ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಗಾರರ ರಕ್ಷಣೆಗೆ ಬದ್ಧ: ಶೋಭಾ

ಭೂತಾನ್‌ನಿಂದ ಅಡಿಕೆ ಆಮದು, ಒಂದು ವರ್ಷದ ಮಟ್ಟಿಗೆ ಒಪ್ಪಂದ
Last Updated 1 ಅಕ್ಟೋಬರ್ 2022, 4:38 IST
ಅಕ್ಷರ ಗಾತ್ರ

ಕಾರ್ಕಳ: ನಮ್ಮ ನೆರೆರಾಷ್ಟ್ರ ಭೂತಾನ್‌ನ ಜೊತೆಗಿನ ಒಪ್ಪಂದ ಹಾಗೂ ಅಲ್ಲಿನ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಒಂದು ವರ್ಷದ ಮಟ್ಟಿಗೆ ಅಲ್ಲಿಂದ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ಕಲ್ಯಾಣ ಇಲಾಖೆಯ
ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡಿಕೆ ಆಮದಿನ ಮೇಲೆ ಕೇಂದ್ರ ಸರ್ಕಾರ ಅಧಿಕ ತೆರಿಗೆ ಹೇರಿರುವ ಕಾರಣ ಅಡಿಕೆಗೆ ಇಂದು ₹450 ರಿಂದ ₹500 ತನಕ ಬೆಲೆಯಿದೆ. ಕೇಂದ್ರ ಸರ್ಕಾರ ಅಡಿಕೆ ಸೇರಿದಂತೆ ಎಲ್ಲ ಬೆಳೆಗಾರರ ರಕ್ಷಣೆಗೆ ಬದ್ಧವಾಗಿದೆ. ನರೇಂದ್ರ ಮೋದಿ ಸರ್ಕಾರ ಮೂಲಭೂತ ಸೌಕರ್ಯಕ್ಕಾಗಿ ವಿಶೇಷ ಒತ್ತು ನೀಡುತ್ತಿದ್ದು ರೈಲ್ವೆ, ರಸ್ತೆ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಒದಗಿಸುತ್ತಿದೆ. ದೇಶದ ಶೇ 80ರಷ್ಟು ಮಂದಿಗೆ ಕೇಂದ್ರದ ವಿವಿಧ ಯೋಜನೆಯ ಪ್ರಯೋಜನ ಪಡೆಯುವಂತಾಗಿದೆ ಎಂದರು.

ವಾಜಪೇಯಿ ಸರ್ಕಾರ 2001ರಲ್ಲಿ ಸಿಮಿ ಸಂಘಟನೆಯನ್ನು ನಿಷೇಧ ಮಾಡಿತ್ತು. ಸಿಮಿ ಮಾದರಿಯಲ್ಲಿ ನಂತರ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಹುಟ್ಟು ಹಾಕಲಾಯಿತು. ಈ ಸಂಘಟನೆಯನ್ನು ನಿಷೇಧಿಸುವಂತೆ ಹಲವಾರು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೆ. ಇದೀಗ ಎಎನ್‌ಐ ದಾಳಿ ವೇಳೆ ಪಿಎಫ್‌ಐ ಸಂಘಟನೆ ನಡೆಸುತ್ತಿರುವ ಭಯೋತ್ಪಾದನೆ, ಕೋಮುಗಲಭೆಗೆ ಪ್ರಚೋದನೆ, ದೇಶದ್ರೋಹಿ ಕಾರ್ಯಗಳು ಸಾಕ್ಷಿ ಸಹಿತ ಸಾಬೀತಾಗಿವೆ. ಹೀಗಾಗಿ ಕೇಂದ್ರ ಸರ್ಕಾರ ಪಿಎಫ್‌ಐಯನ್ನು ನಿಷೇಧ ಮಾಡಿದೆ. ಅದಕ್ಕಾಗಿ ಪ್ರಧಾನಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಅಭಿನಂದಿಸುವೆ ಎಂದರು.

ಸಿದ್ದರಾಮಯ್ಯ ಸರ್ಕಾರ ಪಿಎಫ್‌ಐ ಸಂಘಟನೆಯ ಅಪರಾಧಿಗಳ ಕೇಸ್ ಹಿಂದಕ್ಕೆ ಪಡೆದಿರುವುದು ಮತ್ತು ಜೈಲಿನಲ್ಲಿದ್ದ ಪಿಎಫ್‌ಐ ಕಾರ್ಯಕರ್ತರನ್ನು ಬಿಡುಗಡೆ ಮಾಡಿದ್ದೇ ಇಷ್ಟೆಲ್ಲ ಅವಾಂತರಗಳಿಗೆ ಕಾರಣ. ಜಾತಿ, ಧರ್ಮ ನೋಡಿ ಸಿದ್ದರಾಮಯ್ಯ ಸರ್ಕಾರ ಯೋಜನೆ ರೂಪಿಸುತ್ತಿತ್ತು. ಎಸ್ ಡಿಪಿ ಐ ಒಂದು ರಾಜಕೀಯ ಪಕ್ಷವಾಗಿರುವುದರಿಂದ ಚುನಾವಣಾ ಆಯೋಗವೆ ಅದರ ಬಗ್ಗೆ ಕ್ರಮಕೈಗೊಳ್ಳಲಿದೆ. ರಾಷ್ಟ್ರ ವಿರೋಧಿ ಕೃತ್ಯಗಳಲ್ಲಿ ಭಾಗಿಯಾದ ಸಾಕ್ಷ್ಯ ದೊರೆತಲ್ಲಿ ನಿಷೇಧ ವಾಗುವುದು ಗ್ಯಾರಂಟಿ ಎಂದರು.

ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ಕಾರ್ಕಳ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ನಾಯಕರಾದ ಎಂ.ಕೆ .ವಿಜಯಕುಮಾರ್, ನವೀನ್ ನಾಯಕ್, ಬೋಳ ಜಯರಾಮ ಸಾಲ್ಯಾನ್, ರೇಷ್ಮಾ ಶೆಟ್ಟಿ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT