ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆಯದ ರಾಹುಲ್ ಮ್ಯಾಜಿಕ್: ಅಮಿತ್ ಶಾ, ಮೋದಿ ಮೋಡಿ

Last Updated 16 ಮೇ 2018, 8:51 IST
ಅಕ್ಷರ ಗಾತ್ರ

ತುಮಕೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ಕಳೆದ ಬಾರಿಗಿಂತ ಒಂದು ಸ್ಥಾನ ಕಳೆದುಕೊಂಡಿದೆ. ಕಳೆದ ಬಾರಿ 4 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 3 ಸ್ಥಾನಕ್ಕೆ ಇಳಿದಿದೆ. ಅಲ್ಲದೇ ಶಿರಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಟಿ.ಬಿ.ಜಯಚಂದ್ರ, ಮಧುಗಿರಿ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಕೆ.ಎನ್.ರಾಜಣ್ಣ ಅವರಂತಹ ಘಟಾನುಘಟಿಗಳೇ ಮತದಾರ ಪ್ರಭು ಮಣೆ ಹಾಕಿಲ್ಲ. ಸಿದ್ಧರಾಮಯ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಬಿಟ್ಟರೆ 2ನೇ ಸ್ಥಾನದ ಹಿರಿಯ ನಾಯಕರೆಂದೇ ಪರಿಗಣಿಸಲ್ಪಟ್ಟ ಟಿ.ಬಿ.ಜಯಚಂದ್ರ ಸೋಲಿನ ರುಚಿ ನೋಡಿದ್ದಾರೆ.

ಮತ್ತೆ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ತಾವೇ ಮುಖ್ಯಮಂತ್ರಿ ಆಗುವುದು ಖಚಿತ ಎಂದು ಕೊರಟಗೆರೆ ಕ್ಷೇತ್ರದಲ್ಲಿ ಮತ್ತೊಮ್ಮೆ ಕಣಕ್ಕಿಳಿದಿದ್ದ ಡಾ.ಜಿ.ಪರಮೇಶ್ವರ್ ಅವರ ಬಗ್ಗೆ ಮತದಾರರು ಅನುಕಂಪ ತೋರಿ ಹೆಚ್ಚಿನ ಮತಗಳಲ್ಲಿ ಗೆಲ್ಲಿಸಿದ್ದಾರೆ. ಆದರೆ, ರಾಜ್ಯದಲ್ಲಿ ಪೂರ್ಣ ಬಹುಮತ ಪಡೆದು ಸರ್ಕಾರ ಮಾಡುವಷ್ಟು ಕಾಂಗ್ರೆಸ್ ಶಕ್ತಿ ಪಡೆಯಲಿಲ್ಲ!

ಅಭಿವೃದ್ಧಿ ವಿಚಾರಗಳನ್ನೇ ಮತದಾರರ ಮುಂದಿಟ್ಟಿದ್ದ ಮಧುಗಿರಿಯ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ರಾಜಣ್ಣ, ಶಿರಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಟಿ.ಬಿ.ಜಯಚಂದ್ರ ಅವರಿಗೆ ಮತದಾರರು ಒಲಿದಿಲ್ಲ. ಎರಡೂ ಕ್ಷೇತ್ರಗಳಲ್ಲಿ ಅನುಕಂಪವೇ ಬಹುತೇಕ ಕೆಲಸ ಮಾಡಿದ್ದು, ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದಾರೆ.

ಈ ಇಬ್ಬರೂ ಹಿರಿಯ ನಾಯಕರ ಸೋಲು ಪಕ್ಷಕ್ಕೆ ಜಿಲ್ಲೆಯಲ್ಲಿ ದೊಡ್ಡ ಪೆಟ್ಟನ್ನೇ ಕೊಟ್ಟಿದೆ. ಬಹಳ ವರ್ಷಗಳ ಬಳಿಕ ಜಿಲ್ಲಾ ಕೇಂದ್ರದಲ್ಲಿ ಕಳೆದ ಬಾರಿ ಗಟ್ಟಿ ನೆಲೆ ಕಂಡುಕೊಂಡಿದ್ದ ಕಾಂಗ್ರೆಸ್ ಅದನ್ನು ಉಳಿಸಿಕೊಳ್ಳುವಲ್ಲಿ ಮುಗ್ಗರಿಸಿದೆ.

ಅಭ್ಯರ್ಥಿ ಡಾ.ರಫೀಕ್ ಅಹಮದ್ ಅವರನ್ನು ಮತದಾರರು ಈ ಬಾರಿ ಕೈ ಹಿಡಿದಿಲ್ಲ.  ಅಮಿತ್ ಶಾ ಮತ್ತು ನರೇಂದ್ರ ಮೋಡಿ ಅವರು ನಗರಕ್ಕೆ ಬಂದು ಮಾಡಿದ ಮೋಡಿ, ಜಾತಿ ಲೆಕ್ಕಾಚಾರಗಳು ರಫೀಕ್ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿವೆ ಎಂದು ಹೇಳಲಾಗುತ್ತಿದೆ.

ನಡೆಯದ ರಾಹುಲ್ ಮ್ಯಾಜಿಕ್: ಚುನಾವಣೆ ಸಂದರ್ಭದಲ್ಲಿ ಜಿಲ್ಲೆಗೆ ಭೇಟಿ ನೀಡಿ ಪ್ರಚಾರ ಮಾಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮ್ಯಾಜಿಕ್ ಏನೂ ನಡೆದಿಲ್ಲ ಎಂದೇ ಹೇಳಬಹುದು. ಪಾವಗಡ, ಕುಣಿಗಲ್ ಕ್ಷೇತ್ರಕ್ಕೆ ರಾಹುಲ್ ಭೇಟಿ ನೀಡಿದ್ದರು. ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ.

ಆದರೆ, ತಿಪಟೂರು, ತುಮಕೂರು ನಗರ ಕ್ಷೇತ್ರದಲ್ಲಿ ರಾಹುಲ್ ಮ್ಯಾಜಿಕ್ ಫಲ ಕಂಡಿಲ್ಲ. ಈ ಎರಡೂ ಕಡೆ ಮತದಾರ ಪ್ರಭು ಬಿಜೆಪಿ ಅಭ್ಯರ್ಥಿಗಳ ಕೈ ಹಿಡಿದಿದ್ದಾರೆ.

ಜಿಲ್ಲೆಯಲ್ಲಿ ಕನಿಷ್ಠ 8–9 ಸ್ಥಾನಗಳನ್ನು ಗೆದ್ದೆ ಗೆಲ್ಲುತ್ತೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದ ಮುಖಂಡರು ಕೇವಲ 3 ಸ್ಥಾನಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ.

ಅಮಿತ್ ಶಾ, ಮೋದಿ ಮೋಡಿ: ಜಿಲ್ಲೆಯ 11 ಕ್ಷೇತ್ರಗಳಲ್ಲಿ ಕಳೆದ ಬಾರಿ ಕೇವಲ ಒಂದೇ ಒಂದು ಬಿಜೆಪಿ ಕ್ಷೇತ್ರದಲ್ಲಿ (ತುಮಕೂರು ಗ್ರಾಮಾಂತರ) ಗೆಲುವು ಸಾಧಿಸಿದ್ದ ಬಿಜೆಪಿ ಈ ಬಾರಿ 4 ಕಡೆ ಗೆಲುವು ಕಂಡಿದೆ. ತುಮಕೂರಿಗೆ ಪ್ರಧಾನಿ ನರೇಂದ್ರ ಮೋದಿ ಬಂದು ಪ್ರಚಾರ ಮಾಡಿದ್ದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ತಿಪಟೂರು, ತುರುವೇಕೆರೆ, ತುಮಕೂರು ನಗರ, ತುಮಕೂರು ಗ್ರಾಮಾಂತರ, ಕುಣಿಗಲ್, ತುರುವೇಕೆರೆ ಎಲ್ಲ ಕಡೆ ತೆರಳಿ ಪ್ರಚಾರ ಮಾಡಿದ್ದರು. ತುಮಕೂರಲ್ಲಿ ರೋಡ್ ಷೋ ನಡೆಸಿದ್ದರು.

ಹೀಗಾಗಿ 4 ಕಡೆ ಬಿಜೆಪಿ ಗೆಲುವಿನ ನಗೆ ಬೀರಿದ್ದು, ಅಮಿತ್ ಶಾ ಮತ್ತು ಮೋದಿ ಅವರು ಮಾಡಿದ ಮೋಡಿ ಯಶ ಕಂಡಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT