ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾಸದ ಬಳಿಕ ಪ್ರಶ್ನೆಗಳಿಗೆ ಉತ್ತರ

ಸಿದ್ಧಗಂಗಾಮಠದಲ್ಲಿ ಶಿವಕುಮಾರಸ್ವಾಮೀಜಿ ಅವರ ಆಶೀರ್ವಾದ ಪಡೆದ ಮುಖ್ಯಮಂತ್ರಿ ಎಚ್‌ಡಿಕೆ
Last Updated 25 ಮೇ 2018, 4:03 IST
ಅಕ್ಷರ ಗಾತ್ರ

ತುಮಕೂರು: ‘ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಮ್ಮಿಶ್ರ ಸರ್ಕಾರವು ರಾಜಿ ಸರ್ಕಾರವಾಗುವುದಿಲ್ಲ. ಶುಕ್ರವಾರ ವಿಶ್ವಾಸ ಮತ ಯಾಚನೆಯ ವೇಳೆಯಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷದ ಮುಖಂಡರಿಗೆ ಹಾಗೂ ರಾಜ್ಯದ ಎಲ್ಲ ಜನರಿಗೆ ಸ್ಪಷ್ಟವಾಗಿ ಅರ್ಥವಾಗುವಂತೆ ಸರ್ಕಾರದ ಕಾರ್ಯದ ಬಗ್ಗೆ ಉತ್ತರಿಸುತ್ತೇನೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಗುರುವಾರ ಸಿದ್ಧಗಂಗಾಮಠಕ್ಕೆ ಭೇಟಿ ನೀಡಿ ಡಾ.ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವ ವೇಳೆ ಹೊಗಳಿಕೆ, ತೆಗಳಿಕೆಯ ಎಲ್ಲ ರೀತಿಯ ಮಾತುಗಳನ್ನು ಕೇಳಿದ್ದೇನೆ. ಕೆಲವರು ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ. ಆ ಪ್ರಶ್ನೆಗಳಿಗೂ ಉತ್ತರಿಸಲಿದ್ದೇನೆ ಎಂದು ಹೇಳಿದರು.

‘ವಿಶ್ವಾಸಮತ ಯಾಚನೆಯಾದ ಬಳಿಕಷ್ಟೇ ನಾನು ಅಧಿಕೃತ ಮುಖ್ಯಮಂತ್ರಿಯಾಗಲಿದ್ದೇನೆ. ನಂತರ ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡುತ್ತೇನೆ. ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಚಾಲನೆ ನೀಡಲಿದ್ದೇನೆ. ಸರ್ಕಾರದ ನೀತಿ ನಿಲುವುಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡಲಿದ್ದೇನೆ’ ಎಂದು ಹೇಳಿದರು.

‘ಅದಕ್ಕಿಂತ ಮುಂಚಿತವಾಗಿ ನಾನು ಏನನ್ನೂ ಹೇಳಲು ಬಯಸುವುದಿಲ್ಲ. ವಿಶ್ವಾಸ ಮತ ಯಾಚನೆ ಮಾಡುವವರೆಗೂ ಮಾಧ್ಯಮದವರೂ ಸಹಕರಿಸಬೇಕು’ ಎಂದು ನುಡಿದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಡಿ.ಸಿ.ಗೌರಿಶಂಕರ್, ಮಾಜಿ ಶಾಸಕರಾದ ಡಿ.ನಾಗರಾಜಯ್ಯ, ಎಂ.ಟಿ.ಕೃಷ್ಣಪ್ಪ, ಕೆ.ಎಂ.ತಿಮ್ಮರಾಯಪ್ಪ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್. ನಿಂಗಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ಮುಖಂಡರಾದ ಎನ್.ಗೋವಿಂದರಾಜು ಇದ್ದರು.

ನಾಲ್ಕು ಗಂಟೆ ಸಿ.ಎಂ ವಿಳಂಬ

ಪೂರ್ವ ನಿಗದಿಯಂತೆ ಸಿದ್ಧಗಂಗಾಮಠಕ್ಕೆ ಗುರುವಾರ ಬೆಳಿಗ್ಗೆ 9ಕ್ಕೆ ಭೇಟಿ ನೀಡಬೇಕಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 4 ಗಂಟೆ ತಡವಾಗಿ ಅಂದರೆ ಮಧ್ಯಾಹ್ನ 1.10ಕ್ಕೆ ಭೇಟಿ ನೀಡಿದರು!

ಮಠದ ಆಡಳಿತ ಸಿಬ್ಬಂದಿ ಮುಖ್ಯಮಂತ್ರಿ ಭೇಟಿ ಪ್ರಯುಕ್ತ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಗಂಟೆಗಟ್ಟಲೆ ಕಾದರು. ಅಲ್ಲದೇ, ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ ಅವರು ಕಚೇರಿ ಎದುರು ಕಾದು ನಿಂತುಕೊಳ್ಳಬೇಕಾಯಿತು.

ಪೊಲೀಸ್ ಅಧಿಕಾರಿಗಳು, ಪೊಲೀಸರು ಮಠದ ಆವರಣಕ್ಕೆ ಬರುತ್ತಿದ್ದ ಸಾರ್ವಜನಿಕರನ್ನು ನಿಯಂತ್ರಿಸಿದರು. ಒಂದು ರೀತಿಯಲ್ಲಿ ಮಠದ ಆವರಣ ಸಂಪೂರ್ಣವಾಗಿ ಪೊಲೀಸ್ ಸರ್ಪಗಾವಲಿನಲ್ಲಿತ್ತು. ಇದು ಸ್ವಾಮೀಜಿ ದರ್ಶನಕ್ಕೆ ಬಂದ ಭಕ್ತರಿಗೆ, ದಿನನಿತ್ಯ ಬರುವ ಭಕ್ತರಿಗೆ ಸಾಕಷ್ಟು ಕಿರಿ ಕಿರಿಯಾಯಿತು.

ಬೆಳಗಿನ ಉಪಾಹಾರ, ದಾಸೋಹದ ಮನೆಗೆ ಹೋಗಲು ಅವಕಾಶ ಸಿಗದೇ ಪರದಾಡಿದರು. ಸಿದ್ಧಲಿಂಗ ಸ್ವಾಮೀಜಿ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಬಳಿಕ ಹಿಂಬಾಗಿಲಿನಿಂದ ದಾಸೋಹದ ಮನೆಗೆ ಹೋಗಲು ಪೊಲೀಸರು ಅವಕಾಶ ಕಲ್ಪಿಸಿದರು.

ಎಚ್‌ಡಿಕೆ ಕಾಲಿಗೆರಗಿದ ಅಭಿಮಾನಿ

ಸಿದ್ಧಗಂಗಾಮಠದಲ್ಲಿ ಸ್ವಾಮೀಜಿಯವರ ಆಶೀರ್ವಾದ ಪಡೆದ ಬಳಿಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾರು ಹತ್ತುವ ವೇಳೆಯಲ್ಲಿ ಅಭಿಮಾನಿಯೊಬ್ಬ ಸಾಕಷ್ಟು ಪೊಲೀಸ್ ಭದ್ರತೆಯನ್ನು ಮೀರಿ ನುಗ್ಗಿ ಮುಖ್ಯಮಂತ್ರಿ ಕಾಲಿಗೆ ಬಿದ್ದರು!

ಹೀಗೆ ಕಾಲಿಗೆ ಬಿದ್ದ ಅಭಿಮಾನಿ ಮಧುಗಿರಿ ತಾಲ್ಲೂಕಿನ ಶ್ರಾವಣಹಳ್ಳಿಯ ಅಶೋಕ. ಪೊಲೀಸರು, ಪೊಲೀಸ್ ಅಧಿಕಾರಿಗಳು ಜನರ ಗುಂಪಿನಲ್ಲಿ ನುಗ್ಗಿ ಬಂದ ಈ ಅಭಿಮಾನಿಯನ್ನು ಹಿಂದಕ್ಕೆ ತಳ್ಳಿದರೂ ಅದನ್ನು ಲೆಕ್ಕಿಸದೇ ನೋಡು ನೋಡುತ್ತಿದ್ದಂತೆಯೇ ಮುಖ್ಯಮಂತ್ರಿ ಕಾಲು ಹಿಡಿದೇ ಬಿಟ್ಟರು.

ಈ ಅಭಿಮಾನಿಯನ್ನು ಕಂಡ ಮುಖ್ಯಮಂತ್ರಿ ಆಯ್ತಪ್ಪ.. ಹೋಗು ಎಂದು ಬೆನ್ನುತಟ್ಟಿದರು. ಆದರೆ, ಈ ಘಟನೆಯಿಂದ ವಿಚಲಿತರಾದ ಪೊಲೀಸ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದರು. ಮಠದ ಅಂಗಳದಲ್ಲಿಯೇ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಉದ್ಯೋಗ ಎಲ್ಲ ವಿವರವನ್ನು ಪಡೆದರು. ಅಲ್ಲದೇ ಇಂತಹ ಹುಚ್ಚಾಟಕ್ಕೆ ಕೈ ಹಾಕಬಾರದು ಎಂದು ಎಚ್ಚರಿಕೆ ನೀಡಿದರು.

ಆಶೀರ್ವಾದಕ್ಕೆ ಕಾಲು ಬಿದ್ದೆ: ‘ನಾನು ಕುಮಾರ ಸ್ವಾಮಿ ಅವರ ಅಭಿಮಾನಿ. ಅನೇಕ ಬಾರಿ ಅವರನ್ನು ಭೇಟಿ ಮಾಡಿ ಕಾಲಿಗೆ ಬಿದ್ದಿದ್ದೇನೆ. ಅವರನ್ನು ಕಂಡರೆ ಕಾಲಿಗೆ ಬೀಳಬೇಕು ಎನಿಸುತ್ತದೆ. ಹಿಂದೆ ಗುಬ್ಬಿ ವೀರಣ್ಣ ಕಲಾಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಅಲ್ಲಿಯೂ ಅವರ ಕಾಲಿಗೆ ಬಿದ್ದಿದ್ದೆ’ ಎಂದು ಅಭಿಮಾನಿ ಅಶೋಕ ಸಬ್ ಇನ್‌ ಸ್ಪೆಕ್ಟರ್ ರಾಘವೇಂದ್ರ ಅವರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT