ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕನಾಯಕನಹಳ್ಳಿ: ಹೇಮಾವತಿ ಹರಿದರೂ ತಪ್ಪದ ಬವಣೆ

ಅಡಿಕೆ ತೆಂಗು ಉಳಿಸಿಕೊಳ್ಳಲು ರೈತರ ಹರಸಾಹಸ, ಪ್ರಾಣಿ, ಪಕ್ಷಿಗಳಿಗೆ ನೀರಿನ ತತ್ವಾರ
ಆರ್‌.ಸಿ.ಮಹೇಶ್
Published 20 ಮಾರ್ಚ್ 2024, 9:26 IST
Last Updated 20 ಮಾರ್ಚ್ 2024, 9:26 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನಲ್ಲಿ ಅಂತರ್ಜಲ ಬತ್ತಿದ್ದು, ಕೊಳವೆ ಬಾವಿಗಳಲ್ಲಿ ನೀರು ಬಾರದೆ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ರಾಸುಗಳಿಗೆ ಹಾಗೂ ತೆಂಗು, ಅಡಿಕೆ ತೋಟಗಳಿಗೆ ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ.

ತಾಲ್ಲೂಕಿನಲ್ಲಿ ನೀರಿನ ಕೊರತೆ ಹಾಗೂ ಬಿಸಲಿನ ಝಳಕ್ಕೆ ಜನ- ಜಾನುವಾರುಗಳು ತತ್ತರಿಸಿವೆ. ಸ್ವಲ್ಪ ಪ್ರಮಾಣದಲ್ಲಿ ಉಳಿದಿರುವ ಕೊಳವೆ ಬಾವಿಗಳ ನೀರನ್ನು ಹೊರ ತೆಗೆಯಲು ವಿದ್ಯುತ್‌ ಕಣ್ಣಾಮುಚ್ಚಾಲೆ ರೈತರನ್ನು ಹೈರಾಣಾಗಿಸಿದೆ. ಈಗಾಗಲೇ ಅಡಿಕೆ ಉಳಿಸಿಕೊಳ್ಳಲು ಕೆಲವರು ಟ್ಯಾಂಕರ್‌ ನೀರಿನ ಮೊರೆ ಹೋದರೆ, ಮತ್ತೆ ಕೆಲವರು ದುಬಾರಿ ಹಣತೆತ್ತು ಕೊಳವೆ ಬಾವಿ ಕೊರೆಸಲು ಮುಂದಾಗಿದ್ದಾರೆ.

ಎರಡು ದಶಕಗಳ ಸತತ ಹೋರಾಟದ ಫಲವಾಗಿ 2022ರಲ್ಲಿ ತಾಲ್ಲೂಕಿಗೆ ಮೊದಲ ಬಾರಿ ಹೇಮಾವತಿ ನೀರಾವರಿ ಯೋಜನೆ ಜಾರಿಯಾಗಿತ್ತು. ಶೆಟ್ಟಿಕೆರೆ ಹೋಬಳಿ ಸಾಸಲು ಕೆರೆಯಿಂದ ಹೆಸರಳ್ಳಿ, ಅಂಕಸಂದ್ರದ ಮೂಲಕ ಹುಳಿಯಾರು ಹೋಬಳಿಯ ತಿಮ್ಲಾಪುರ ಕೆರೆ ಭಾಗಕ್ಕೂ ನೀರು ಹರಿದು ಬಂದಿತ್ತು. 

ಬೋರನಕಣಿವೆ ಜಲಾಶಯದಲ್ಲಿ 25 ಅಡಿಯಷ್ಟು ನೀರಿದ್ದರೂ ಸುತ್ತಲಿನ ಗ್ರಾಮಗಳಲ್ಲಿ ನೀರಿನ ಹಾಹಾಕಾರ ಆರಂಭವಾಗಿದೆ. ಜಲಾಶಯದ ನೀರು ಹರಿಯುವ ಬೆಳ್ಳಾರ ಗ್ರಾಮದ ಸುತ್ತಮುತ್ತ ಕೂಡ ನೀರಿಗೆ ತತ್ವಾರ ಎದುರಾಗಿದೆ. ಜಲಾಶಯಕ್ಕೆ ಹೊಂದಿಕೊಂಡಿರುವ ತಿಮ್ಮಪ್ಪಹಟ್ಟಿ, ಕಲ್ಲೇನಹಳ್ಳಿ, ನುಲೇನೂರು, ಬರಕನಹಾಳ್‌ ಸುತ್ತಮುತ್ತಲ ಗ್ರಾಮಗಳಲ್ಲೂ ನೀರಿಗೆ ತೊಂದರೆಯಾಗಿದೆ.

ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಂಕಷ್ಟ ಎದುರಾಗಿದೆ. ಬೆಳಿಗ್ಗೆಯಾದರೆ ಸಾಕು ಜನರು ಬಿಂದಿಗೆ ಹಿಡಿದು ನೀರಿಗೆ ಅಲೆದಾಡುವ ಸ್ಥಿತಿ ಇದೆ.

ಮೇವಿನ ಕೊರತೆ ನೀಗಿಸಲು ಬೋರನಕಣಿವೆ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸಲಾಗಿತ್ತು. 15 ದಿನಗಳಿಗೊಮ್ಮೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಿ ಮೇವು ಬೆಳೆಯಲು ಅನುವು ಮಾಡಲಾಗುತ್ತಿದೆ. ಆದರೆ ರೈತರು ಆ ನೀರು ಬಳಸಿಕೊಂಡು ಅಡಿಕೆ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಕೆಲವು ರೈತರು ಮಾತ್ರ ಮೇವಿನ ಬೀಜ ಬಿತ್ತನೆ ಮಾಡಿದ್ದಾರೆ.

ಬೋರನಕಣಿವೆ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಸಿದ ಅಧಿಕಾರಿಗಳ ಕ್ರಮವನ್ನು ಕೆಲ ರೈತರು ವಿರೋಧಿಸುತ್ತಿದ್ದಾರೆ. ಜಲಾಶಯದಲ್ಲಿ ನೀರಿದ್ದರೆ ಅಂತರ್ಜಲ ಪ್ರಾಣಿ, ಪಕ್ಷಿಗಳಿಗೆ ನೀರು ಉಳಿಯುತ್ತಿತ್ತು ಎಂಬ ಮಾತು ಜನರಿಂದ ಕೇಳಿ ಬರುತ್ತಿದೆ. ಕಂದಿಕೆರೆ ಹೋಬಳಿ ಗಂಟೇನಹಳ್ಳಿ ಕೆರೆಯಿಂದಲೂ ಕಾಲುವೆಗೆ ನೀರು ಹರಿಸಲಾಗುತ್ತಿದೆ. ತಿಮ್ಮನಹಳ್ಳಿ, ರಾಮನಹಳ್ಳಿ, ಸಿದ್ಧನಕಟ್ಟೆ ಭಾಗದಲ್ಲಿ ಅಂತರ್ಜಲ ಕುಸಿದು ಕೊಳವೆಬಾವಿ ಬತ್ತುವ ಭೀತಿ ಎದುರಾಗಿದೆ ಎಂದು ರೈತರು ಅತಂಕ ವ್ಯಕ್ತಪಡಿಸಿದ್ದಾರೆ.

ಮೇವಿಗೆ ಬರವಿಲ್ಲ: ತಾಲ್ಲೂಕು ವ್ಯಾಪ್ತಿಯಲ್ಲಿ 57,090 ರಾಸುಗಳಿದ್ದು, ಸದ್ಯಕ್ಕೆ ಮೇವಿನ ಬರವಿಲ್ಲ. ಪಶು ಪಾಲನೆ ಇಲಾಖೆ ವರದಿ ಪ್ರಕಾರ ಮುಂದಿನ 12 ವಾರಗಳಿಗೆ ಆಗುವಷ್ಟು ಮೇವು ರೈತರ ಬಳಿ ದಸ್ತಾನಿದೆ.

ಕಳೆದ ವರ್ಷ ನಿರೀಕ್ಷಿತ ಮಳೆ ಬಾರದೆ ರಾಗಿ, ನವಣೆ ಸೇರಿದಂತೆ ಯಾವ ಧಾನ್ಯಗಳ ಬಿತ್ತನೆ ಆಗಿಲ್ಲ. ತಿಪಟೂರು ತಾಲ್ಲೂಕಿನಿಂದ ಒಂದು ಹೊರೆ ರಾಗಿ ಹುಲ್ಲಿಗೆ ₹300 ತಂದಿದ್ದೇನೆ ಎಂದು ರಂಗನಕೆರೆ ಗ್ರಾಮದ ರೈತ ಸ್ವಾಮಿ ಹೇಳಿದರು.

18 ಕೊಳವೆಬಾವಿ: ತಾಲ್ಲೂಕು ವ್ಯಾಪ್ತಿಯಲ್ಲಿ ಜನವರಿಯಿಂದ ಫೆಬ್ರವರಿ ಕೊನೆವರೆಗೆ ವಿವಿಧ ಗ್ರಾಮಗಳಲ್ಲಿ 18 ಕೊಳವೆ ಬಾವಿಗಳನ್ನು ಕುಡಿಯುವ ನೀರಿಗಾಗಿ ಕೊರೆಯಲಾಗಿದೆ. ಅವುಗಳಲ್ಲಿ ಅರ್ಧದಷ್ಟು ಕೊಳವೆ ಬಾವಿಗಳಲ್ಲಿ ನೀರು ಬಂದಿದೆ.

ಪ್ರಾಣಿ-ಪಕ್ಷಿಗಳಿಗೂ ನೀರಿಲ್ಲ: ತಾಲ್ಲೂಕು ವ್ಯಾಪ್ತಿಯಲ್ಲಿ ಮದಲಿಂಗನ ಕಣಿವೆ ಹಾಗೂ ಬುಕ್ಕಾಪಟ್ಟಣ ವಲಯಕ್ಕೆ ಸೇರಿದ ಬೆಳ್ಳಾರ ಮನ್ನಾ ಜಂಗಲಿ ಅರಣ್ಯ ಪ್ರದೇಶವಿದೆ. ಈಗಾಗಲೇ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ನೀರಿಲ್ಲದೆ ಪರದಾಡುತ್ತಿದ್ದ ಪ್ರಾಣಿ, ಪಕ್ಷಿಗಳನ್ನು ಕಾಡಿಗೆ ಬೀಳುವ ಬೆಂಕಿ ಇನ್ನಷ್ಟು ನಿತ್ರಾಣ ಗೊಳಿಸಿದೆ.

–––––

ಈಗಾಗಲೇ ಕುಡಿಯುವ ನೀರು ಹಾಗೂ ಮೇವಿನ ಅಭಾವ ಕಂಡು ಬಂದಿದೆ. ತಾಲ್ಲೂಕಿನ ಎರಡು ಗ್ರಾಮಗಳಿಗೆ ಟ್ಯಾಂಕರ್‌ ನೀರು ಒದಗಿಸಲಾಗುತ್ತಿದೆ. ಬರ ನಿರ್ವಹಣೆಗೆ ಅನುದಾನವಿದ್ದು ಕಠಿಣ ಸ್ಥಿತಿ ಬಂದರೂ ಎದುರಿಸಲು ತಾಲ್ಲೂಕು ಆಡಳಿತ ಸನ್ನದ್ಧವಾಗಿದೆ.

– ಸಿ.ಜಿ.ಗೀತಾ ತಹಶೀಲ್ದಾರ್‌

ತಾಲ್ಲೂಕಿನಲ್ಲಿ 48577 ಹಸು 8513 ಎಮ್ಮೆ 178935 ಕುರಿ ಹಾಗೂ 52310 ಮೇಕೆಗಳಿವೆ. ಬೋರನಕಣಿವೆ ಜಲಾಶಯ ಅಚ್ಚುಕಟ್ಟು ಪ್ರದೇಶದಲ್ಲಿ ಮೇವು ಬೆಳೆಯಲು ಬೀಜ ವಿತರಿಸಲಾಗಿದೆ. ಕೊಳವೆ ಬಾವಿ ಹೊಂದಿರುವ ರೈತರಿಗೂ ಮೇವಿನ ಬೀಜ ನೀಡಲಾಗುತ್ತಿದೆ.

–ರೆ.ಮಾ.ನಾಗಭೂಷಣ ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ

ಕುಡಿಯಲು ಟ್ಯಾಂಕರ್‌ ನೀರು ಪೂರೈಕೆ

ತಾಲ್ಲೂಕು ವ್ಯಾಪ್ತಿಯ 12 ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಗ್ರಾಮ ಪಂಚಾಯಿತಿ ಸ್ಥಳೀಯ ಆಡಳಿತ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸುತ್ತಿದೆ. ಟ್ಯಾಂಕರ್‌ ನೀರು ಸಹ ದುಬಾರಿಯಾಗಿದ್ದು ₹600ಕ್ಕೆ ಲಭ್ಯವಾಗುತ್ತಿದ್ದ ನೀರು ಏಕಾಏಕಿ ₹1000ಕ್ಕೆ ಏರಿದೆ. ರೈತರು ತಮ್ಮ ಅಡಿಕೆ ತೋಟಗಳಿಗೆ ನೀರುಣಿಸಲು ಮುಂದಾಗಿರುವುದು ದರ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ. ಕೆಲ ರೈತರು ಟ್ಯಾಂಕರ್‌ಗಳನ್ನು ಬಾಡಿಗೆ ಪಡೆದು ಟ್ರ್ಯಾಕ್ಟರ್‌ ಮೂಲಕ ನೀರು ಸರಬರಾಜು ಮಾಡಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT