ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿ–ಭಾವದ ಕಟ್ಟದಪ್ಪ, ಪೊಟ್ಟಪ್ಪ ಸೇವೆ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ವಿಶೇಷ ಪೂಜೆ
Last Updated 7 ಆಗಸ್ಟ್ 2022, 7:19 IST
ಅಕ್ಷರ ಗಾತ್ರ

ಪಡುಬಿದ್ರಿ: ಪಡುಬಿದ್ರಿಯ ಸುಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ವಿಶೇಷ ಕಟ್ಟದಪ್ಪ (ಕಟಾಹಾಪೂಪ) ಸಾವಿರಾರು ಭಕ್ತಾಧಿಗಳ ಸಮಕ್ಷಮದಲ್ಲಿ ವಿಜೃಂಭಣೆಯಿಂದ ಜರಗಿತು.

ಅವಿಭಜಿತ ಜಿಲ್ಲೆಯಲ್ಲದೆ ದೇಶ, ವಿದೇಶದ ಭಕ್ತರು ಇಲ್ಲಿ ನಡೆಯುವ ಕಟ್ಟದಪ್ಪ ಸೇವೆಯಲ್ಲಿ ಪಾಲ್ಗೊಳ್ಳುವುದು ವಿಶೇಷ. ಇಲ್ಲಿ ನಡೆಯುವ ಕಟ್ಟದಪ್ಪ ಮತ್ತು ಪೊಟ್ಟಪ್ಪ ಸೇವೆಗಳು ಪ್ರಸಿದ್ಧಿ ಪಡೆದಿವೆ.

ಪಡುಬಿದ್ರಿ ಗ್ರಾಮದ ಕಲ್ಲಟ್ಟೆ ಎಂಬಲ್ಲಿ ಕಟ್ಟಪುಣಿ (ಅಣೆಕಟ್ಟು) ನಿಲ್ಲುತ್ತಿರಲಿಲ್ಲ ಎಂದು ಹಿಂದಿನ ಕಾಲದಲ್ಲಿ ಗ್ರಾಮದ ಹಿರಿಯರು ಪಡುಬಿದ್ರಿ ಮಹಾ ಗಣಪತಿಗೆ ಕಟ್ಟದಪ್ಪ ಹರಕೆ ಹೇಳಿದ್ದರಂತೆ. ಹರಕೆ ಸಲ್ಲಿಸಿದ ಬಳಿಕ ಕಟ್ಟಪುಣಿ ಸುದೃಢವಾಗಿ ನಿಂತಿತು ಎಂದು ಇಲ್ಲಿನ ಭಕ್ತರ ನಂಬಿಕೆ. ಅಂದು 5-6ಸೇರು ಅಕ್ಕಿ ಹಿಟ್ಟು ಮೂಲಕ ಮಧ್ಯಾಹ್ನ ನಡೆಯುತ್ತಿದ್ದ ಸೇವೆ ಇಂದು ಜಗದಗಲ ಹರಡಿ 100 ಮುಡಿವರೆಗೆ ಬಂದು ತಲುಪಿದೆ.

ಬ್ರಿಟಿಷ್ ಕಾಲದಲ್ಲಿ ಅಧಿಕಾರಿಯೊಬ್ಬ ದೇವಳದ ಮುಂಭಾಗ ಕುದುರೆ ಏರಿ ಬಂದಾಗ ದೇವರಿಗೆ ನಮಸ್ಕರಿಸಲಿಲ್ಲ. ಸ್ಥಳೀಯರು ನಮಸ್ಕರಿಸಿ ತೆರಳುವಂತೆ ವಿನಂತಿಸಿದರೂ ಆತ ಕೇಳಲಿಲ್ಲ. ತಕ್ಷಣ ಕುದುರೆ ಕಾಲು ಮುರಿದು ಆತನ ಸಂಚಾರಕ್ಕೆ ತೊಂದರೆಯಾಗಿತ್ತು. ಭಕ್ತರ ಸಲಹೆ
ಯಂತೆ ಗಣಪತಿಗೆ ಪೊಟ್ಟಪ್ಪ ಸೇವೆ ಹರಕೆ ಹೇಳಿದ ಬಳಿಕ ಆತನ ಪ್ರಯಾಣ ಮುಂದುವರೆಯಿತು ಎಂಬುದು ಪ್ರತೀತಿ. ಆ ಬಳಿಕ ಇಲ್ಲಿ ಪೊಟ್ಟಪ್ಪ ಸೇವೆಯು ಪ್ರಸಿದ್ಧಿ ಪಡೆಯಿತು ಎನ್ನುತ್ತಾರೆ.

20 ವರ್ಷಗಳಿಂದ ಶ್ರೀ ದೇವಳದಲ್ಲಿ ಯೋಗೀಶ್ ಭಟ್ ಕರ್ಕಟೆ ಹೌಸ್‌ ಅವರ 85 ಜನರ ತಂಡ ಇಲ್ಲಿ ಕಟ್ಟದಪ್ಪ ತಯಾರಿಸುವ ಕಾಯಕ ಮಾಡುತ್ತಾ ಬಂದಿದೆ. 16 ವರ್ಷಗಳ ಹಿಂದೆ 20ಮುಡಿ ಅಕ್ಕಿಹಿಟ್ಟಿನಿಂದ ಕಟ್ಟದಪ್ಪ ತಯಾರಿಸಲಾಗುತ್ತಿತ್ತು ಎನ್ನುವ ಯೋಗಿಶ್ ಭಟ್, ಈ ವರ್ಷ 100 ಮುಡಿ ಅಕ್ಕಿ ಹಿಟ್ಟು ಉಪಯೋಗಿಸಿ ಕಟ್ಟದಪ್ಪ ತಯಾರಿಸಲಾಗುತ್ತಿದೆ. ಇದರಿಂದ ಇದರ ಜನಪ್ರಿಯತೆ ಹಾಗೂ ಭಕ್ತರ ಭಕ್ತಿ ಭಾವದ ಬಗ್ಗೆ ಅರಿಯಬಹುದು ಎನ್ನುತ್ತಾರೆ.

ರಾತ್ರಿ ವೇಳೆ ಸಾವಿರಾರು ಭಕ್ತರ ಸಮ್ಮುಖ ಶ್ರೀ ಗಣಪತಿಗೆ ವಿಶೇಷ ಪೂಜೆಯೊಂದಿಗೆ ಕಟ್ಟದಪ್ಪಗಳನ್ನು ಸಮರ್ಪಿಸಿದ ಬಳಿಕ ಸೇವೆ ಭರಿಸಿದ ಭಕ್ತರಿಗೆ ಈ ಕಟ್ಟದಪ್ಪಗಳನ್ನು ವಿತರಿಸಲಾಗುತ್ತದೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಅಧಿಕವಾಗುತ್ತಿದೆ.

ದೇವಳದ ಆಡಳಿತಾಧಿಕಾರಿ ಪ್ರಶಾಂತ್ ಶೆಟ್ಟಿ, ಅನುವಂಶೀಯ ಮೊಕ್ತೇಸರ ರತ್ನಾಕರ ರಾಜ್ ಕಿನ್ನಕ್ಕ ಬಳ್ಳಾಲ್ ಮತ್ತು ರವಿ ಭಟ್‌ರವರು ಸೇವೆಯ ಬಗ್ಗೆ ಮಾಹಿತಿ ನೀಡಿದರು.

2 ಲಕ್ಷ ಕಟ್ಟದಪ್ಪ ತಯಾರಿಕೆ

ಈ ಬಾರಿ 100 ಮುಡಿ ಅಕ್ಕಿ ಹಿಟ್ಟು, 1,500 ತೆಂಗಿನಕಾಯಿ, 3,500 ಬಾಳೆ ಹಣ್ಣು, 3,700 ಕೆಜಿ ಬೆಲ್ಲ, 30 ಗೋಣಿ ಚೀಲ ಅರಳು, 15 ಕೆಜಿ ಏಲಕ್ಕಿ ಮತ್ತು 50 ಡಬ್ಬಿ ಕೊಬ್ಬರಿ ಎಣ್ಣೆ ಬಳಸಿ ಈ ಕಟ್ಟದಪ್ಪ ತಯಾರಿಸಲಾಗಿದೆ.

85 ಜನರ ಅಡುಗೆಯವರು, 8 ಬಾಣಲೆ, 2 ಕೊಪ್ಪರಿಗೆ, 22 ಅಪ್ಪದ ಕಾವಲಿ ಮೂಲಕ ಬೆಳಗಿನ ಜಾವ 1.30 ಗಂಟೆಯಿಂದ ಆರಂಭಿಸಿ ರಾತ್ರಿ 6, 7 ಗಂಟೆ ತನಕ ಸುಮಾರು 2 ಲಕ್ಷ ಅಪ್ಪಗಳನ್ನು ತಯಾರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT