ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಗೊಂದಲ ಸರಿಪಡಿಸಿ

ಜಿಲ್ಲಾ ಪಂಚಾಯಿತಿ ವಿಶೇಷ ಸಭೆ: ₹ 519 ಕೋಟಿ ಅನುದಾನಕ್ಕೆ ಅನುಮೋದನೆ
Last Updated 21 ಆಗಸ್ಟ್ 2019, 14:09 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಬುಧವಾರ ನಡೆದ ವಿಶೇಷ ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ₹ 519.72 ಕೋಟಿ ಅನುದಾನ ಹಂಚಿಕೆಯ ಲಿಂಕ್ ಡಾಕ್ಯುಮೆಂಟ್‌ಗೆ ಸರ್ವಾನುಮತದಿಂದ ಅನುಮೋದನೆ ನೀಡಲಾಯಿತು.

ನಾಲ್ಕನೇ ಹಣಕಾಸು ಆಯೋಗದ ಶಿಫಾರಸ್ಸಿನ ಅನ್ವಯ ನಿಗದಿಯಾಗಿರುವ ₹ 6.93 ಕೋಟಿ ಅನುದಾನದ ಕ್ರಿಯಾ ಯೋಜನೆ ತಯಾರಿಸಿ ಅನುಷ್ಠಾನಗೊಳಿಸಲು ಅನುಮತಿ ನೀಡಲಾಯಿತು.

ಅನುದಾನದ ಅನುಮೋದನೆಯ ಬಳಿಕ ಸದಸ್ಯರಾದ ಕೆಂಚಮಾರಯ್ಯ, ವೇತನಗಳಿಗೆ ಶೇ 58ರಷ್ಟು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಶೇ 42ರಷ್ಟು ಮಾತ್ರ ಅನುದಾನ ಮೀಸಲಿಡಲಾಗಿದೆ. ಅದನ್ನು ಸಕಾಲಕ್ಕೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಸದಸ್ಯರಾದ ತಿಮ್ಮಣ್ಣ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿಗಳು ತ್ವರಿತ ಗತಿಯಲ್ಲಿ ನಡೆಯುತ್ತಿಲ್ಲ. ಶೇ 18 ರವರೆಗೂ ಕಮಿಷನ್‌ ಪಡೆದು ಬಿಲ್‌ಗಳನ್ನು ಪಾಸ್‌ ಮಾಡುವ ಅಧಿಕಾರಿಗಳು ಇದ್ದಾರೆ. ಇದರಿಂದ ಸಣ್ಣ ಗುತ್ತಿಗೆದಾರರಾಗಿರುವ ನಮ್ಮ ಕಾರ್ಯಕರ್ತರಿಗೆ ತೊಂದರೆ ಆಗುತ್ತಿದೆ ಎಂದು ದೂರಿದರು.

ಕಾಮಗಾರಿಗಳ ಬಿಲ್‌ ಪಾಸ್‌ ಮಾಡುವಾಗ ಮತ್ತು ಬೇಕಾದ ಸಾಮಗ್ರಿಗಳ ಖರೀದಿ ವೇಳೆ ಗುತ್ತಿಗೆದಾರರ ಮೇಲೆ ಜಿ.ಎಸ್‌.ಟಿ. ಹೊರೆ ಬೀಳುತ್ತಿದೆ. ಈ ತೆರಿಗೆ ಕಡಿತದಲ್ಲಿ ಬಹಳಷ್ಟು ಗೊಂದಲಗಳಿವೆ. ಅದನ್ನು ಪರಿಹರಿಸಿ ಎಂದು ಬಹುತೇಕ ಸದಸ್ಯರು ಒತ್ತಾಯಿಸಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳು, ₹ 2.50 ಲಕ್ಷದ ವರೆಗಿನ ಕಾಮಗಾರಿಗಳಿಗೆ ಜಿ.ಎಸ್‌.ಟಿ. ಅನ್ವಯ ಆಗುವುದಿಲ್ಲ ಎಂದು ಉತ್ತರ ನೀಡಿ ಅವರನ್ನು ಸಮಾಧಾನ ಪಡಿಸಿದರು.

ಅಂಗನವಾಡಿ, ಶಾಲೆಗಳಲ್ಲಿ ಮಕ್ಕಳಿಂದ ಸ್ವಚ್ಛತಾ ಕೆಲಸ ಮಾಡಿಸಬಾರದು. ಸಿಬ್ಬಂದಿಯನ್ನು ನಿಯೋಜಿಸಬೇಕು. ಶಾಲಾ ಜಮೀನುಗಳಿಗೆ ಖಾತೆ ಮಾಡಿಸಿಕೊಡಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳೀಯ ಪಿಡಿಒ ಮತ್ತು ತಹಶೀಲ್ದಾರ ಅವರೊಂದಿಗೆ ಸಮನ್ವಯ ಸಾಧಿಸಿಕೊಂಡು ಶಾಲಾ ಜಮೀನುಗಳ ದಾಖಲೆ ಪತ್ರಗಳನ್ನು ಹುಡುಕಿಸಿ, ಖಾತೆ ಮಾಡಿಸಿ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಸೂಚಿಸಿದರು.

ಎರಡು ತಾಸು ತಡವಾಗಿ ಸಭೆ ಆರಂಭ: ಬೆಳಿಗ್ಗೆ 11ಕ್ಕೆ ಸಭೆ ಆರಂಭ ಆಗಬೇಕಿತ್ತು. ಕೋರಂ ಕೊರತೆಯ ಕಾರಣಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಾದು ಕುಳಿತರು.

ಈ ವೇಳೆ ಸದಸ್ಯರಾದ ವೈ.ಎಚ್‌.ಹುಚ್ಚಯ್ಯ ಅವರು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರ ಪರಿಚಯ ಮಾಡುತ್ತ, ಅವರಿಗೆ ಸನ್ಮಾನ ಮಾಡಲು ಮುಂದಾದರು.

ಅಧಿಕೃತವಾಗಿ ಸಭೆ ಆರಂಭ ಆಗದೆ ಹುಚ್ಚಯ್ಯ ಅವರು ಯಾವುದೇ ವಿಷಯವನ್ನು ಸಭೆಯಲ್ಲಿ ಪ್ರಸ್ತಾಪ ಮಾಡಬಾರದು ಎಂದು ಇತರೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಹುಚ್ಚಯ್ಯ ಹಾಗೂ ಮತ್ತೊಬ್ಬ ಸದಸ್ಯರಾದ ಪಾಪಣ್ಣ ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಕೈ–ಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು. ಕೆಲವು ಸದಸ್ಯರು ಅವರನ್ನು ಸಮಾಧಾನ ಪಡಿಸಿದರು.

ಈ ನಡುವೆಯೂ ಹುಚ್ಚಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ಪತ್ರಾಂಕಿತ ಅಧಿಕಾರಿ ಎನ್‌.ಡಿ.ಅನಂತರಾಜು ಅವರು ಸ್ವಂತ ಖರ್ಚಿನಲ್ಲಿ ಹಾಗೂ ಸಂಘ–ಸಂಸ್ಥೆಗಳ ಸಹಕಾರದಿಂದ 15 ಸಾವಿರಕ್ಕೂ ಹೆಚ್ಚು ನೋಟ್‌ಬುಕ್‌ಗಳನ್ನು ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸಿದ್ದಾರೆ. ಇವರ ಕಾರ್ಯ ಅನುಕರಣೀಯ ಎಂದು ಶ್ಲಾಘಿಸಿ, ಸಭಾಂಗಣ ವೇದಿಕೆಯಲ್ಲಿಯೇ ಸನ್ಮಾನಿಸಿದರು.

ಮಧ್ಯಾಹ್ನ 1.05ರ ಹೊತ್ತಿಗೆ ಕೋರಂಗೆ ಬೇಕಾಗುವಷ್ಟು ಸದಸ್ಯರು ಹಾಜರಾದ ಬಳಿಕ ಸಭೆ ಆರಂಭವಾಯಿತು.

ಅನಂತರಾಜು ಅವರ ಸನ್ಮಾನಕ್ಕೆ ಪಂಚಾಯಿತಿ ಅಧ್ಯಕ್ಷೆ ಎಂ.ಲತಾ ರವಿಕುಮಾರ್‌ ಅವರು ಅನುಮತಿ ನೀಡಿರಲಿಲ್ಲ. ಹಾಗಾಗಿ ಅಸಮಾಧಾನ ಹೊರಹಾಕಿದರು. ಕೆಲ ಸಮಯ ಬಳಿಕ, ಅಧ್ಯಕ್ಷೆ, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಮತ್ತು ಸಿಇಒ ಶುಭಾ ಕಲ್ಯಾಣ ಅವರಿಂದ ಅನಂತರಾಜು ಅವರಿಗೆ ಅದೇ ಹಾರ ಮತ್ತು ಫಲಾಹಾರದಿಂದ ಎರಡನೇ ಬಾರಿಗೆ ಸನ್ಮಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT