ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭದಲ್ಲಿ ಪಟ್ಟಣ ಸಹಕಾರ ಬ್ಯಾಂಕ್‌ಗಳು

Last Updated 12 ಜನವರಿ 2012, 10:45 IST
ಅಕ್ಷರ ಗಾತ್ರ

ತುಮಕೂರು: ಈಚೆಗಷ್ಟೇ ಸಂಸತ್ತು ಸಂವಿಧಾನಕ್ಕೆ 111ನೇ ತಿದ್ದುಪಡಿ ತರುವ ಮೂಲಕ ಸಹಕಾರ ಸಂಸ್ಥೆಗಳನ್ನು ರಚಿಸುವುದನ್ನು ಈ ದೇಶದ ಪ್ರಜೆಯ ಮೂಲಭೂತ ಹಕ್ಕಾಗಿ ಘೋಷಿಸಿದೆ ಎಂದು ರಾಜ್ಯ ಪಟ್ಟಣ ಸಹಕಾರ ಬ್ಯಾಂಕ್‌ಗಳ ಮಹಾಮಂಡಳದ ಅಧ್ಯಕ್ಷ ಎಚ್.ಕೆ.ಪಾಟೀಲ್ ಇಲ್ಲಿ ಬುಧವಾರ ಹೇಳಿದರು.

ಪಟ್ಟಣ ಸಹಕಾರ ಬ್ಯಾಂಕ್‌ಗಳ ಅಧ್ಯಕ್ಷರು, ಹಿರಿಯ ಅಧಿಕಾರಿಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಅಂತರರಾಷ್ಟ್ರೀಯ ಸಹಕಾರಿ ವರ್ಷಾಚರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈ ದೇಶದ ಜನರಿಗೆ ಉತ್ತಮ ಕೊಡುಗೆ ನೀಡಿದೆ ಎಂದರು.

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 256 ಪಟ್ಟಣ ಸಹಕಾರ ಬ್ಯಾಂಕ್‌ಗಳ ಪೈಕಿ 235 ಬ್ಯಾಂಕ್‌ಗಳು ಲಾಭಗಳಿಸುತ್ತಿವೆ. 24 ಬ್ಯಾಂಕ್‌ಗಳು ಶೇ 100ರ ಸಾಲ ವಸೂಲಾತಿ ಮಾಡಿವೆ. ದೇಶದಲ್ಲಿ ಒಟ್ಟು ರೂ. 2 ಲಕ್ಷ ಕೋಟಿ ಬಂಡವಾಳವನ್ನು ಪಟ್ಟಣ ಸಹಕಾರ ಬ್ಯಾಂಕ್‌ಗಳು ತೊಡಗಿಸಿವೆ ಎಂದು ಮಾಹಿತಿ ನೀಡಿದರು.

ಕಾರ್ಪೊರೇಟ್ ವಲಯದ ಉದ್ದಿಮೆಗಳು ಲಾಭ ಗಳಿಕೆ, ಜನಾಕರ್ಷಣೆಗೆ ಮೊದಲ ಆದ್ಯತೆ ನೀಡುತ್ತವೆ. ಆದರೆ ಸಹಕಾರ ಸಂಸ್ಥೆಗಳು ಉತ್ತಮ ಸೇವೆ ಒದಗಿಸುವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತವೆ. ಉತ್ತಮ ಕೆಲಸ ಮಾಡಿದ ಸಹಕಾರಿ ಗಳನ್ನು ಜನರೇ ಗುರುತಿಸಿ ನಾಯಕರನ್ನಾಗಿ ಒಪ್ಪಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದೇಶದ ಒಟ್ಟು ಜನಸಂಖ್ಯೆಯ ಶೇ 36ರಷ್ಟು ಮಂದಿ ಈವರೆಗೆ ಬ್ಯಾಂಕಿಂಗ್ ವಲಯದ ಯಾವುದೇ ಸೌಲಭ್ಯ ಪಡೆದುಕೊಂಡಿಲ್ಲ. ಕೆಳ ಮಧ್ಯಮ ವರ್ಗದವರೆಗೆ ಸಹಕಾರ ಸಂಸ್ಥೆಗಳು ತಲುಪಿವೆ. ಕೆಳ ವರ್ಗಕ್ಕೆ ತಲುಪುವುದು ನಮ್ಮ ಗುರಿಯಾಗಬೇಕು ಎಂದು ನುಡಿದರು.

ಟಿಜಿಎಂಸಿ ಬ್ಯಾಂಕ್ ಅಧ್ಯಕ್ಷ ಎನ್.ಆರ್. ಜಗದೀಶ್ ಮಾತನಾಡಿ, ಅತ್ಯಾಧುನಿಕ ತಂತ್ರಜ್ಞಾನ ಬಳಸುತ್ತಿರುವ ಖಾಸಗಿ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕ್‌ಗಳು ಸಹಕಾರ ಬ್ಯಾಂಕ್‌ಗಳಿಗೆ ತೀವ್ರ ಸ್ಪರ್ಧೆ ನೀಡುತ್ತಿವೆ. ಬ್ಯಾಂಕ್‌ಗಳು ತಮ್ಮ ಸಿಬ್ಬಂದಿಗೆ ತರಬೇತಿ ನೀಡಲು ಪ್ರತ್ಯೇಕ ಶಿಕ್ಷಣ ವಿದ್ಯಾಲಯಗಳನ್ನೇ ಸ್ಥಾಪಿಸಿಕೊಂಡಿವೆ. ಬ್ಯಾಂಕ್‌ಗಳಿಂದ ಶುಲ್ಕ ವಸೂಲಿ ಮಾಡುವ ಸಹಕಾರ ಮಹಾಮಂಡಳ ಅದರ ಸ್ವಲ್ಪ ಭಾಗವನ್ನಾದರೂ ಸಹಕಾರ ಬ್ಯಾಂಕ್ ಸಿಬ್ಬಂದಿಗೆ ತರಬೇತಿ ನೀಡಲು ಬಳಸಬೇಕು ಎಂದು ಸಲಹೆ ನೀಡಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ, ಸಾಲ ಮನ್ನಾ ಕುರಿತು ರಾಜಕಾರಿಣಿಗಳು ನೀಡುವ ಹೇಳಿಕೆಗಳು ಜನರ ದಾರಿ ತಪ್ಪಿಸುತ್ತಿವೆ ಎಂದರು.

ರಾಜ್ಯ ಸರ್ಕಾರ ನಬಾರ್ಡ್‌ಗೆ ಕಳೆದ ಬಾರಿಯ ಬಾಕಿ ಹಣ ರೂ. 3000 ಕೋಟಿ ಕಟ್ಟಬೇಕು. ಈ ಹಣ ಕಟ್ಟದಿದ್ದರೆ ಮುಂದಿನ ಸಾಲಿಗೆ ಸಾಲ ಕೊಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಮನೋಹರ ಮಸ್ಕಿ, ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಜಿ.ಟಿ.ದೇವೇಗೌಡ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎನ್.ಗಂಗಣ್ಣ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಸಹಕಾರ ಮಹಾಮಂಡಳದ ನಿರ್ದೇಶಕರಾದ ಹನುಮಂತೇಗೌಡ, ಬಿ.ಲತಾ ಭೈರಪ್ಪ, ಸಹಕಾರ ಸಂಘಗಳ ಉಪ ನಿಬಂಧಕ ಆರ್.ಲೋಕೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT