ಸೋಮವಾರ, ಮಾರ್ಚ್ 1, 2021
31 °C
ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ: ಸೊರಕೆ

ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ರಾಜ್ಯ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಷಡ್ಯಂತ್ರ ಮಾಡುತ್ತಿದ್ದು, ಇದರ ಜತೆಗೆ ರಾಜ್ಯಪಾಲರು ಕೂಡಾ ಶಾಮೀಲಾಗಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಆರೋಪಿಸಿದರು.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರಿಗೆ ಹಣದ ಆಮಿಷವೊಡ್ಡಿ ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಬಿಜೆಪಿ ಷಡ್ಯಂತರದ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಜ್ಜರಕಾಡಿನ ಸೈನಿಕರ ಹುತಾತ್ಮ ಸ್ಮಾರಕದ ಎದುರು ಬುಧವಾರ ಹಮ್ಮಿಕೊಂಡ ಬೃಹತ್‌ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಬಿಜೆಪಿ ದೇಶದಲ್ಲಿ ವಿರೋಧ ಪಕ್ಷಗಳೇ ಇರಬಾರದೆಂಬ ಧೋರಣೆ ಹೊಂದಿದೆ. ಈ ಉದ್ದೇಶದಿಂದಲೇ ದೇಶದಲ್ಲಿರುವ ಬಿಜೆಪಿಯೇತರ ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಆಡಳಿತ ವ್ಯವಸ್ಥೆ ದುರುಪಯೋಗಪಡಿಸಿಕೊಂಡು ಶಾಸಕರ ಖರೀದಿ ಮಾಡುತ್ತಿದೆ. ಶಾಸಕರ ಖರೀದಿಗಾಗಿ ₹1 ಸಾವಿರ ಕೋಟಿಕ್ಕಿಂತಲೂ ಅಧಿಕ ಹಣ ವಿನಿಯೋಗಿಸಿದೆ. ನ್ಯಾಯದ ಪರವಾಗಿ ಕೆಲಸ ಮಾಡುತ್ತಿರುವ ಸ್ವೀಕರ್‌ ಅನ್ನು ಗುರಿ ಮಾಡುತ್ತಿದೆ ಎಂದು ದೂರಿದರು.

ಶಾಸಕರನ್ನು ಖರೀದಿಸುವ ಮೂಲಕ ಬಿಜೆಪಿ ನಾಯಕರು ಕುದುರೆ ವ್ಯಾಪಾರಕ್ಕೆ ಇಳಿದಿದ್ದಾರೆ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಶಾಸಕರ ರಾಜೀನಾಮೆ ಕೊಡಿಸಲು ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತಿದ್ದಾರೆ. ಒಬ್ಬೊಬ್ಬರು ಶಾಸಕರಿಗೆ ವಿಮಾನ ಕಾಯ್ದಿರಿಸಿ ಮುಂಬೈಗೆ ಕಳುಹಿಸುತ್ತಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪನವರಿಂದ ಹಿಡಿದು ರಾಜ್ಯದ ಪ್ರಮುಖ ನಾಯಕರು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ ಎಂದು ಟೀಕಿಸಿದರು.

ಮೈತ್ರಿ ಸರ್ಕಾರ ರಾಜ್ಯದಲ್ಲಿ ಅನೇಕ ಒಳ್ಳೆಯ ಕಾರ್ಯಗಳನ್ನು ನಡೆಸಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ₹ 49 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡುವ ಯೋಜನೆಗೆ ಸರ್ಕಾರ ಚಾಲನೆ ಕೊಟ್ಟಿದೆ. ಆದರೆ, ಅದನ್ನು ಅರಗಿಸಿಕೊಳ್ಳಲು ಆಗದ ಬಿಜೆಪಿ ನಾಯಕರು ಆರಂಭದಿಂದಲೂ ಸರ್ಕಾರವನ್ನು ಕೆಡವಲು ಯತ್ನಿಸುತ್ತಿದ್ದಾರೆ. ಆ ಮೂಲಕ ಕರ್ನಾಟಕ ಜನತೆಗೆ ಮಂಕು ಬೂದಿ ಎರಚುತ್ತಿದ್ದಾರೆ. ಆದರೆ ಅವರ ಪ್ರಯತ್ನಕ್ಕೆ ಫಲ ಸಿಗುವುದಿಲ್ಲ. ಮುಂಬೈನಲ್ಲಿರುವ ಶಾಸಕರು ಪಕ್ಷಕ್ಕೆ ವಾಪಸ್ಸು ಬರುತ್ತಾರೆ. ಮೈತ್ರಿ ಸರ್ಕಾರಕ್ಕೆ ಯಾವುದೇ ಅಡ್ಡಿ ಆಗಲ್ಲ ಎಂದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಕಾರ್ಯದರ್ಶಿ ನರಸಿಂಹಮೂರ್ತಿ, ಮುಖಂಡರಾದ ಹರೀಶ್‌ ಕಿಣಿ ಅಲೆವೂರು, ಪ್ರಖ್ಯಾತ್‌ ಶೆಟ್ಟಿ, ಸರಳಾ ಕಾಂಚನ್‌, ಸರಸು ಡಿ. ಬಂಗೇರ, ಗೀತಾ ವಾಗ್ಲೆ, ಸುನೀತಾ ಶೆಟ್ಟಿ, ಪ್ರಶಾಂತ್‌ ಜತ್ತನ್‌, ಕಿಶನ್‌ ಹೆಗ್ಡೆ ಕೊಳ್ಕೆಬೈಲ್‌, ವಿಶ್ವಾಸ್‌ ಅಮೀನ್‌, ಕಿರಣ್‌ ಕುಮಾರ್‌ ಉದ್ಯಾವರ, ಸುನಿಲ್‌ ಬಂಗೇರ, ಕೇಶವ ಕೋಟ್ಯಾನ್‌, ರೋಶನಿ ಒಲಿವೆರಾ, ಉದ್ಯಾವರ ನಾಗೇಶ್‌ ಕುಮಾರ್‌, ಚಂದ್ರಿಕಾ ಶೆಟ್ಟಿ, ಲಕ್ಷ್ಮೀನಾರಾಯಣ ಪ್ರಭು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು