ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಜೆಡಿಎಸ್‌ಗೆ ಬಿಜೆಪಿ ಕ್ಷೇತ್ರ ಬಿಟ್ಟು ಕೊಡುವುದೆ ಬಿಜೆಪಿ?

Published 10 ಸೆಪ್ಟೆಂಬರ್ 2023, 6:38 IST
Last Updated 10 ಸೆಪ್ಟೆಂಬರ್ 2023, 6:38 IST
ಅಕ್ಷರ ಗಾತ್ರ

ತುಮಕೂರು: ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ– ಜೆಡಿಎಸ್ ಮೈತ್ರಿಯ ಮಾತುಗಳು ಕೇಳಿ ಬಂದಿದ್ದು, ಹಾಲಿ ಬಿಜೆಪಿ ಸಂಸದ ಇರುವ ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದು ಹೇಗೆ ಎಂಬ ಚರ್ಚೆಗಳು ಪಕ್ಷದ ವಲಯದಲ್ಲಿ ಆರಂಭವಾಗಿವೆ.

ಎರಡು ಪಕ್ಷಗಳ ನಾಯಕರ ನಡುವೆ ನಡೆದಿರುವ ಮೈತ್ರಿ ಮಾತುಕತೆಯ ಸಮಯದಲ್ಲಿ ತುಮಕೂರು ಕ್ಷೇತ್ರವನ್ನು ನಮಗೆ ಬಿಟ್ಟುಕೊಡುವಂತೆ ದಳಪತಿಗಳು ಬೇಡಿಕೆ ಸಲ್ಲಿಸಿದ್ದಾರೆ. ಇದಕ್ಕೆ ಒಪ್ಪಿದರೆ ಹಾಲಿ ಸಂಸದರು ಇರುವ ಕ್ಷೇತ್ರವನ್ನು ಬಿಟ್ಟುಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ಇದಕ್ಕೆ ಸ್ಥಳೀಯ ಮುಖಂಡರು, ಕಾರ್ಯಕರ್ತರಿಂದಲೂ ವಿರೋಧ ವ್ಯಕ್ತವಾಗಬಹುದು ಎಂದು ಹೇಳಲಾಗುತ್ತಿದೆ.

2019ರಲ್ಲಿ ನಡೆದ ಲೋಕಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್– ಜೆಡಿಎಸ್ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದವು. ಕಳೆದ ಬಾರಿಯ ಮೈತ್ರಿಯಲ್ಲೂ ದಳಪತಿಗಳು ಕ್ಷೇತ್ರವನ್ನು ಬಿಟ್ಟುಕೊಟ್ಟಿರಲಿಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸ್ಪರ್ಧಿಸಿ ಪರಾಭವಗೊಂಡರು. ಈ ಸಲ ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡು ಸ್ಪರ್ಧಿಸಿದರೆ ಮತ್ತೊಮ್ಮೆ ಜೆಡಿಎಸ್‌ಗೆ ಅವಕಾಶ ಸಿಕ್ಕಂತಾಗುತ್ತದೆ. ಕಳೆದ ಬಾರಿ ಬಿಜೆಪಿ ಎದುರಾಳಿಯಾಗಿದ್ದರೆ, ಈ ಸಲ ಕಾಂಗ್ರೆಸ್ ಪ್ರತಿಸ್ಪರ್ಧಿಯಾಗಲಿದೆ.

ಜೆಡಿಎಸ್ ಭದ್ರಕೋಟೆ

ಜಿಲ್ಲೆ, ಜೆಡಿಎಸ್ ಭದ್ರಕೋಟೆಯಾಗಿದ್ದರೂ ಲೋಕಸಭೆ ಚುನಾವಣೆಯಲ್ಲಿ ಸಿ.ಎನ್.ಭಾಸ್ಕರಪ್ಪ (1996) ಆಯ್ಕೆಯ ನಂತರ ಕಾಂಗ್ರೆಸ್– ಬಿಜೆಪಿ ನಡುವೆಯೇ ಹಣಾಹಣಿ ನಡೆದುಕೊಂಡು ಬಂದಿದೆ. ವಿಧಾನಸಭೆ, ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಶಕ್ತಿಯುತವಾಗಿದ್ದರೂ ಲೋಕಸಭೆಯಲ್ಲಿ ಗೆಲುವು ಸಾಧಿಸಿದ್ದು ಕಡಿಮೆ. 2019ರ ಲೋಕಸಭೆ ಚುನಾವಣೆ ಸಮಯದಲ್ಲಿ ತುಮಕೂರು ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್– 3, ಬಿಜೆಪಿ– 4, ಕಾಂಗ್ರೆಸ್– 1 ಶಾಸಕರನ್ನು ಹೊಂದಿತ್ತು. ಪ್ರಸ್ತುತ ಜೆಡಿಎಸ್ ಶಾಸಕರ ಸಂಖ್ಯೆ ಎರಡಕ್ಕೆ ಇಳಿದಿದ್ದರೆ, ಬಿಜೆಪಿ ನಾಲ್ಕರಿಂದ ಎರಡಕ್ಕೆ ಕುಸಿದಿದ್ದು, ಕಾಂಗ್ರೆಸ್ ತನ್ನ ಶಕ್ತಿಯನ್ನು ನಾಲ್ಕಕ್ಕೆ ಹೆಚ್ಚಿಸಿಕೊಂಡಿದೆ. ಪ್ರಸ್ತುತ ಜೆಡಿಎಸ್, ಬಿಜೆಪಿ ತಲಾ ಇಬ್ಬರು ಶಾಸಕರನ್ನು ಹೊಂದಿದ್ದರೂ ತಳ ಮಟ್ಟದಲ್ಲಿ ಜೆಡಿಎಸ್ ಬೇರುಗಳು ಇನ್ನೂ ಗಟ್ಟಿಯಾಗಿವೆ.

ಮತ ಲೆಕ್ಕಾಚಾರ

ಮೇನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭೆ ಕ್ಷೇತ್ರಗಳಲ್ಲಿ (ತುಮಕೂರು ನಗರ, ಗ್ರಾಮಾಂತರ, ಕೊರಟಗೆರೆ, ಮಧುಗಿರಿ, ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ಗುಬ್ಬಿ) ಜೆಡಿಎಸ್ ಅಭ್ಯರ್ಥಿಗಳು ಒಟ್ಟು 4.69 ಲಕ್ಷ ಮತಗಳನ್ನು ಪಡೆದು ಇತರೆ ಪಕ್ಷಗಳಿಗಿಂತ ಮುಂದಿದ್ದಾರೆ. ಕಾಂಗ್ರೆಸ್ 4.35 ಲಕ್ಷ, ಬಿಜೆಪಿ 4.13 ಲಕ್ಷ ಮತಗಳನ್ನು ಪಡೆದುಕೊಂಡಿದ್ದು, ತೃತೀಯ ಸ್ಥಾನದಲ್ಲಿದೆ. ಈ ಮತ ಲೆಕ್ಕಾಚಾರದ ಮೇಲೆ ದಳಪತಿಗಳು ತುಮಕೂರು ಕ್ಷೇತ್ರವನ್ನು ತಮಗೆ ಬಿಟ್ಟುಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ಮೂಗಳು ತಿಳಿಸಿವೆ.

ಸ್ಥಳೀಯರ ಬೆಂಬಲ ಸಿಗುವುದೆ

ಕಳೆದ ಬಾರಿ ಕಾಂಗ್ರೆಸ್– ಜೆಡಿಎಸ್ ಮೈತ್ರಿ ಮಾಡಿಕೊಂಡು ಎಚ್.ಡಿ.ದೇವೇಗೌಡ ಸ್ಪರ್ಧಿಸಿದ್ದರೂ ಸ್ಥಳೀಯವಾಗಿ ಕಾಂಗ್ರೆಸ್ ನಾಯಕರು ಬೆಂಬಲ ನೀಡಲಿಲ್ಲ. ಗೆಲ್ಲಿಸುವುದಕ್ಕಿಂತ ಸೋಲಿಸಲು ಹೆಚ್ಚು ಶ್ರಮ ಹಾಕಿದ್ದರು ಎಂಬ ಆರೋಪ ಸಾಮಾನ್ಯವಾಗಿತ್ತು. ಈ ಬಾರಿ ಜೆಡಿಎಸ್‌ ಅಭ್ಯರ್ಥಿ ಸ್ಪರ್ಧಿಸಿದರೆ ಬಿಜೆಪಿ ಸ್ಥಳೀಯ ನಾಯಕರಿಂದ ಬೆಂಬಲ ಸಿಗುವುದೆ? ಕಾಂಗ್ರೆಸ್ ನಾಯಕರಂತೆ ಬಿಜೆಪಿ ನಾಯಕರು ಕೈ ಕೊಟ್ಟರೆ? ಎಂಬ ಆತಂಕ ದಳಪತಿಗಳನ್ನು ಕಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT