ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲ್ಹಾರ ಮತ್ತು ಬಸವನಬಾಗೇವಾಡಿಗೆ ಎರಡು ಪಾಲಿಟೆಕ್ನಿಕ್ ಮಂಜೂರು: ಶಾಸಕ

Last Updated 23 ನವೆಂಬರ್ 2019, 11:33 IST
ಅಕ್ಷರ ಗಾತ್ರ

ಕೊಲ್ಹಾರ: ‘ಕೊಲ್ಹಾರ ಮತ್ತು ಬಸವನಬಾಗೇವಾಡಿ ತಾಲ್ಲೂಕುಗಳಲ್ಲಿ ಎರಡು ಪಾಲಿಟೆಕ್ನಿಕ್ ಕಾಲೇಜು ನಿರ್ಮಿಸಲು ₹10 ಕೋಟಿ ಅನುದಾನ ಮಂಜೂರು ಮಾಡಿಸಲಾಗಿದೆ’ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.

ತಾಲ್ಲೂಕಿನ ಸಿದ್ದನಾಥ ಆರ್‌.ಸಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸ್ಥಾಪಿಸಿರುವ ನೂತನ ವಾರದ ಸಂತೆಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಲಾಗುವುದು. ಇದಕ್ಕೆ ಎನ್‌ಟಿಪಿಸಿ ಕೂಡ ಅನುದಾನ ನೀಡಲಿದೆ’ ಎಂದು ತಿಳಿಸಿದರು.

‘ಮನಗೂಳಿ, ಮಲಘಾಣ, ಮಸೂತಿ ಹಾಗೂ ಇಂಗಳೇಶ್ವರ ಗ್ರಾಮಗಳಲ್ಲಿ ಸುಸಜ್ಜಿತ ಸಂತೆ ಕಟ್ಟೆಗಳನ್ನು ಮಾಡಿಕೊಡಲಾಗಿದೆ. ಉಕ್ಕಲಿ, ತೆಲಗಿ ಹಾಗೂ ರೋಣಿಹಾಳ ಗ್ರಾಮಗಳಿಗೆ 110 ಕೆ.ವಿ ವಿದ್ಯುತ್ ಘಟಕಗಳನ್ನು ಮಂಜೂರು ಮಾಡಿಸಲಾಗಿದೆ. ಅದರಲ್ಲಿ ಎರಡು ಘಟಕಗಳ ಕಾಮಗಾರಿ ಪೂರ್ಣಗೊಂಡಿವೆ’ ಎಂದರು.

‘ರಾಜಕಾರಣದಲ್ಲಿ ನಾನು ಸೋತಿದ್ದೇನೆ, ಗೆದ್ದಿದ್ದೇನೆ. ಆದರೆ, ಸೋತಾಗ ಎಂದೂ ಚಿಲ್ಲರೆ ರಾಜಕಾರಣ ಮಾಡಿಲ್ಲ. ಸೋತಾಗ ಸುಮ್ಮನಿದ್ದು, ಗೆದ್ದವರು ಏನು ಕೆಲಸ ಮಾಡುತ್ತಿದ್ದಾರೆ ಎಂದು ನೋಡಬೇಕು. ನಮ್ಮ ಸರದಿ ಬಂದಾಗ ಅವರು ಮಾಡದ ಕೆಲಸಗಳನ್ನು ಮಾಡಬೇಕು’ ಎಂದು ಮಾರ್ಮಿಕವಾಗಿ ಹೇಳಿದರು.

‘ಬೀದಿ ಬದಿ ವ್ಯಾಪಾರಿಗಳ ಅನಕೂಲಕ್ಕಾಗಿ ಸಂತೆಕಟ್ಟೆ ನಿರ್ಮಿಸಿ ಕೊಡಲಾಗಿದೆ. ಈ ಸಂತೆ ಪ್ರತಿವಾರ ನಿರಂತರವಾಗಿ ನಡೆಯಬೇಕು. ಮೂಲಸೌಕರ್ಯ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗಾಗಿ ಎಲ್ಲಾ ತರಹದ ಸಹಕಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.

‘ನೀರಾವರಿ ಸಚಿವರ ಕ್ಷೇತ್ರಕ್ಕಿಂತ ಮೊದಲು ನಮ್ಮ ಕ್ಷೇತ್ರದಲ್ಲಿ ಮುಳವಾಡ ಏತ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಂಡಿದ್ದೇವೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಸುಸಜ್ಜಿತ ರಸ್ತೆಗಳು ನಮ್ಮ ಕ್ಷೇತ್ರದಲ್ಲಿವೆ. ಕೇವಲ ಬಳೂತಿ ರಸ್ತೆ ಅಭಿವೃದ್ಧಿಯಾಗಿಲ್ಲ ಎಂದು ನನ್ನ ಫೋಟೊ ಹಾಕಿ ಅಪಪ್ರಚಾರ ಮಾಡುವವರು ಬಹಳ ಜನರಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ‘ಸದ್ಯ ಈ ಕಾಮಗಾರಿಗೆ ₹7.20 ಕೋಟಿ ಅನುದಾನ ಮಂಜೂರಾಗಿದ್ದು, ಟೆಂಡರ್ ಕೂಡ ಆಗಿದೆ’ ಎಂದರು.

ಚಿದಾನಂದ ಹೀರೇಮಠ ಹಾಗೂ ಶಿವಲಿಂಗಯ್ಯ ಮುತ್ತಗಿಮಠ ಸಾನ್ನಿಧ್ಯ ವಹಿಸಿದ್ದರು.

ಸಿದ್ದನಾಥ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಎಂ.ಎ.ಎಸ್.ಬಾಗವಾನ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಜೆ.ಇಂಡಿ, ಎಪಿಎಂಸಿ ನಿರ್ದೇಶಕ ಸಿ.ಪಿ.ಪಾಟೀಲ ಮುಖಂಡ ತಾನಾಜಿ ನಾಗರಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT