ಮಂಗಳವಾರ, ಫೆಬ್ರವರಿ 7, 2023
25 °C
2022–23ನೇ ಸಾಲಿನಲ್ಲಿ 58,808 ನಾಗರಿಕರಿಗೆ ಪರೀಕ್ಷೆ: 137 ಮಂದಿಯಲ್ಲಿ ಸೋಂಕು ದೃಢ: ಡಿಎಚ್‌ಒ ಡಾ.ನಾಗಭೂಷಣ ಉಡುಪ

ಉಡುಪಿ: ಎಚ್‌ಐವಿ ಸೋಂಕಿತ ಗರ್ಭಿಣಿಯರು ಶೂನ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಎಚ್‌ಐವಿ ಸೋಂಕಿತ ಗರ್ಭಿಣಿಯರ ಸಂಖ್ಯೆ ಶೂನ್ಯಕ್ಕಿಳಿದಿದೆ ಎಂದು ಡಿಎಚ್‌ಒ ಡಾ.ನಾಗಭೂಷಣ ಉಡುಪ ತಿಳಿಸಿದರು.

ಮಂಗಳವಾರ ಡಿಎಚ್‌ಒ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿ ‘2022–23ನೇ ಸಾಲಿನಲ್ಲಿ (ಅಕ್ಟೋಬರ್‌ವರೆಗೆ) 11,733 ಗರ್ಭಿಣಿಯರಿಗೆ ಎಚ್‌ಐವಿ ಪರೀಕ್ಷೆ ನಡೆಸಿದ್ದು ಯಾರಲ್ಲೂ ಎಚ್‌ಐವಿ ಸೋಂಕು ಪತ್ತೆಯಾಗಿಲ್ಲ. ಕಳೆದ ವರ್ಷ 6 ಗರ್ಭಿಣಿಯರಲ್ಲಿ ಸೋಂಕು ದೃಢಪಟ್ಟಿತ್ತು ಎಂದು ತಿಳಿಸಿದರು.

ಇದೇ ಅವಧಿಯಲ್ಲಿ 58,801 ಮಂದಿಗೆ ಎಚ್‌ಐವಿ ಪರೀಕ್ಷೆ ಮಾಡಲಾಗಿದ್ದು 137 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 2021–22ರಲ್ಲಿ 183, 2020–21ರಲ್ಲಿ 189 ಮಂದಿಯಲ್ಲಿ ಎಚ್‌ಐವಿ ದೃಢಪಟ್ಟಿತ್ತು. 2016ರ ನಂತರ ಗರ್ಭಿಣಿಯರಲ್ಲಿ ಎಚ್‌ಐವಿ ಪತ್ತೆಯಾಗಿಲ್ಲ ಎಂದು ವಿವರ ನೀಡಿದರು.

ಉಡುಪಿ ಎಆರ್‌ಟಿ ಕೇಂದ್ರದಲ್ಲಿ 2607, ಕುಂದಾಪುರ ಕೇಂದ್ರದಲ್ಲಿ 1293, ಮಣಿಪಾಲ ಕೆಎಂಸಿಯಲ್ಲಿ 81 ಮಂದಿ ಸೇರಿ ಜಿಲ್ಲೆಯಲ್ಲಿ 398 ಎಚ್‌ಐವಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರ್ಷ ಜಿಲ್ಲೆಯಲ್ಲಿ ಪತ್ತೆಯಾಗಿರುವ 137 ಎಚ್‌ಐವಿ ಪೀಡಿತರಲ್ಲಿ 46 ಮಂದಿ ಹೊರ ಜಿಲ್ಲೆಗಳವರಾಗಿದ್ದು, ಮೂವರು ಹೊರ ರಾಜ್ಯದವರಾಗಿದ್ದಾರೆ. ಈವರ್ಷ 48 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಡಿಎಚ್‌ಒ ಅಂಕಿ ಅಂಶ ನೀಡಿದರು.

ಬೆಳಗಾವಿ ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಅತಿ ಹೆಚ್ಚು ಎಚ್ಐವಿ ಸೋಂಕಿತರಿದ್ದು ಉಡುಪಿ ಜಿಲ್ಲೆ ಪಟ್ಟಿಯಲ್ಲಿ ಕೊನೆಯಲ್ಲಿದೆ. ಆರೋಗ್ಯ ಇಲಾಖೆಯಿಂದ ಡಿಸೆಂಬರ್‌ನಲ್ಲಿ 217 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಎಚ್‌ಐವಿ ಸೇರಿದಂತೆ ಹದಿ ಹರೆಯದ ಕಾಯಿಲೆಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸೋಂಕಿತರಿಗೆ ನೆರವು: ಎಚ್‌ಐವಿ ಸೋಂಕಿತರಿಗೆ ಸರ್ಕಾರ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು ಸೋಂಕಿತರ ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರತಿ ತಿಂಗಳು 1 ಸಾವಿರ ಸಹಾಯಧನ, ಶೇ 50ರ ರಿಯಾಯಿತಿ ದರದಲ್ಲಿ ಬಸ್ ಪಾಸ್ ಸೌಲಭ್ಯ ನೀಡಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಚಿದಾನಂದ ಸಂಜು ಇದ್ದರು.

2022–23ರಲ್ಲಿ ಎಚ್‌ಐವಿ ಪರೀಕ್ಷೆಗೊಳಪಟ್ಟವರು–58801

2022–23ರಲ್ಲಿ ಎಚ್‌ಐವಿ ಸೋಂಕು ದೃಢಪಟ್ಟವರು–137

2021–22ರಲ್ಲಿ ದೃಢಪಟ್ಟ ಎಚ್‌ಐವಿ ಸೋಂಕು–183

2020–22ರಲ್ಲಿ ದೃಢಪಟ್ಟ ಎಚ್‌ಐವಿ ಸೋಂಕು–189

ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಟ್ಟು ಸೋಂಕಿತರು–3981

2022–23ರಲ್ಲಿ ಸಂಗ್ರಹವಾದ ರಕ್ತದ ಯುನಿಟ್‌–18,624

2022–22ರಲ್ಲಿ ಸಂಗ್ರಹವಾದ ರಕ್ತದ ಯುನಿಟ್‌–27985

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು