ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಂದೂರು ಆಂಬುಲೆನ್ಸ್ ಅಪಘಾತ: ಚಿಕಿತ್ಸೆಗೆ ಬಂದು ಮಸಣ ಸೇರಿದ ನತದೃಷ್ಟರು

ಮೃತರು ಹೊನ್ನಾವರದವರು; ಬ್ರೇಕ್ ಹಾಕಿದ್ದು ಅಪಘಾತಕ್ಕೆ ಕಾರಣವಾಯ್ತಾ ?
Last Updated 20 ಜುಲೈ 2022, 16:12 IST
ಅಕ್ಷರ ಗಾತ್ರ

ಉಡುಪಿ/ಬೈಂದೂರು: ಹೃದ್ರೋಗಕ್ಕೆ ಚಿಕಿತ್ಸೆ ಪಡೆಯಲು ಬಂದ ರೋಗಿ ಆಸ್ಪತ್ರೆ ತಲುಪುವ ಮುನ್ನವೇ ಮಸಣ ಸೇರಿದ್ದು, ರೋಗಿಯ ನೆರವಿಗೆ ಬಂದ ಮೂವರು ನತದೃಷ್ಟರೂ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.

ತಾಲ್ಲೂಕಿನ ಶಿರೂರು ಟೋಲ್ ಗೇಟ್‌ ಬಳಿ ಬುಧವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟು ಐವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

ಅಪಘಾತಕ್ಕೆ ಕಾರಣ:

ಟೋಲ್ ಕೇಂದ್ರದ ಸಿಸಿಟಿವಿ ಕ್ಯಾಮೆರಾದಲ್ಲಿ ಅಪಘಾತದ ಮೈಜುಮ್ಮೆನ್ನಿಸುವ ದೃಶ್ಯಗಳು ದಾಖಲಾಗಿವೆ. ಅತಿ ವೇಗವಾಗಿ ಬಂದ ಆಂಬುಲೆನ್ಸ್‌ ಚಾಲಕನ ನಿಯಂತ್ರಣ ತಪ್ಪಿ ಟೋಲ್ ಕೇಂದ್ರಕ್ಕೆ ಗುದ್ದಿ, ಆಂಬುಲೆನ್ಸ್‌ ಒಳಗಿದ್ದ ರೋಗಿಯ ಸಹಿತ ಎಲ್ಲರೂ ಚೆಲ್ಲಾಪಿಲ್ಲಿಯಾಗಿ ರಸ್ತೆಗೆ ಬಂದು ಬೀಳುವ ದೃಶ್ಯ ಭೀಕರವಾಗಿವೆ.

ಅತಿ ವೇಗವಾಗಿ ಆಂಬುಲೆನ್ಸ್ ಚಲಾಯಿಸಿಕೊಂಡು ಬಂದ ಚಾಲಕ ವೇಗವನ್ನು ತಗ್ಗಿಸಲು ಬಲವಾಗಿ ಬ್ರೇಕ್ ಒತ್ತಿದ್ದು ಅಪಘಾತಕ್ಕೆ ಕಾರಣ ಎಂಬುದು ಅಪಘಾತದ ದೃಶ್ಯಗಳನ್ನು ಗಮನಿಸಿದರೆ ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.

ಆಂಬುಲೆನ್ಸ್ ಸಾಗುತ್ತಿದ್ದ ಮಾರ್ಗದಲ್ಲಿ ಅಡ್ಡಲಾಗಿದ್ದ ಬ್ಯಾರಿಕೇಡ್‌ಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ವಾಹನ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿರುವ ಸಾದ್ಯತೆಗಳು ಹೆಚ್ಚಾಗಿವೆ ಎನ್ನಲಾಗಿದೆ.

ಟೋಲ್‌ ಕೇಂದ್ರದ ಬಳಿ ವಾಹನಗಳ ವೇಗವನ್ನು ತಗ್ಗಿಸಲು ದೊಡ್ಡ ಹಂಪ್ ನಿರ್ಮಿಸಲಾಗಿರುತ್ತದೆ. ವೇಗವಾಗಿ ಆಂಬುಲೆನ್ಸ್ ಚಲಾಯಿಸಿಕೊಂಡು ಬಂದ ಚಾಲಕ ಹಂಪ್‌ ಬಂದಾಗ ಬ್ರೇಕ್ ಹಾಕಿದ್ದು ವಾಹನ ನಿಯಂತ್ರಣ ತಪ್ಪಿ ಅಪಘಾತಕ್ಕೆ ಕಾರಣವಾಗಿರಬಹುದು. ಮತ್ತೊಂದೆಡೆ ಸುರಿಯುತ್ತಿದ್ದ ಜಿಟಿ ಜಿಟಿ ಮಳೆಯೂ ಪ್ರತಿಕೂಲವಾಗಿತ್ತು ಎನ್ನಲಾಗಿದೆ.

ಅಪಘಾತದ ತೀವ್ರತೆಗೆ ಆಂಬುಲೆನ್ಸ್‌ ಸಂಪೂರ್ಣ ನಜ್ಜುಗುಜ್ಜಾಗಿದೆ. ವಾಹನದ ಒಳಗಿದ್ದ ವೈದ್ಯಕೀಯ ಉಪಕರಣಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಟೋಲ್‌ ಕೇಂದ್ರಕ್ಕೂ ಹೆಚ್ಚಿನ ಹಾನಿಯಾಗಿದೆ.

ಸಾವು ಬದುಕಿನ ಮಧ್ಯೆ ಹೋರಾಟ:

ಆಂಬುಲೆನ್ಸ್‌ಗೆ ದಾರಿ ಮಾಡಿಕೊಡಲು ಹೆದ್ದಾರಿಗೆ ಅಡ್ಡಲಾಗಿದ್ದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಲು ಹೋದಿ ಟೋಲ್ ಸಿಬ್ಬಂದಿ ಶಂಭಾಜಿ ಘೋರ್ಪಡೆ ಎಂಬುವವರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತದಲ್ಲಿ ಟೋಲ್ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡರೂ, ಅಪಘಾತದಲ್ಲಿ ಬದುಕಿದ್ದವರ ಜೀವ ಉಳಿಸಲು ಟೋಲ್ ಸಿಬ್ಬಂದಿ ಹಾಗೂ ಸಾರ್ವಜನಿಕರು ನೆರವಿಗೆ ದಾವಿಸಿ ಬೇರೊಂದು ಆಂಬುಲೆನ್ಸ್‌ನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಪ್ರದರ್ಶಿಸಿದ್ದಾರೆ. ಗಾಯಾಳುಗಳನ್ನು ಉಡುಪಿ ಹಾಗೂ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತಪಟ್ಟವರು ಯಾರು?:

ಚಿಕಿತ್ಸೆ ಪಡೆಯಲು ಬರುತ್ತಿದ್ದ ಹೃದ್ರೋಗಿ ಗಜಾನನ ನಾಯ್ಕ, ಸಂಬಂಧಿಗಳಾದ ಮಂಜುನಾಥ ನಾಯ್ಕ, ಲೋಕೇಶ್ ನಾಯ್ಕ, ಜ್ಯೋತಿ ನಾಯ್ಕ.

ಗಾಯಗೊಂಡವರು: ಆಂಬುಲೆನ್ಸ್‌ ಒಳಗಿದ್ದ ಗಣೇಶ್ ನಾಯ್ಕ, ಗೀತಾ ಗಜಾನನ ನಾಯ್ಕ, ಶಶಾಂಕ್ ನಾಯ್ಕ, ಆಂಬುಲೆನ್ಸ್ ಚಾಲಕ ರೋಷನ್‌ ಹಾಗೂ ಟೋಲ್ ಸಿಬ್ಬಂದಿ ಶಂಭಾಜಿ ಘೋರ್ಪಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT