ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗೆ ತಪ್ಪಲಿಲ್ಲ ಹಾಹಾಕಾರ

Last Updated 25 ಮಾರ್ಚ್ 2011, 6:40 IST
ಅಕ್ಷರ ಗಾತ್ರ

ತುಮಕೂರು: ಮತ್ತೊಂದು ಬೇಸಿಗೆ ಬಂದಿದೆ. ಜಿಲ್ಲೆಯ ಪ್ರತಿಯೊಂದು ಊರಲ್ಲೂ, ನಗರ, ಪಟ್ಟಣಗಳ ಪ್ರತಿ ಮನೆಯಲ್ಲೂ ಮತ್ತದೆ ಗೋಳು.. ನೀರಿಲ್ಲ... ನೀರಿಲ್ಲ.
ನಲ್ಲಿಗಳ ಮುಂದೆ ಬರಿಗೊಡಗಳನ್ನಿಟ್ಟು ಇವತ್ತು, ನಾಳೆ, ನಾಡಿದ್ದು... ನೀರು ಬರಬಹುದು, ನೀರಿನ ದಾಹ ತಣಿಯಬಹುದು ಎಂದು ಚಾತಕಪಕ್ಷಿಯಂತೆ ಎದುರು ನೋಡುವ ಪರಿಸ್ಥಿತಿ ಮುಂದುವರಿದೇ ಇದೆ.

ಈಗಾಗಲೇ ತನ್ನ ಕೋಟಾದ ಅಂತರ್ಜಲವನ್ನು ಗೋರಿಕೊಂಡಿರುವ ತುಮಕೂರು ಜಿಲ್ಲೆ ‘ಡಾರ್ಕ್ ಜೋನ್’ ಪಟ್ಟಿ ಸೇರಿದೆ. ಯದ್ವತದ್ವಾ ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಯಲು ಸರ್ಕಾರದ ಅನುಮತಿ ಇಲ್ಲ. ಆಯಾ ಕ್ಷೇತ್ರಗಳ ಶಾಸಕರ ಅಧ್ಯಕ್ಷತೆಯಲ್ಲಿರುವ ಟಾಸ್ಕ್ ಫೋರ್ಸ್ ಒಪ್ಪಿದರೆ ಹಾಗೂ ತುರ್ತು ಅನಿವಾರ್ಯವಿದ್ದಲ್ಲಿ ಕೊಳವೆ ಬಾವಿ ಕೊರೆಯಬಹುದಷ್ಟೇ. ಇಡೀ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇನ್ನೂ ಶಾಶ್ವತ ಬರಪೀಡಿತ ಪಾವಗಡ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಎಷ್ಟಿರಬಹುದೆನ್ನುವುದನ್ನು ಉತ್ತರ ಪಿನಾಕಿನಿ ನದಿಯೇ ಸಾರಿ ಹೇಳುತ್ತಿದೆ.

ಬೇಸಿಗೆಯಲ್ಲಿ ಇನ್ನಷ್ಟು ತಾರರಕ್ಕೇರುವ ನೀರಿನ ತತ್ವಾರವನ್ನು ಬಗೆ ಹರಿಸುವುದೇಗೆ? ಎನ್ನುವುದು ಜಿಲ್ಲಾಡಳಿತ ಮತ್ತು ಸ್ಥಳೀಯ ಆಡಳಿತಳಿಗೂ ತಲೆನೋವಾಗಿದೆ. ಪ್ರತಿ ವರ್ಷದ ಬೇಸಿಗೆಯಲ್ಲೂ ನೀರಿನ ಸಮಸ್ಯೆ ಪರಿಹಾರಕ್ಕೆ ಕೈಗೊಳ್ಳುವ ಕ್ರಮಗಳು ‘ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದಂತೆ’ ಭಾಸವಾಗುತ್ತಿವೆ.

ಎರಡನೇ ಹಂತ ಯಾವಾಗ?: ಕಳೆದ ಮಾರ್ಚ್‌ನಲ್ಲೇ ನಗರಕ್ಕೆ ನೀರು ಪೂರೈಸಬೇಕಿದ್ದ ಹೇಮಾವತಿ ಎರಡನೇ ಹಂತದ ಯೋಜನೆ ಈ ಬಾರಿಯ ಮಾರ್ಚ್‌ನಲ್ಲೂ ಪೂರ್ಣಗೊಂಡಿಲ್ಲ. ಮುಂದಿನ ಮಾರ್ಚ್‌ಗಾದರೂ ನೀರು ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ದೂರುತ್ತಾರೆ ನಗರಪಾಲಿಕೆಯ ಬಹುತೇಕ ಸದಸ್ಯರು.

ಪಾಲಿಕೆ ಸ್ಥಾನಮಾನ ಪಡೆದಿರುವ ನಗರದಲ್ಲಿ ಎಸ್‌ಐಟಿ ಬಡಾವಣೆ, ಸೋಮೇಶ್ವರ ಬಡಾವಣೆ, ಅಶೋಕನಗರ, ಉಪ್ಪಾರಹಳ್ಳಿ, ಆದರ್ಶನಗರ, ಕೋತಿತೋಪು, ಎನ್.ಆರ್.ಕಾಲೊನಿ, ಮಹಾವೀರ ಬಡಾವಣೆ, ಜಯಪುರ, ಭೀಮಸಂದ್ರ ಸೇರಿದಂತೆ ಹೊರ ವಲಯದ ಬಹುತೇಕ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಈ ಭಾಗಗಳಲ್ಲಿ ಎಂಟು ದಿನಗಳಿಗೊಮ್ಮೆ ನೀರು ಬಂದರೇ ಪುಣ್ಯ. ಹೇಮಾವತಿ ನೀರು ನಗರದ ಅರ್ಧ ಭಾಗಕ್ಕಷ್ಟೆ ಪೂರೈಸಲಾಗುತ್ತಿದೆ. ಇನ್ನರ್ಧ ಭಾಗ ಕೊಳವೆ ಬಾವಿ ನೀರನ್ನೇ ನಂಬಿದೆ. ಅದರಲ್ಲೂ ಅರ್ಧ ಭಾಗ ಕೊಳವೆ ಬಾವಿ ನೀರನ್ನು ಅವಲಂಬಿಸಿದ್ದು, ಅನಿಯಮಿತವಾಗಿ ವಿದ್ಯುತ್ ಕೈಕೊಡುವುದರಿಂದ ಸಮಸ್ಯೆ ಮತ್ತಷ್ಟು ತೀವ್ರವಾಗಿದೆ.

ಜನರೇ ಸಿಡಿದೇಳಬೇಕು!: ಅಭಿವೃದ್ಧಿಪಡಿಸಲು ಅಮಾನಿಕೆರೆ ಬತ್ತಿಸಿ ಎರಡು ವರ್ಷಗಳು ತುಂಬುತ್ತಿವೆ. ಇದರ ಪರಿಣಾಮ ಕಳೆದ ವರ್ಷವೇ ನಾಲ್ಕೈದು ವಾರ್ಡ್ ವ್ಯಾಪ್ತಿಯ ನೂರಾರು ಕೊಳವೆ ಬಾವಿಗಳು ಬತ್ತಿಹೋಗಿವೆ. ಕೆರೆಯಲ್ಲಿ ಈ ವರ್ಷವೂ ನೀರಿಲ್ಲದಿರುವುದರಿಂದ ಮತ್ತಷ್ಟು ಕೊಳವೆ ಬಾವಿಗಳು ಬತ್ತುವುದು ಖಚಿತ. ಡಿಸೆಂಬರ್‌ನಲ್ಲಿ ನಡೆದ ತುರ್ತು ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯಗಳನ್ನು ಪಾಲಿಕೆ ಅಧಿಕಾರಿಗಳು ಅನುಷ್ಠಾನಗೊಳಿಸಿಲ್ಲ. ಕಳೆದ ಬಾರಿ ಕೊರೆದಿರುವ 18 ಕೊಳವೆ ಬಾವಿಗಳ ಪೈಕಿ 12 ಕೊಳವೆ ಬಾವಿಗಳಿಗೆ ಪಂಪು, ಮೋಟರ್ ಅಳವಡಿಸಿಲ್ಲ. ಜನರು ಸಿಡಿದೇಳದಿದ್ದರೆ ನೀರು ಸಮರ್ಪಕವಾಗಿ ಸಿಗುವುದಿಲ್ಲ ಎಂದು ಪಾಲಿಕೆ ಸದಸ್ಯ ಎಂ.ಪಿ.ಮಹೇಶ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ವೇಳಾಪಟ್ಟಿ ಪ್ರಕಟಿಸಿ: ‘ರಾತ್ರಿ ಹೊತ್ತು ನೀರು ಬಿಡುತ್ತಾರೆ. ಸಂಪ್ ತುಂಬಿ ರಸ್ತೆಗೆ ಹರಿದು ಹೋಗುತ್ತದೆ. ಕೆಲವು ಬಾರಿ ಸಂಪ್ ತುಂಬಿ ರಸ್ತೆಗೂ ನೀರು ವ್ಯರ್ಥವಾಗಿ ಹರಿದು ಹೋಗಿರುವ ಉದಾಹರಣೆ ಇದೆ. ಇಂತಹ ಸಮಯಕ್ಕೆ ನೀರು ಬಿಡುತ್ತಾರೆ ಎಂದು ಖಚಿತವಾಗಿ ನಿರ್ಧರಿಸುವುದು ಕಷ್ಟವಾಗಿದೆ. ರಾತ್ರಿ ನಿದ್ರೆಗೆಟ್ಟು ನೀರು ತುಂಬಿಸಿಕೊಳ್ಳಬೇಕಿದೆ. ಇಂತಿಂತಹ ವಾರ್ಡ್, ರಸ್ತೆಗಳಲ್ಲಿ ಇಷ್ಟೊತ್ತಿನಿಂದ ಇಷ್ಟೊತ್ತಿಗೆ ನೀರು ಸರಬರಾಜು ಮಾಡಲು ಸಮಯ ನಿಗದಿಪಡಿಸಬೇಕು. ಆಗ ಸಮಯ ಹೊಂದಾಣಿಕೆ ಮಾಡಿಕೊಳ್ಳಲು ನೆರವಾಗುತ್ತದೆ’ ಎನ್ನುವುದು ಗೃಹಿಣಿ ಪದ್ಮ ಅವರ ಸಲಹೆ.

ಅನುದಾನ, ಆದಾಯವೆಲ್ಲ ನೀರಿಗೆ: ನಗರದಲ್ಲಿ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲು ಮೇಯರ್, ಉಪ ಮೇಯರ್ ಹಾಗೂ ಪಾಲಿಕೆ ಆಯುಕ್ತರೊಂದಿಗೆ ತುರ್ತು ಸಭೆ ನಡೆಸಲಾಗಿದೆ. ಪ್ರತಿಯೊಂದು ವಾರ್ಡ್‌ನಲ್ಲೂ ‘ಒಂದೊಂದು ಬೋರ್ ರೀಬೋರ್’ ಮಾಡಲು ಸೂಚಿಸಲಾಗಿದೆ. ಹಾಗೆಯೇ ಜಿಲ್ಲೆಯ ಎಲ್ಲ ನಗರ, ಪಟ್ಟಣಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಪತ್ರಮುಖೇನ ತಿಳಿಸಲಾಗಿದೆ. ಬೇಸಿಗೆ ಮುಗಿಯುವವರೆಗೂ ಬೇರೆ ಯಾವುದೇ ಹೊಸ ಕಾಮಗಾರಿಗೆ ಹಣ ವಿನಿಯೋಗಿಸದಿದ್ದರೂ ಪರವಾಗಿಲ್ಲ. ನೀರಿಗೆ ಮೊದಲ ಆದ್ಯತೆ ನೀಡಿ ಸರ್ಕಾರದ ಅನುದಾನ ಮತ್ತು ಸ್ಥಳೀಯಾಡಳಿತದ ಸ್ವಂತ ಆದಾಯವನ್ನು ಬಳಸುವಂತೆ ಸೂಚಿಸಲಾಗಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT