ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಬ್ಬಿ ಬಳಿ ಕೇಂದ್ರೀಯ ವಿದ್ಯಾಲಯ

Last Updated 24 ಮೇ 2017, 6:35 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಗೆ ಮತ್ತೊಂದು ಕೇಂದ್ರೀಯ ವಿದ್ಯಾಲಯ ಮಂಜೂರಾಗುವ ಸಾಧ್ಯತೆಯಿದ್ದು, ಕೇಂದ್ರ  ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಗುಬ್ಬಿ ಸಮೀಪದ ಬಿದರೆಹಳ್ಳ ಕಾವಲ್‌ನಲ್ಲಿ ಎಚ್ಎಎಲ್ ಲಘು ಯುದ್ಧ ವಿಮಾನ ತಯಾರಿಕ ಘಟಕ ಆರಂಭವಾಗುವ ಹಿನ್ನೆಲೆಯಲ್ಲಿ ಕೇಂದ್ರೀಯ ವಿದ್ಯಾಲಯಕ್ಕೆ ಮಂಜೂರಾತಿ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.

ಇನ್ನೆರಡು ವರ್ಷಗಳಲ್ಲಿ ಎಚ್‌ಎಎಲ್ ಘಟಕ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಸುಮಾರು 3ರಿಂದ 4 ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ. ಕೇಂದ್ರೀಯ ವಿದ್ಯಾಲಯ ಆರಂಭಿಸಬೇಕಾದರೆ ಅಲ್ಲಿ ಕೇಂದ್ರ ಸ್ವಾಮ್ಯದ ಉದ್ಯಮ ಇರಬೇಕು. ಈ ಷರತ್ತು ಪೂರೈಸುವುದರಿಂದ ವಿದ್ಯಾಲಯ ಮಂಜೂರಾತಿಗೆ ತೊಂದರೆಯಾಗದು ಎಂದು ಹೇಳಲಾಗುತ್ತಿದೆ.

‘ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ ರಾಜ್‌ ಅವರು ಖುದ್ದು ಆಸಕ್ತಿ ವಹಿಸಿದ್ದಾರೆ. ಈಗಾಗಲೇ ಬಿದರೆಹಳ್ಳ ಕಾವಲ್‌ನ ಎಚ್‌ಎಎಲ್ ಘಟಕಕ್ಕೆ ಅಂಟಿಕೊಂಡಂತೆ ಹತ್ತು ಎಕರೆ ಸರ್ಕಾರಿ ಜಾಗವನ್ನು ಗುರುತಿಸುವಂತೆ ಗುಬ್ಬಿ ತಹಶೀಲ್ದಾರ್‌ ಅವರಿಗೆ ಸೂಚಿಸಿದ್ದಾರೆ. ಕೇಂದ್ರ  ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಎಚ್‌ಎಎಲ್‌ ಘಟಕದವರು ಪ್ರತ್ಯೇಕವಾಗಿ ಶಾಲೆ ಆರಂಭಿಸಲು ಅವಕಾಶವಿದೆ. ಆದರೆ ಈ ಶಾಲೆಯಲ್ಲಿ ಘಟಕದ ಕಾರ್ಮಿಕರ ಮಕ್ಕಳಿಗೆ ಮಾತ್ರ ಅವಕಾಶ ಇರಲಿದೆ. ಆದರೆ ಕೇಂದ್ರೀಯ ವಿದ್ಯಾಲಯ ಆರಂಭವಾದರೆ ಆರ್‌ಟಿಇ ಅಡಿ ಸುತ್ತಲಿನ ಹಳ್ಳಿಗಳ ಮಕ್ಕಳಿಗೂ ಅನುಕೂಲವಾಗಲಿದೆ’ ಎಂದು ವಿಶ್ಲೇಷಿಸಿದರು.

‘ಎಚ್‌ಎಎಲ್ ಘಟಕ ಸ್ಥಾಪನೆ ಬೇಡಿಕೆಯ ಜತೆಗೆ ಕೇಂದ್ರೀಯ ವಿದ್ಯಾಲಯದ ಬೇಡಿಕೆಯನ್ನು ಮುಂದಿಟ್ಟಿದ್ದೆವು. ಘಟಕದ ಭೂ ಸಂತ್ರಸ್ತ ಕುಟುಂಬದ ಮಕ್ಕಳಿಗೆ ಇದರಿಂದ ಅನುಕೂಲವಾಗಲಿದೆ’ ಎಂದು ಅಭಿವೃದ್ಧಿ ರೆವುಲ್ಯೂಷನ್ ಫೋರಂನ ಕುಂದರನಹಳ್ಳಿ ರಮೇಶ್‌ ಹೇಳಿದರು.

‘ಇದು ಒಳ್ಳೆಯ ಬೆಳವಣಿಗೆಯಾಗಿದೆ. ಆದಷ್ಟು ಬೇಗ ಶಾಲೆ ಆರಂಭವಾಗಬೇಕು. ಇದರಿಂದ ಗ್ರಾಮಾಂತರ ಪ್ರದೇಶದ ಮಕ್ಕಳಿಗೂ ಕೇಂದ್ರೀಯ ವಿದ್ಯಾಲಯದ ಸೌಲಭ್ಯ ಸಿಗಲಿದೆ’ ಎಂದು ರಂಗ ಸಂಘಟಕ ರಾಜೇಶ್‌ ಗುಬ್ಬಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT