ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿಗಲ್ ಪೌರಸೇವಾ ನೌಕರರ ಮುಷ್ಕರ ಅಂತ್ಯ

Last Updated 4 ಅಕ್ಟೋಬರ್ 2012, 8:10 IST
ಅಕ್ಷರ ಗಾತ್ರ

ಕುಣಿಗಲ್: ಪುರಸಭೆ ಸದಸ್ಯರು-ಪೌರ ಸೇವಾ ನೌಕರರ ನಡುವಿನ ರಾಜಿ ಸಂಧಾನ ಸಭೆಯಲ್ಲಿ ವಾದ ವಿವಾದ, ಸಂಘರ್ಷ, ದೋಷಾರೋಪಣೆ ನಡುವೆ ನೌಕರರು ಪ್ರತಿಭಟನೆ ಹಿಂಪಡೆದು ಕೆಲಸಕ್ಕೆ ಹಾಜರಾದ ಘಟನೆ ನಡೆಯಿತು.

ಸೋಮವಾರ ಸದಸ್ಯ ಕೆ.ಎಲ್.ಹರೀಶ್ ವಿರುದ್ಧ ಪೌರ ನೌಕರರ ಪ್ರತಿಭಟನೆ ಆರಂಭಗೊಂಡಿತ್ತು. ಬುಧವಾರ, ಪೌರಸೇವಾ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಘವೇಂದ್ರ, ರಾಜ್ಯ ಪರಿಷತ್ ಸದಸ್ಯ ಗೋವಿಂದು, ತಹಶೀಲ್ದಾರ್ ಎನ್.ಸಿ.ಜಗದೀಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಲ್.ರಾಮಣ್ಣ, ಸಬ್‌ಇನ್ಸ್‌ಪೆಕ್ಟರ್ ಗುರುಪ್ರಸಾದ್, ಸಿಐಟಿಯು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮುನಾಫ್ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಲಾಯಿತು.

ಆರಂಭದಲ್ಲಿಯೇ ಚರ್ಚೆಗೆ ಬಿದ್ದ ಸದಸ್ಯರು ಮತ್ತು ಪೌರ ಕಾರ್ಮಿಕರು ಪರಸ್ಪರ ವಾಗ್ವಾದ ನಡೆಸಿದರು. ಇದರಿಂದ ಅಸಮಧಾನಗೊಂಡ ತಹಶೀಲ್ದಾರ್, ಪುರಸಭೆ ವ್ಯಾಪ್ತಿಯಲ್ಲಿ ಜನಪ್ರತಿನಿಧಿ ಮತ್ತು ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ವೈಯುಕ್ತಿಕ ಪ್ರತಿಷ್ಠೆ ಸಾಧಿಸಿಕೊಳ್ಳಲು ಸಮಸ್ಯೆ ಸೃಷ್ಟಿಸುವ ಪರಿಪಾಠ ಬಿಟ್ಟು, ನಾಗರಿಕರ ಮತ್ತು ಅಗತ್ಯ ಸೇವಾ ಕಾರ್ಯಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕೆಂದು ಸಲಹೆ ನೀಡಿ ಕೂಡಲೇ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದರು.

ಸಭೆಯಲ್ಲಿ ಹಾಜರಿದ್ದ ಸದಸ್ಯರು ಮತ್ತು ಮುಖಂಡರು ಸತತ ಮೂರು ಬಾರಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಅನುಭವವಿರುವ ಸದಸ್ಯ ಕೆ.ಎಲ್.ಹರೀಶ್ ಸಾರ್ವಜನಿಕ ಕೆಲಸಕ್ಕಾಗಿ ಆಗ್ರಹಿಸಿ ಮಾತಿನ ಚಕಮಕಿ ನಡೆಸಿರಬಹುದೇ ವಿನಾಃ ಜಾತಿ ನಿಂದನೆ ಮಾಡುವಂಥ ವ್ಯಕ್ತಿಯಲ್ಲ ಎಂದು ಸಮರ್ಥಿಸಿಕೊಂಡರು.
 
ಇದರಿಂದ ಅಸಮಧಾನಗೊಂಡ ವ್ಯವಸ್ಥಾಪಕ ಗುಬ್ಬಿಹನುಮಂತಪ್ಪ, ಎಲ್ಲ ನೌಕರರರನ್ನು ಸಾಮೂಹಿಕ ವರ್ಗಾವಣೆ ಮಾಡುವಂತೆ ಆಗ್ರಹಿಸಿದರು. ಇದರಿಂದ ಕೋಪಗೊಂಡ ತಹಶೀಲ್ದಾರ್ ಕಚೇರಿಯಲ್ಲಿರುವವರೆವಿಗೂ ವರ್ಗಾವಣೆ ವಿಚಾರದ ಬದಲು ಕೆಲಸ ಮಾಡುವದನ್ನು ಮೊದಲು ಕಲಿಯಿರಿ ಎಂದು ಕಿವಿ ಹಿಂಡಿದರು.

ಮಹಿಳಾ ನೌಕರರೊಬ್ಬರು, ಸದಸ್ಯರು ತಮ್ಮನ್ನು ಕೀಳಾಗಿ ಕಾಣುತ್ತಾರೆ ಎಂದಾಗ, ಕೋಪಗೊಂಡ ಎಲ್ಲ ಸದಸ್ಯರು ಅಂತಹವರ ಹೆಸರನ್ನು ಹೇಳುವಂತೆ ಆಗ್ರಹಿಸಿದಾಗ ಗಾಬರಿಗೊಂಡ ಮಹಿಳಾ ನೌಕರರು ಜಾಗ ಖಾಲಿ ಮಾಡಿದರು.

ಇದನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದ ವ್ಯವಸ್ಥಾಕರು ಬೆಳಗ್ಗೆ ಎಂಟಕ್ಕೆ ಕಚೇರಿಗೆ ಹಾಜರಾಗಿ ಕೆಲಸ ಕಾರ್ಯಗಳಲ್ಲಿ ವಿನಾಃ ಕಾರಣ ಮೂಗು ತೂರಿಸುವ ಸದಸ್ಯರು ಬಿಟ್ಟರೆ, ರಾತ್ರಿ ಎಂಟಕ್ಕೆ ಹಾಸಿಗೆ ದಿಂಬು ಸಮೇತ ಕಚೇರಿಗೆ ಬಂದು ಮಲಗುತ್ತಾರೆ ಎಂದಾಗ, ಅಧ್ಯಕ್ಷರು ಸದಸ್ಯರೂ ಸೇರಿದಂತೆ ನೂರಾರು ಬೆಂಬಲಿಗರು ಆಕ್ರೋಶಗೊಂಡು ಗುಬ್ಬಿಹನುಮಂತಪ್ಪನವರ ಮೇಲೆ ಹಲ್ಲೆಗೆ ಮುಂದಾದರು.

ಪರಿಸ್ಥಿತಿ ವಿಕೋಪವನ್ನು ಅರಿತ ತಹಶೀಲ್ದಾರ್, ಪಿಎಸ್‌ಐ ಗುರುಪ್ರಸಾದ್, ಸಂಘದ ಮುಖಂಡರು ಬೆಂಬಲಿಗರನ್ನು ಸಮಾಧಾನಿಸಿ ಪರಿಸ್ಥಿತಿ ಹತೋಟಿಗೆ ತಂದರು. ಈ ಘಟನೆಯಿಂದ ವಿಚಲಿತಗೊಂಡ ಸ್ಥಳೀಯ ಪೌರಸೇವಾ ನೌಕರರ ಸಂಘದ ಅಧ್ಯಕ್ಷ ನಾಗರಾಜ್, ಪುರಸಭಾ ಸದಸ್ಯರು ಹಾಗೂ ವ್ಯವಸ್ಥಾಪಕರ ವಿವಾದವನ್ನು ಅವರೇ ಬಗೆಹರಿಸಿಕೊಳ್ಳಲಿ, ನಾವು ಈ ಕೂಡಲೇ ಪ್ರತಿಭಟನೆ ನಿಲ್ಲಿಸಿ, ಕರ್ತವ್ಯಕ್ಕೆ ಹಾಜರಾಗುವುದಾಗಿ ಘೋಷಿಸಿ ವಿವಾದಕ್ಕೆ ತೆರೆ ಎಳೆದರು.

ಕೆಲಸಕ್ಕೆ ಅಡ್ಡಿ: ಉದ್ವಿಗ್ನ

ಕುಣಿಗಲ್: ಪಟ್ಟಣದ ಪೌರಸೇವಾ ನೌಕರರು ಸದಸ್ಯರ ವಿರುದ್ಧದ ಪ್ರತಿಭಟನೆ ಮುಂದುವರೆಸಿದ್ದು, ಕಸ ಶೇಖರಣೆಗಾಗಿ ತೆರಳುತ್ತಿದ್ದ ಟ್ರ್ಯಾಕ್ಟರ್‌ನ್ನು ತಡೆದಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಘಟನೆ ಬುಧವಾರ ನಡೆದಿದೆ.

ಪೌರಸೇವಾ ನೌಕರರು ಪ್ರತಿಭಟನೆ ನಡೆಸುತ್ತಿರುವುದರಿಂದ ಪಟ್ಟಣದಲ್ಲಿ ಕಸ ಹೆಚ್ಚಿದ್ದು, ವಿಲೇವಾರಿ ಮಾಡಿಸುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು ಎನ್ನಲಾಗಿದೆ. ಕಸ ವಿಲೇವಾರಿಗಾಗಿ ಗುತ್ತಿಗೆದಾರರು ಟ್ರ್ಯಾಕ್ಟರ್ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭ, ವಾಹನ ಅಡ್ಡಗಟ್ಟಿದ ರಾಜ್ಯ ಕಾರ್ಯಾಧ್ಯಕ್ಷರ ನೇತೃತ್ವದ ಪ್ರತಿಭಟನಾ ನಿರತರು ಬೀಗದ ಕೈಗಳನ್ನು ಕಿತ್ತುಕೊಂಡು ಟೈರ್‌ಗಳನ್ನು ಪಂಕ್ಚರ್ ಮಾಡಿದರು.

ಇದರಿಂದ ಆಕ್ರೋಶಗೊಂಡ ಗುತ್ತಿಗೆದಾರ ನಾರಾಯಣ್ ಮತ್ತು ಬೆಂಬಲಿಗರು ಹಾಗೂ ಪೌರಸೇವಾ ನೌಕರರ ನಡುವೆ ಮಾತಿನ ಚಕಮಕಿ ನಡೆದು ಘರ್ಷಣೆ ಹಂತಕ್ಕೆ ತಲುಪಿದ್ದು, ಮಧ್ಯಪ್ರವೇಶಿಸಿದ ಪುರಸಭೆ ಅಧ್ಯಕ್ಷೆ ನಳಿನಾ ಭೈರಪ್ಪ, ಉಪಾಧ್ಯಕ್ಷ ರಂಗಸ್ವಾಮಿ, ಪೌರಸೇವಾ ನೌಕರರ ಕಾರ್ಯ ಖಂಡಿಸಿ, ಗುತ್ತಿಗೆದಾರರ ಕೆಲಸಕ್ಕೆ ಅಡ್ಡಿಪಡಿಸಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದರಿಂದ ಪರಿಸ್ಥಿತಿ ಶಾಂತವಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT