ಗುರುವಾರ , ಸೆಪ್ಟೆಂಬರ್ 23, 2021
22 °C
ಆರ್‌ಎಸ್‌ಎಸ್ ಮುಖಂಡ ಡಾ. ಪ್ರಭಾಕರ್ ಭಟ್ ಕಲ್ಲಡ್ಕ

10 ವರ್ಷ ಕಾದಿದ್ದರೆ ಅಖಂಡವಾಗಿಯೇ ದೇಶಕ್ಕೆ ಸ್ವಾತಂತ್ರ್ಯ: ಪ್ರಭಾಕರ್ ಭಟ್ ಕಲ್ಲಡ್ಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಕಳ: ‘ನೆಹರೂ ಕುಟುಂಬದವರ ಅಧಿಕಾರ ದಾಹದಿಂದ ದೇಶ ಅಂದು ವಿಭಜನೆಯಾಯಿತು. 10 ವರ್ಷ ಕಾದಿದ್ದರೆ ಅಖಂಡವಾಗಿಯೇ ದೇಶಕ್ಕೆ ಸ್ವಾತಂತ್ರ್ಯ ದೊರೆಯುತ್ತಿತ್ತು’ ಎಂದು ಆರ್‌ಎಸ್‌ಎಸ್ ಮುಖಂಡ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು. 

 ‘1975ರ ತುರ್ತು ಪರಿಸ್ಥಿತಿಯ ಕರಾಳ ದಿನಗಳು ಹೋರಾಟದ ರೋಚಕ ನೆನಪುಗಳು’ ಕುರಿತು ಶಾಸಕರ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಲೈವ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೆರವಣಿಗೆ, ಸತ್ಯಾಗ್ರಹದೊಂದಿಗೆ ಲಕ್ಷಾಂತರ ದೇಶಭಕ್ತರ ಬಲಿದಾನದಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ನೆಹರೂ ನಂತರ ಪ್ರಧಾನಿಯಾದ ಇಂದಿರಾ ಗಾಂಧಿ ಕಾಲದಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ, ನಿರುದ್ಯೋಗ ಸಮಸ್ಯೆ, ಸ್ವಜನ ಪಕ್ಷಪಾತದ ಆಡಳಿತ ನಡೆದಿದ್ದರಿಂದ ಜನರು ರೊಚ್ಚಿಗೇಳುವಂತಾಯಿತು. ಜಯಪ್ರಕಾಶ್ ಅವರ ನೇತೃತ್ವದಲ್ಲಿ ದೇಶದಾದ್ಯಂತ ಇಂದಿರಾ ಗಾಂಧಿ ವಿರುದ್ಧ ಪ್ರತಿಭಟನೆಗಳು ನಡೆದವು. ಅಂದಿನ ರೈಲ್ವೆ ಲಾಲ್ ಬಹದ್ದೂರ್ ಶಾಸ್ತ್ರಿ ರಾಜೀನಾಮೆ ಕೂಡ ನೀಡಿದ್ದರು. ಇಂದಿರಾ ಗಾಂಧಿ ಅಧಿಕಾರಕ್ಕಾಗಿ ಕಾನೂನನ್ನು ಬಳಸಿ, ಮಧ್ಯರಾತ್ರಿ ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದ್ದರು. ಅಟಲ್ ಬಿಹಾರಿ ವಾಜಪೇಯಿ, ಆಡ್ವಾಣಿ ಮೊದಲಾದ ನಾಯಕರನ್ನು ರಾತ್ರೋರಾತ್ರಿ ಬಂಧಿಸಲಾಯಿತು’ ಎಂದು ಅಂದಿನ ಘಟನೆಗಳನ್ನು ವಿವರಿಸಿದರು.

‘ತುರ್ತು ಪರಿಸ್ಥಿತಿ ಬಳಿಕ ನಡೆದ ಚುನಾವಣೆಯಲ್ಲಿ ಜನತಾ ಪಕ್ಷವು ಅಭೂತಪೂರ್ವ ಗೆಲುವು ಸಾಧಿಸಿತು. ಈ ವೇಳೆ ಮಾಧ್ಯಮಕ್ಕೆ ಹೇಳಿಕೆ ನೀಡಿದ ಇಂದಿರಾ ಗಾಂಧಿ ‘ಆರ್‌ಎಸ್‌ಎಸ್‌ನ ಪಿಸುಮಾತು ಪ್ರಚಾರದಿಂದಾಗಿ ನಾನು ಸೋತೆ’ ಎಂದರು. ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿದ ಪರಿಣಾಮ ದೇಶ ಇಂದು ಬಲಿಷ್ಠವಾಗಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು