂ ಖಾಸಗಿ ಕೊಳವೆಬಾವಿಗಳಿಂದ ಗ್ರಾಮಗಳಿಗೆ ನೀರು ಒದಗಿಸಲಾಗುತ್ತಿದೆ. ಸದ್ಯದ ಸ್ಥಿತಿಯೇ ಚಿಂತಾಜನಕವಾಗಿದ್ದು ಇನ್ನೊಂದು ವಾರ ಮಳೆ ಬಾರದೆ ಹೋದರೆ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ತಾತ್ಕಾಲಿಕ ವ್ಯವಸ್ಥೆ ಕುಡಿಯುವ ನೀರು ಸರಬರಾಜು ಮೂಲಭೂತ ಸೌಕರ್ಯವಾಗಿದ್ದು ಜನರಿಗೆ ತೊಂದರೆ ಆಗದಂತೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುತ್ತಿದೆ. ಮಳೆಯ ಅಭಾವದಿಂದ ನೀರಿನ ಕೊರತೆಯಾಗಿದ್ದು ಸಮಸ್ಯೆ ಎದುರಾದಲ್ಲಿ ಪರಿಹರಿಸಲು ತಾಲ್ಲೂಕು ಆಡಳಿತ ಸನ್ನದ್ಧವಾಗಿದೆ. ಪಿ.ವಿನಾಯಕ ಸಾಗರ ಚಿಕ್ಕನಾಯಕಹಳ್ಳಿ ತಹಶೀಲ್ದಾರ್‌  ಹಣದ ಕೊರತೆ ಇಲ್ಲ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಆಯಾಯ ಗ್ರಾಮ ಪಂಚಾಯಿತಿಗಳಿಗೆ ವಿಶೇಷ ಅನುದಾನದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲು ತಿಳಿಸಲಾಗಿದೆ. ಹೆಚ್ಚಿನ ಸಮಸ್ಯೆ ಎದುರಾದರೆ ಐಡಿಆರ್‌ಎಫ್‌ ಯೋಜನೆಯಲ್ಲಿ ಹೊಸ ಕೊಳವೆಬಾವಿ ತೊಡಿಸಲು 600 ಅಡಿಗಿಂತ ಮೇಲಿರುವ ಕೊಳವೆ ಬಾವಿಗಳನ್ನು ರಿಬೋರ್‌ ಮಾಡಲು ಅವಕಾಶವಿದೆ. ಎಚ್.ಕೆ.ವಸಂತಕುಮಾರ್‌ ತಾಲ್ಲೂಕು ಪಂಚಾಯಿತಿ ಇಒ  ಬೋರನಕಣಿವೆ ನೀರು ಹಳ್ಳಿಗಳಿಗೆ ಕೊಡಿ ಬೋರನಕಣಿವೆ ಜಲಾಶಯದಿಂದ ಹುಳಿಯಾರು ಪಟ್ಟಣ ಸೇರಿದಂತೆ ಜಲಾಶಯ ಸುತ್ತಮುತ್ತಲ 5 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ನೀರು ಸರಬರಾಜು ಯೋಜನೆ ರೂಪಿಸಲಾಗಿತ್ತು. ಆದರೆ ಹುಳಿಯಾರು ಪಟ್ಟಣಕ್ಕೆ ಮಾತ್ರ ನೀಡಿ ಉಳಿದ ಗ್ರಾಮಗಳಿಗೆ ಯೋಜನೆ ವಿಸ್ತರಣೆ ಮಾಡಲಿಲ್ಲ. ಮಾಡಿದ್ದರೆ ಒಂದಿಷ್ಟು ಸಮಸ್ಯೆ ಬಗೆಹರಿಯುತ್ತಿತ್ತು. ಧೇನ್ಯಾನಾಯ್ಕ ಸೋಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT