ಶನಿವಾರ, ಜುಲೈ 24, 2021
28 °C
ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಶ್ವಾಸ

12 ದಿನಗಳಲ್ಲಿ ಸೋಂಕಿತರೆಲ್ಲ ಡಿಸ್‌ಚಾರ್ಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: 10 ರಿಂದ 12 ದಿನಗಳಲ್ಲಿ ಜಿಲ್ಲೆಯ ಎಲ್ಲ ಕೋವಿಡ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವರೂ ಆದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾತನಾಡಿದ ಸಚಿವರು, ಎರಡು ತಿಂಗಳ ಹಿಂದೆ ಹಸಿರು ವಲಯದಲ್ಲಿದ್ದ ಜಿಲ್ಲೆ ಸದ್ಯ ರಾಜ್ಯದಲ್ಲೇ ಅತಿಹೆಚ್ಚು ಸೋಂಕಿತರಿರುವ ಜಿಲ್ಲೆಯಾಗಿದೆ. ಇದಕ್ಕೆ ಮಹಾರಾಷ್ಟ್ರದಿಂದ ಬಂದವರು ಕಾರಣ. ಮುಂದೆ, ಸೋಂಕಿನಿಂದ ಸಾವು ಸಂಭವಿಸದಂತೆ ಎಚ್ಚರವಹಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.

ಹೋಂ ಕ್ವಾರಂಟೈನ್‌ಗೆ ಒತ್ತು:

ಸರ್ಕಾರ ಹೋಂ ಕ್ವಾರಂಟೈನ್‌ಗೆ ಒತ್ತು ನೀಡುತ್ತಿದ್ದು, ಗ್ರಾಮ ಮಟ್ಟದಲ್ಲಿ ಟಾಸ್ಕ್‌ಫೋರ್ಸ್‌ ರಚಿಸುತ್ತಿದೆ. ಪಿಡಿಒ, ಆರೋಗ್ಯ ಕಾರ್ಯಕರ್ತೆಯರು, ಗ್ರಾಮ ಲೆಕ್ಕಿಗ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪೊಲೀಸರನ್ನು ಸಮಿತಿಯಲ್ಲಿರಲಿದ್ದು, ಕ್ವಾರಂಟೈನ್‌ನಲ್ಲಿದ್ದವರು ಮನೆಬಿಟ್ಟು ಹೊರಬಾರದಂತೆ ಎಚ್ಚರವಹಿಸಲಿದ್ದಾರೆ. ಇದಕ್ಕಾಗಿ ರಾಜ್ಯಮಟ್ಟದಲ್ಲಿ ಶೀಘ್ರ ಎಸ್‌ಒಪಿ ರಚನೆ ಮಾಡಲಾಗುವುದು ಎಂದರು.

ಸೋಂಕಿತರು ಇರುವ ಜಾಗವನ್ನು ಸೀಲ್‌ಡೌನ್‌ ಮಾಡಬೇಕು ಎಂಬ ಒತ್ತಾಯ ಜಿಲ್ಲೆಯ ಶಾಸಕರಿಂದ ಕೇಳಿಬಂದಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಬೊಮ್ಮಾಯಿ ಭರವಸೆ ನೀಡಿದರು.

ಶೀಘ್ರ ಸರ್ಕಾರಿ ಲ್ಯಾಬ್ ಆರಂಭ:

10 ರಿಂದ 12 ದಿನಗಳಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್‌ ಪ್ರಯೋಗಾಲಯ ಕಾರ್ಯಾರಂಭ ಮಾಡಲಿದೆ. ಸಿವಿಲ್ ಕಾಮಗಾರಿ ಮುಕ್ತಾಯವಾಗಿದ್ದು, ಶೀಘ್ರ ವೈದ್ಯಕೀಯ ಉಪಕರಣಗಳು ಬರಲಿವೆ ಎಂದರು.

ಕಾರ್ಕಳ ಮತ್ತು ಕುಂದಾಪುರ ಆಸ್ಪತ್ರೆಗಳಿಗೆ ಕೋವಿಡ್ ಆಸ್ಪತ್ರೆಯ‌ ನಿಯಮಾವಳಿ ಪ್ರಕಾರ ಅಗತ್ಯ ಸಿಬ್ಬಂದಿ ನೇಮಕ ಹಾಗೂ 6 ತಿಂಗಳ ಅವಧಿಗೆ ಆಶಾ ಹಾಗೂ ಆರೋಗ್ಯ ಕಾರ್ಯಕರ್ತೆಯರ ನೇಮಕಾತಿಗೆ ಸರ್ಕಾರ ಒಪ್ಪಿಗೆ ನೀಡಲಿದೆ ಎಂದರು.

ಜಿಲ್ಲೆಯಲ್ಲಿ 12,530 ಜನರ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿಯಲ್ಲಿ ಅತಿ ಹೆಚ್ಚಿನ ಪರೀಕ್ಷೆಗಳು ನಡೆದಿವೆ. 17 ಮಂದಿಯಲ್ಲಷ್ಟೆ ಸೋಂಕಿನ ಲಕ್ಷಣಗಳಿದ್ದು, 929 ಸೋಂಕಿತರಿಗೆ ಲಕ್ಷಣಗಳೇ ಇಲ್ಲ ಎಂದು ವಿವರ ನೀಡಿದರು.

ಆರೋಪದಲ್ಲಿ ಹುರುಳಿಲ್ಲ: ಡಿಸಿ

ಮಹಾರಾಷ್ಟ್ರ ಹೊರತುಪಡಿಸಿ ಬೇರೆ ರಾಜ್ಯಗಳಿಂದ ಸಾವಿರಾರು ಮಂದಿ ಜಿಲ್ಲೆಗೆ ಬಂದು ಕ್ವಾರಂಟೈನ್‌ನಲ್ಲಿದ್ದರು. ಇವರ ಪೈಕಿ ಎಂಟತ್ತು ಜನರಿಗೆ ಮಾತ್ರ ಸೋಂಕು ಕಾಣಿಸಿಕೊಂಡಿದೆ. ಹಾಗಾಗಿ, ಕ್ವಾರಂಟೈನ್ ಕೇಂದ್ರಗಳಿಂದ ಸೋಂಕು ಹರಡಿದೆ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

ಮುಂದೆ ಮುಂಬೈನಿಂದ ಜಿಲ್ಲೆಗೆ ಬಂದವರನ್ನು ಸರ್ಕಾರಿ ಕ್ವಾರಂಟೈನ್‌ನಲ್ಲಿರಿಸಲು ಸಿದ್ಧತೆ ನಡೆಸಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುವ ಕೇಂದ್ರಗಳನ್ನು ಕ್ವಾರಂಟೈನ್‌ಗೆ ಬಳಸುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಶಾಸಕರಾದ ರಘುಪತಿ ಭಟ್, ಸುನೀಲ್ ಕುಮಾರ್,
ಲಾಲಾಜಿ ಮೆಂಡನ್, ಸುಕುಮಾರ ಶೆಟ್ಟಿ, ಕರಾವಳಿ ಅಬಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ, ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹ್ಲೋಟ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು