ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ರಿ, ಕಾರ್ಕಳ ತಾಲ್ಲೂಕಿನ ಅಡಿಕೆ ತೋಟಗಳಲ್ಲಿ ಅಂಬ್ರೋಸಿಯಾ ಬಾಧೆ

Last Updated 17 ಅಕ್ಟೋಬರ್ 2022, 4:23 IST
ಅಕ್ಷರ ಗಾತ್ರ

ಹೆಬ್ರಿ: ಕಾರ್ಕಳ ಮತ್ತುಹೆಬ್ರಿ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಅಡಿಕೆ ಬೆಳೆಗೆ ಅಂಬ್ರೋಸಿಯಾ ಕೀಟ ಬಾಧೆ ಕಾಣಿಸಿಕೊಂಡಿದ್ದು ರೈತರಲ್ಲಿ ಆತಂಕ ಮೂಡಿದೆ. ಕೊಳೆರೋಗದಿಂದಾಗಿಈಗಾಗಲೇ ಬೇಸತ್ತಿರುವ ರೈತರು ಕೀಟದ ಕಾಟದಿಂದಾಗಿ ಈಗ ಹೊಡೆತ ಅನುಭವಿಸುತ್ತಿದ್ದಾರೆ.

2018ರಲ್ಲಿ ಪುತ್ತೂರು, ಸುಳ್ಯ ಭಾಗಗಳಲ್ಲಿ ಕಂಡು ಬಂದಿದ್ದ ಈ ಬಾಧೆ ಈಗ ಹೆಬ್ರಿ ತಾಲ್ಲೂಕಿನ ಮೇಗದ್ದೆ ಹಾಗೂ ಕಾರ್ಕಳದ ಶಿರ್ಲಾಲು ಭಾಗದ ತೋಟಗಳಲ್ಲಿ ಕಾಣಿಸಿಕೊಂಡಿದೆ. ಈ ಬಗ್ಗೆ ಅಧ್ಯಯನ ನಡೆಸಲು ತೋಟಗಾರಿಕೆ ಇಲಾಖೆಯು ಬ್ರಹ್ಮಾವರದ ಪ್ರಾದೇಶಿಕ ಕೃಷಿ–ತೋಟಗಾರಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳೊಂದಿಗೆ ಚರ್ಚೆ ನಡೆಸಿದೆ.

ಈ ಕೀಟವು ಕುಟ್ಟೆ ಜಾತಿಗೆ ಸೇರಿದ್ದು ಯೂಪ್ಲಾಟಿಪಸ್ ಪ್ಯಾರಾಲ್ಲೆಲಸ್ ಎಂದು ಗುರುತಿಸಲಾಗಿದೆ. ಸುಮಾರು 4 ಮಿಮೀ ಉದ್ದದ, ಕಂದು ಬಣ್ಣದ ಇದು ಹಳದಿ ಬಣ್ಣದ ರೋಮ ಹೊಂದಿದೆ. ಸಸಿ ಮತ್ತು ಮರಗಳಿಗೆ ಇವು ತೊಂದರೆ ಕೊಡುತ್ತಿದ್ದು ಫ್ರೌಢ ಹೆಣ್ಣು ಕೀಟವು ಕಾಂಡದ ಮೇಲೆ 1.5 ಮಿಮೀ ಸುತ್ತಳತೆಯ ಮತ್ತು 1.2ರಿಂದ 4.6 ಸೆಮೀ ಅಳದ ರಂದ್ರ ಕೊರೆದು ಒಳಗೆ ಪ್ರವೇಶಿಸಿ ಸಂತಾನೋತ್ಪತ್ತಿ ಮಾಡುತ್ತದೆ. ಮೊದಲು ಮರಗಳ ಕಾಂಡದ ಭಾಗದ ಅಲ್ಲಲ್ಲಿ ಕಂದು ಬಣ್ಣದ ಅಂಟು ದ್ರವ ಸೋರಿಕೆಯಾಗುತ್ತದೆ. ದ್ರವದ ತಳಭಾಗದಲ್ಲಿ ಪಿನ್‍ಹೆಡ್ ಗಾತ್ರದ ರಂಧ್ರಗಳು ಇರುತ್ತವೆ. ಇದು ಮರದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.

ನಂತರ ನೂರಾರು ರಂದ್ರಗಳಿಂದ ಬಿಳಿ ಬಣ್ಣದ ಪುಡಿ ಉದುರುತ್ತದೆ. ಮುಂದಿನ ಹಂತದಲ್ಲಿ ಅಡಿಕೆ ಮರದ ಕೆಳ ಭಾಗದ ಎಲೆಗಳು ಹಳದಿಯಾಗುತ್ತದೆ. ಈ ಸಂದರ್ಭದಲ್ಲಿ ಶಿರ ಕಳಚಿ ಬೀಳುವ ಸಾಧ್ಯತೆ ಇರುತ್ತದೆ. 7-8 ವರ್ಷಗಳ ಗಿಡಗಳಲ್ಲಿ ಬಾಧೆ ಹೆಚ್ಚು ಕಂಡು ಬರುತ್ತಿದ್ದು ಅಧಿಕ ನೀರಾವರಿಯ, ತಗ್ಗು ಪ್ರದೇಶದ ಹಾಗೂ ಅತಿ ಪೋಷಕಾಂಶಗಳನ್ನು ಹಾಕುವ ತೋಟಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ನಿಯಂತ್ರಣ ಹೇಗೆ: ಒಂದು ದಾಳಿಯಿಂದ ಹೆಚ್ಚಾಗಿ ಏನೂ ಸಮಸ್ಯೆ ಇರುವುದಿಲ್ಲ. ಆದರೆ ಮಿತಿಮೀರಿದರೆ ಅಪಾಯದ ಸಾಧ್ಯತೆ ಇರುತ್ತದೆ. ಇದರ ನಿಯಂತ್ರಣಕ್ಕೆ ಸಾವಯವ ಹಾಗೂ ರಾಸಾಯನಿಕ ರಸಗೊಬ್ಬರದಸಮತೋಲನ, ಸಮರ್ಪಕ ಬಸಿಗಾಲುವೆ ಹಾಗೂ ಹದವಾದ ನೀರಾವರಿ ಅವಶ್ಯ. ಕೀಟ ಭಾದಿಸಿದ ಮರ ಹಾಗೂ ಸುತ್ತಲಿನ ಮರಗಳಿಗೆ ಕ್ಲೋರೊಪೈರಿಫಾಸ್ 20 ಇಸಿ ಕೀಟ ನಾಶಕವನ್ನು ಪ್ರತಿ ಲೀಟರ್ ನೀರಿಗೆ2 ಮಿಲೀ ಬೆರೆಸಿ ಕಾಂಡದ ಬಾಗಕ್ಕೆ ಹಚ್ಚಬೇಕು. ಸಾವಯವ ಗೊಬ್ಬರ ಹಾಗೂ ಯೂರಿಯಾ ಬಳಸಿದರೆ ಕಾಂಡದ ಭಾಗ ಮೃಧುವಾಗಿ ಕೀಟದ ದಾಳಿಗೆ ಅನುಕೂಲವಾಗುತ್ತದೆ. ಆದ್ದರಿಂದ ರಾಸಾಯನಿಕ ಹಾಗೂ ಸಾವಯವ ಗೊಬ್ಬರದ ಸಮ ಮಿಶ್ರಣ ಇರಬೇಕು ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT