ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಕೃಷಿ: ಆರಂಭದಲ್ಲಿ ಹಿನ್ನಡೆ; ನಂತರ ಚುರುಕು

ಜಿಲ್ಲೆಯಾದ್ಯಂತ ಉತ್ತಮ ಮಳೆ: 38,000 ಹೆಕ್ಟೇರ್ ಭತ್ತ ಕೃಷಿ ಗುರಿ; 8400 ಹೆಕ್ಟೇರ್ ನಾಟಿ ಪೂರ್ಣ
Last Updated 3 ಜುಲೈ 2022, 10:01 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಕೊರತೆಯಿಂದ ಆರಂಭದಲ್ಲಿ ಭತ್ತದ ನಾಟಿ ಕಾರ್ಯಕ್ಕೆ ಹಿನ್ನೆಡೆಯಾಗಿತ್ತು. ಕೆಲವು ದಿನಗಳಿಂದ ಸುರಿಯುತ್ತಿರುವ ಬಿರುಸಿನ ಮಳೆಗೆ ಮತ್ತೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಭತ್ತದ ನಾಟಿಗೆ ಗದ್ದೆಗಳನ್ನು ಹಸನು ಮಾಡಲಾಗುತ್ತಿದೆ. ಜಿಲ್ಲೆಯಾದ್ಯಂತ ನಾಟಿ ಕಾರ್ಯ ಬಿರುಸಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಬಿತ್ತನೆ ಗುರಿ ಸಾಧನೆ

ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 38,000 ಹೆಕ್ಟೇರ್‌ ಭತ್ತದ ನಾಟಿ ಗುರಿ ಹೊಂದಲಾಗಿದ್ದು, ಇದುವರೆಗೂ 8,400 ಹೆಕ್ಟೇರ್‌ನಲ್ಲಿ ನಾಟಿಯಾಗಿದೆ. ಉಡುಪಿ ತಾಲ್ಲೂಕಿನಲ್ಲಿ 4,000 ಹೆಕ್ಟೇರ್ ಬಿತ್ತನೆ ಗುರಿಗೆ 748, ಕಾಪು ತಾಲ್ಲೂಕಿನಲ್ಲಿ 2,850 ಗುರಿಗೆ 680, ಬ್ರಹ್ಮಾವರದಲ್ಲಿ 10,800 ಗುರಿಗೆ ಪ್ರತಿಯಾಗಿ 1,936, ಕುಂದಾಪುರದಲ್ಲಿ 8,400 ಗುರಿಗೆ 2,945, ಬೈಂದೂರಿನಲ್ಲಿ 4,600 ಗುರಿಗೆ 1,300, ಕಾರ್ಕಳದಲ್ಲಿ 5,750 ಗುರಿಗೆ ಪ್ರತಿಯಾಗಿ 663 ಹಾಗೂ ಹೆಬ್ರಿ ತಾಲ್ಲೂಕಿನಲ್ಲಿ 1,600 ಹೆಕ್ಟೇರ್‌ ಗುರಿಗೆ ಪ್ರತಿಯಾಗಿ 135 ಹೆಕ್ಟೇರ್ ನಾಟಿ ಪೂರ್ಣಗೊಂಡಿದೆ.

ಕರಾವಳಿಯಲ್ಲಿ ಬಹುತೇಕ ಕೃಷಿ ಮಳೆಯಾಶ್ರಿತವಾಗಿದ್ದು ಮುಂಗಾರು ಹಂಗಾಮಿನಲ್ಲಿ ಹೆಚ್ಚು ಭತ್ತದ ಕೃಷಿ ನಡೆಯುತ್ತದೆ. ಹಿಂಗಾರಿನಲ್ಲಿ ಕೆರೆ, ತೋಡು ಹಾಗೂ ನೀರಿನ ಮೂಲಗಳು ಲಭ್ಯವಿದ್ದ ಕಡೆ ಮಾತ್ರ ಭತ್ತದ ಕೃಷಿ ಮಾಡಲಾಗುತ್ತದೆ. ಮುಂಗಾರಿನಲ್ಲಿ 38,000 ಹೆಕ್ಟೇರ್‌ನಲ್ಲಿ ಭತ್ತದ ನಾಟಿಯಾದರೆ ಹಿಂಗಾರಿನಲ್ಲಿ 5,000 ಹೆಕ್ಟೇರ್‌ನಲ್ಲಿ ಮಾತ್ರ ನಾಟಿ ನಡೆಯುತ್ತದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಹಿಂಗಾರಿನಲ್ಲಿ ನೀರಿನ ಲಭ್ಯತೆ ಇದ್ದವರು ತರಕಾರಿ ಹಾಗೂ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ನೀರಿಲ್ಲದವರು ಭೂಮಿಯನ್ನು ಹಡಿಲು ಬಿಡುತ್ತಾರೆ.

ಜಿಲ್ಲೆಯಲ್ಲಿ 2.09 ಲಕ್ಷ ಹಿಡುವಳಿದಾರರಿದ್ದು ಭತ್ತ ಬೆಳೆಯುವ ರೈತರು 40,000 ಇದ್ದರೆ, 1.69 ಲಕ್ಷ ತೋಟಗಾರಿಕಾ ಬೆಳೆಗಾರರು ಇದ್ದಾರೆ. ಅಡಿಕೆ, ತೆಂಗು, ಕಾಳುಮೆಣಸು, ಗೇರು ಕೃಷಿ ಹೆಚ್ಚಾಗಿದೆ. ಮುಂಗಾರಿನಲ್ಲಿ ಭತ್ತದ ಕೃಷಿಯೇ ಪ್ರಧಾನವಾಗಿದ್ದು, ಹಿಂಗಾರಿನಲ್ಲಿ ದ್ವಿದಳ ಧಾನ್ಯ, ಅನಾನಸ್‌, ಕಲ್ಲಂಗಡಿ, ಬಾಳೆ ಹಾಗೂ ಇತರ ವಾಣಿಜ್ಯ ಬೆಳೆ ಬೆಳೆಯಲಾಗುತ್ತದೆ.

ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಭತ್ತದ ನಾಟಿ ಕಾರ್ಯ ಆರಂಭವಾಗುತ್ತದೆ. ಈ ವರ್ಷ ಮಳೆ ಕಣ್ಣಾ ಮುಚ್ಚಾಲೆಯಿಂದ ಉಳುಮೆಗೆ ನೀರಿನ ಕೊರತೆ ಎದುರಾಗಿ ನಾಟಿ ಕಾರ್ಯಕ್ಕೆ ಆರಂಭದಲ್ಲಿ ಹಿನ್ನೆಡೆಯಾಗಿತ್ತು. ಭತ್ತದ ನೇಜಿ ಬೆಳವಣಿಗೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿತ್ತು. ಒಂದು ವಾರದಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿರುವುದರಿಂದ ನಾಟಿ ಕಾರ್ಯ ಬಿರುಸುಗೊಂಡಿದೆ.

ಕೃಷಿ ಯಂತ್ರಗಳ ಅಲಭ್ಯತೆ:

ಏಕಕಾಲದಲ್ಲಿ ಭತ್ತದ ನಾಟಿ ಕಾರ್ಯ ಆರಂಭವಾಗಿರುವುದರಿಂದ ಕೆಲವು ಕಡೆ ಕೃಷಿ ಯಂತ್ರೋಪಕರಣಗಳ ಸಮಸ್ಯೆ ಎದುರಾಗಿದೆ. ಜಿಲ್ಲೆಯಲ್ಲಿರುವ 9 ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ 4 ಯಂತ್ರಧಾರೆಗಳು ಕಾರ್ಯ ನಿರ್ವಹಿಸುತ್ತಿಲ್ಲ.

ಸರ್ಕಾರದ ಜತೆಗೆ ಯಂತ್ರಧಾರೆ ಕೇಂದ್ರಗಳು ಮಾಡಿಕೊಂಡ ಒಪ್ಪಂದದ ಅವಧಿ ಈ ವರ್ಷದ ಮಾರ್ಚ್‌ನಲ್ಲಿ ಮುಗಿದಿದ್ದು, ಸರ್ಕಾರದಿಂದ ಮುಂದಿನ ಆದೇಶ ಬರುವವರೆಗೂ 4 ಯಂತ್ರಧಾರೆಗಳ ಸೇವೆ ರೈತರಿಗೆ ಲಭ್ಯವಾಗುವುದಿಲ್ಲ. ಮುಂದಿನ ಅವಧಿಗೆ ಹೊಸ ಕೇಂದ್ರಗಳು ಆರಂಭವಾಗಲಿವೆ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ರಸಗೊಬ್ಬರ ಕೊರತೆ ಇಲ್ಲ:

ಮುಂಗಾರಿನಲ್ಲಿ ಅತಿ ಹೆಚ್ಚು ಮಳೆ ಸುರಿಯುವುದರಿಂದ ಹಾಕಿದ ರಸಗೊಬ್ಬರ ಕೊಚ್ಚಿಹೋಗುವ ಕಾರಣ ರೈತರು ಭತ್ತದ ಕೃಷಿಗೆ ಹೆಚ್ಚು ರಸಗೊಬ್ಬರ ಬಳಸುವುದಿಲ್ಲ. ಸಾವಯವ ಕೃಷಿ ಹೆಚ್ಚಾಗಿದೆ. ಮಳೆ ಕಡಿಮೆಯಾದ ಬಳಿಕ ರಸಗೊಬ್ಬರ ಬಳಕೆ ಮಾಡುತ್ತಾರೆ. ಜಿಲ್ಲೆಗೆ ಡಿಎಪಿ, ಎಂಒಪಿ, ಎನ್‌ಪಿಕೆ, ಯೂರಿಯಾ ಸೇರಿದಂತೆ 3,100 ಟನ್ ರಸಗೊಬ್ಬರ ಪೂರೈಕೆಯಾಗಿದ್ದು, ಬೇಡಿಕೆಯಷ್ಟು ವಿತರಣೆಯಾಗಿದ್ದು, 1,800 ಟನ್‌ ದಾಸ್ತಾನು ಇದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ಮಾಹಿತಿ ನೀಡಿದರು.

ಕಾಪುವಿನಲ್ಲಿ ಕೃಷಿ ಚಟುವಟಿಕೆ ಚುರುಕು:

ಕಾಪು ತಾಲ್ಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಬಿರುಸುಗೊಂಡಿದೆ. ಜೂನ್ ಆರಂಭದಲ್ಲಿ ಮುಂಗಾರು ಕೈಕೊಟ್ಟು ನಾಟಿಗೆ ಹಿನ್ನೆಡೆಯಾಗಿತ್ತು. ಸದ್ಯ 2,850 ಹೆಕ್ಟೇರ್ ಬಿತ್ತನೆ ಗುರಿಗೆ ಪ್ರತಿಯಾಗಿ 680 ಹೆಕ್ಟೇರ್‌ ನಾಟಿಯಾಗಿದೆ. 250 ಕ್ವಿಂಟಲ್ ಎಂಒ4, 5 ಕ್ವಿಂಟಲ್ ಉಮಾ ಹಾಗೂ 10 ಕ್ವಿಂಟಲ್ ಜ್ಯೋತಿ ಬಿತ್ತನೆ ಬೀಜ ವಿತರಿಸಲಾಗಿದೆ. ಬಿತ್ತನೆ ಬೀಜ ದಾಸ್ತಾನು ಇದೆ ಎಂದು ಕಾಪು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಪುಷ್ಪಲತಾ ತಿಳಿಸಿದರು.

ಕಾರ್ಕಳದಲ್ಲಿ ಪೊಟಾಷಿಯಂ ಕೊರತೆ:

ಕಾರ್ಕಳ ತಾಲ್ಲೂಕಿನಲ್ಲೂ ಮುಂಗಾರು ಹಂಗಾಮು ಚುರುಕಾಗಿದ್ದು, ಹೆಬ್ರಿ ಹಾಗೂ ಕಾರ್ಕಳ ತಾಲ್ಲೂಕು ಸೇರಿ ವರ್ಷಕ್ಕೆ 1,800 ಟನ್ ರಸಗೊಬ್ಬರ ಬೇಡಿಕೆ ಇದ್ದು, ಅಗತ್ಯಕ್ಕೆ ತಕ್ಕಷ್ಟು ರೈತರಿಗೆ ಪೂರೈಸಲಾಗಿದ್ದು, 480 ದಾಸ್ತಾನು ಇದೆ. ಪೊಟಾಷಿಯಂ ಮಾತ್ರ ಕೊರತೆಯಿದ್ದು, ಒಂದೆರಡು ವಾರಗಳಲ್ಲಿ ಬರಲಿದೆ. ಬಿತ್ತನೆ ಬೀಜ ಕೊರತೆಯಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಭತ್ತ ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿ:

ಕರಾವಳಿಯ ಭತ್ತ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು ಸರ್ಕಾರದ ನಿರ್ಲಕ್ಷ್ಯ ಧೋರಣೆ ಮುಂದುವರಿದರೆ ಭತ್ತದ ಕೃಷಿಯಿಂದ ವಿಮುಖರಾಗಬೇಕಾಗುತ್ತದೆ. ಕರಾವಳಿಯಲ್ಲಿ ಪ್ರತಿಬಾರಿ ಭತ್ತದ ಕಟಾವು ಮುಗಿಯುವ ಹಂತದಲ್ಲಿ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳನ್ನು ತೆರೆಯುತ್ತಿದ್ದು ರೈತರಿಗೆ ಲಾಭವಾಗುತ್ತಿಲ್ಲ. ಬದಲಿಗೆ ದಲ್ಲಾಳಿಗಳಿಗೆ ಲಾಭವಾಗುತ್ತಿದೆ.

ಇತರೆ ಜಿಲ್ಲೆಗಳಿಗಿಂತ ಕರಾವಳಿಯಲ್ಲಿ ಭತ್ತದ ನಾಟಿ ಬೇಗ ಆರಂಭವಾಗಿ ಅಕ್ಟೋಬರ್‌ನಲ್ಲಿ ಕಟಾವು ಶುರುವಾಗುವುದರಿಂದ ಬೇಗ ಖರೀದಿ ಕೇಂದ್ರ ತೆರೆದರೆ ರೈತರಿಗೆ ಅನುಕೂಲವಾಗಲಿದೆ. ಕ್ವಿಂಟಲ್ ಭತ್ತಕ್ಕೆ ಸರ್ಕಾರ ಕನಿಷ್ಠ 2500 ದರ ನಿಗದಿಪಡಿಸಬೇಕು ಎಂದು ಒತ್ತಾಯಿಸುತ್ತಾರೆ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು.

ಫಲಕೊಟ್ಟ ಹಡಿಲುಭೂಮಿ ಕೃಷಿ ಆಂದೋಲನ

ಕರಾವಳಿಯಲ್ಲಿ ಭತ್ತದ ಕೃಷಿಯಿಂದ ರೈತರು ವಿಮುಖವಾಗುತ್ತಿರುವ ಹೊತ್ತಿನಲ್ಲಿ ಕೇದಾರೋತ್ಥಾನ ಟ್ರಸ್ಟ್‌ನ ಹಡಿಲು ಭೂಮಿ ಕೃಷಿ ಆಂದೋಲನವು ಕೃಷಿಗೆ ಬೆನ್ನುಮಾಡಿದ್ದ ರೈತರನ್ನು ಮತ್ತೆ ಕೃಷಿಯತ್ತ ಮುಖ ಮಾಡುವಂತೆ ಮಾಡಿದೆ. ಉಡುಪಿ ಶಾಸಕ ಕೆ.ರಘುಪತಿ ಭಟ್‌ ನೇತೃತ್ವದಲ್ಲಿ ಕಳೆದ ವರ್ಷ ಟ್ರಸ್ಟ್‌ ಹಡಿಲುಭೂಮಿ ಅಭಿಯಾನ ಮಾಡಿದ್ದರ ಫಲವಾಗಿ ಜಿಲ್ಲೆಯಲ್ಲಿ ಭತ್ತದ ಕೃಷಿ ಹೆಚ್ಚಾಗಿದೆ. ಸದ್ಯ ಟ್ರಸ್ಟ್‌ ರೈತ ಉತ್ಪಾದಕ ಕಂಪೆನಿಯಾಗಿ ಬದಲಾಗಿದ್ದು, ರೈತರು ಬೆಳೆದ ಭತ್ತಕ್ಕೆ ಬ್ರಾಂಡ್ ಹಾಗೂ ಮಾರುಕಟ್ಟೆಗೆ ವೇದಿಕೆ ಒದಗಿಸಿದೆ. ಜತೆಗೆ, ಕೊರೊನಾ ಕಾರಣದಿಂದ ತವರಿಗೆ ಮರಳಿದ ಯುವಕರು ಕೃಷಿಯಲ್ಲಿ ಆಸಕ್ತಿ ತೋರಿದ ಪರಿಣಾಮ ಜಿಲ್ಲೆಯಲ್ಲಿ 2,000 ಹೆಕ್ಟೇರ್ ಭತ್ತದ ಕೃಷಿ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT