ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮವಿಶ್ವಾಸವೇ ಬದುಕಿನ ಜೀವ ಸೆಲೆ: ನ್ಯಾಯಾಧೀಶರಾದ ಬಿ.ಎಲ್.ಜಿನರಾಳ್ಕರ್

ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮ
Last Updated 15 ಸೆಪ್ಟೆಂಬರ್ 2018, 12:33 IST
ಅಕ್ಷರ ಗಾತ್ರ

ತುಮಕೂರು: ‘ಜೀವನದಲ್ಲಿ ಎಂದಿಗೂ ಹತಾಶರಾಗಬಾರದು. ಆತ್ಮವಿಶ್ವಾಸವೇ ಬದುಕಿನ ಜೀವ ಸೆಲೆಯಾಗಿದ್ದು, ಸಕಾರಾತ್ಮಕ ಚಿಂತನೆ ಅಳವಡಿಸಿಕೊಂಡು ಸುಂದರ ಜೀವನ ನಡೆಸಬೇಕು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಎಲ್.ಜಿನರಾಳ್ಕರ್ ಹೇಳಿದರು.

ಜಿಲ್ಲಶ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸ್ನೇಹ ಮನೋವಿಕಾಸ ಕೇಂದ್ರದ ಆಶ್ರಯದಲ್ಲಿ ಆಯೋಜಿಸಿದ್ಧ ‘ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

’ಬಡತನ, ನಿರುದ್ಯೋಗ, ಸಾಲ, ಪ್ರೇಮ ವೈಫಲ್ಯ, ಸಾಂಸಾರಿಕ ಸಮಸ್ಯೆಗಳಿಂದ ಖಿನ್ನತೆಗೆ ಶರಣಾಗುತ್ತಿದ್ದಾರೆ. ಖಿನ್ನತೆಯು ಅಡಾಲ್ಫ್ ಹಿಟ್ಲರ್‌ ಸೇರಿದಂತೆ ಜಗದ್ವಿಖ್ಯಾತ ನಾಯಕರನ್ನು ಬಿಟ್ಟಿಲ್ಲ. ಈಚೆಗೆ ಐಎಎಸ್, ಐಪಿಎಸ್, ಚಿತ್ರನಟರು ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ, ಖಿನ್ನತೆಗೊಳಗಾಗಬಾರದು’ ಎಂದು ಹೇಳಿದರು.

ಪುರಂದರ ದಾಸರು ಹೇಳಿದಂತೆ ಮಾನವ ಜನ್ಮ ದೊಡ್ಡದು. ಅದನ್ನು ಹಾನಿ ಮಾಡಿಕೊಳ್ಳಬಾರದು, ಜನಿಸಿದ ಮೇಲೆ ಏನನ್ನಾದರೂ ಸಾಧಿಸಬೇಕು. ಸಮಾಜದ ಒಳಿತಿಗೆ ಉತ್ತಮ ಕೆಲಸ ಮಾಡಬೇಕು ಎಂದು ತಿಳಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಪ್ರತಿ ವರ್ಷ 10 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ನಮ್ಮ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇರುವುದು ಕಳವಳಕಾರಿ ಸಂಗತಿ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಮಾತನಾಡಿ,‘ ತೀವ್ರ ಒತ್ತಡ ಮತ್ತು ಹತಾಶೆ ಮನೋಭಾವದಿಂದ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ವಿದ್ಯಾರ್ಥಿಗಳ ಮೇಲೆ ಪೋಷಕರು ಹೆಚ್ಚಿನ ಒತ್ತಡ ಹೇರಬಾರದು. ಬದಲಾಗಿ ಅವರ ಭಾವನೆಗಳಿಗೆ ಸ್ಪಂದಿಸಿ ನಡೆದುಕೊಳ್ಳಬೇಕು ಎಂದು ತಿಳಿಸಿದರು.

ಸ್ನೇಹ ಮನೋವಿಕಾಸ ಕೇಂದ್ರದ ಮಾನಸಿಕ ರೋಗ ತಜ್ಞ ಡಾ.ಲೋಕೇಶ್ ಬಾಬು ಉಪನ್ಯಾಸ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಆರ್.ಚಂದ್ರಿಕಾ, ಪ್ರಭಾರ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರ ಉಪನಿರ್ದೇಶಕ ನಟರಾಜ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಿ.ಮಂಜುನಾಥ್, ಕುಷ್ಠರೋಗ ಮತ್ತು ಮಾನಸಿಕ ರೋಗ ನಿವಾರಣಾಧಿಕಾರಿ ಡಾ.ಎಂ.ಚೇತನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT