ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ ನಿಲ್ದಾಣದಲ್ಲಿ ಬೆಳೆದ ಕಿರು ಅರಣ್ಯ

Last Updated 5 ಜೂನ್ 2018, 9:51 IST
ಅಕ್ಷರ ಗಾತ್ರ

ತಿಪಟೂರು: ಇತ್ತ ಬಸ್ ನಿಲ್ದಾಣದಲ್ಲಿ ಬಸ್‍ಗಳು ಕಪ್ಪು ಹೊಗೆ ಬಿಡುತ್ತಿದ್ದರೆ, ಪಕ್ಕದಲ್ಲೇ ನಿಂತಿರುವ ರಾಶಿ ಮರಗಳು ಇಂಗಾಲ ಹೀರಿ ಆಮ್ಲಜನಕ ಹೊರ ಸೂಸೂತ್ತವೆ. ಇಂಥ ಪರಿಸರ ಸ್ನೇಹಿ ಬಸ್ ನಿಲ್ದಾಣ ತಿಪಟೂರಿನಲ್ಲಿದೆ.

ನಗರದ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣ ಪರಿಸರದ ದೃಷ್ಟಿಯಲ್ಲಿ ಮಾದರಿ ಆಗಿದೆ. ನಿಲ್ದಾಣಕ್ಕೆ ಸೇರಿದ ಮುಕ್ಕಾಲು ಎಕರೆ ಜಾಗದಲ್ಲಿ ಕಿರು ಅರಣ್ಯ ಮತ್ತು ಉದ್ಯಾನ ನಳನಳಿಸುತ್ತಿದೆ. ಹೊರಗಿನ ಪ್ರಯಾಣಿಕರಿಗೆ ಅಚ್ಚರಿ ಮೂಡಿಸುಂತೆ ನಿಲ್ದಾಣದ ಆಸುಪಾಸಿನಲ್ಲಿ ಅಪಾರವಾದ ಮರಗಿಡಗಳು ಇವೆ.  ಪ್ರಯಾಣಿಕರಿಗೆ ಉತ್ತಮ ಗಾಳಿ ಮತ್ತು ವಿಶ್ರಾಂತಿ ನೀಡಲು ‘ಕಲ್ಪತರು ಉದ್ಯಾನ’ ಪೂರಕವಾಗಿದೆ.
ಇನ್ನೂರಕ್ಕೂ ಹೆಚ್ಚು ಮರಗಳು ತೊನೆದಾಡುತ್ತಿವೆ.

ಇಂಥ ಮಾದರಿ ಪರಿಸರ ವ್ಯವಸ್ಥೆಗೆ 20 ವರ್ಷಗಳ ಹಿಂದೆ ಇಲ್ಲಿನ ನಿಲ್ದಾಣಾಧಿಕಾರಿ ಆಗಿದ್ದ ದಿವಂಗತ ಬಸವರಾಜು ಕಾರಣಕರ್ತರು. ಇವರ ಪರಿಸರ ಪ್ರೇಮ ಮತ್ತು ಪ್ರಾಮಾಣಿಕ ಸೇವೆ ಅಚ್ಚರಿ ಮೂಡಿಸುತ್ತದೆ. ನಿಲ್ದಾಣಾಧಿಕಾರಿಯಾಗಿ ಬಂದಿದ್ದ ಬಸವರಾಜು ತಮ್ಮ ಕೆಲಸದ ಜತೆಗೆ ಪಕ್ಕದಲ್ಲಿ ಕಿರು ಅರಣ್ಯ ಮತ್ತು ಉದ್ಯಾನ ಬೆಳೆಸಲು ಆದ್ಯತೆ ನೀಡಿದರು. ಅವರ ಅಂದಿನ ಚಟುವಟಿಕೆ ನೋಡಿದ್ದ ನಾಗರಿಕರು ಅವರ ಬಗ್ಗೆ ಈಗಲೂ ಗುಣಗಾನ ಮಾಡುವರು.

ಬಸವರಾಜು ನಿವೃತ್ತಿ ಹೊಂದಿದರೂ ತಾವು ಬೆಳೆಸಿದ ಮರ ಗಿಡಗಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು. ಆಗಾಗ್ಗೆ ಬಂದು ಮರಗಿಡಗಳ ಯೋಗ ಕ್ಷೇಮ ನೋಡಿ ಹೋಗುತ್ತಿದ್ದರು. ಅವರ ಈ ಸೇವೆಯನ್ನು ಪರಿಗಣಿಸಿ ತಾಲ್ಲೂಕು ಆಡಳಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

ನಿಲ್ದಾಣ ಪಕ್ಕದಲ್ಲಿ ಮರಗಿಡ ಬೆಳೆಸಲು ಬಸವರಾಜು ಅವರಿಗೆ ಪ್ರೇರಕವಾಗಿದ್ದವರು ಪರಿಸರ ಪ್ರೇಮಿ ಷಡಕ್ಷರ ದೇವರು. ತಮ್ಮ ಬ್ಯಾಂಕ್ ನೌಕರಿಗೆ ರಾಜೀನಾಮೆ ನೀಡಿ ಬದುಕಿನ ಉದ್ದಕ್ಕೂ ಮರಗಿಡಗಳನ್ನು ಬೆಳೆಸಲು ಸಂಕಲ್ಪ ತೊಟ್ಟಿದ್ದ ಷಡಕ್ಷರ ದೇವರು, ಬಸವರಾಜು ಜತೆ ಕೈ ಜೋಡಿಸಿ  ಸಹಕಾರ ನೀಡಿ ಮಾದರಿಯಾದ ಪರಿಸರವನ್ನು ಬಸ್ ನಿಲ್ದಾಣದಲ್ಲಿ ರೂಪಿಸಿದರು.

ಇವರ ಜತೆ ಆಗಿನ ಕಲ್ಪತರು ಕಾಲೇಜಿನ ಎನ್‍ಎಸ್‍ಎಸ್ ಅಧಿಕಾರಿಯಾಗಿದ್ದ ಸಿದ್ದಗಂಗಯ್ಯ ಹೊಲತಾಳ್ ಮತ್ತು ಉಪನ್ಯಾಸಕ ಟಿ.ಬಿ.ಜಯಚಂದ್ರ ಕೂಡ ಕೈ ಜೋಡಿಸಿದ್ದರು. ಎನ್‍ಎಸ್‍ಎಸ್ ಕ್ಯಾಂಪ್‍ಗಳನ್ನು ಇಲ್ಲಿ ಮಾಡಿ ವಿದ್ಯಾರ್ಥಿಗಳಿಂದ ಗಿಡ ನೆಡಿಸಿದ್ದರು.

ನಗರದ ಅಪಾರ ಪರಿಸರ ಪ್ರೇಮಿಗಳು, ರೈತ ಸಂಘದವರು, ರಂಗಭೂಮಿ ಕಲಾವಿದರು, ವರ್ತಕರು, ಪ್ರಯಾಣಿಕರು ಈ ಕಾರ್ಯಕ್ಕೆ ನೆರವಾಗಿದ್ದರು. ಎಲ್ಲರ ಶ್ರಮದ ಫಲ ಈ ಕಣ್ಣು ಮತ್ತು ಮನಸ್ಸನ್ನು ಸೆಳೆಯುತ್ತಿದೆ. ಪ್ರಯಾಣಿಕರಿಗೆ ನಿತ್ಯ ಪರಿಸರ ಪಾಠ ಹೇಳುತ್ತಿದೆ.

ಈ ಕಾಣಿಕೆ ನೀಡಿದ ಆಗಿನ ನಿಲ್ದಾಣಾಧಿಕಾರಿ ಬಸವರಾಜು ಹೆಸರನ್ನು ಸ್ಮರಿಸುವ ಯಾವ ಕುರುಹುಗಳೂ ನಿಲ್ದಾಣದಲ್ಲಿ ಇಲ್ಲ. ಅಷ್ಟೇ ಏಕೆ ಇಲ್ಲಿನ ನಿಲ್ದಾಣದ ಸಿಬ್ಬಂದಿಗೆ ಬಸವರಾಜು ಹೆಸರೇ ಗೊತ್ತಿಲ್ಲ. ಬಸವರಾಜು ಅವರನ್ನು ಸ್ಮರಿಸುವ ಪ್ರಯತ್ನಗಳು ನಿಲ್ದಾಣದಲ್ಲಿ ನಡೆಯಬೇಕು ಎನ್ನುವುದು ಪರಿಸರ ಪ್ರೇಮಿಗಳ ಆಶಯ.

ಹಳ್ಳಿ ಸುರೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT