ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತದಾನ ಮಾಡಿ ಮಾದರಿಯಾದ ವೈದ್ಯರು, ಸಿಬ್ಬಂದಿ

ಲಾಕ್‌ಡೌನ್‌ನಿಂದ ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತದ ಸಂಗ್ರಹ ಇಳಿಕೆ
Last Updated 8 ಏಪ್ರಿಲ್ 2020, 12:08 IST
ಅಕ್ಷರ ಗಾತ್ರ

ಉಡುಪಿ: ಲಾಕ್‌ಡೌನ್‌ ಸಂದರ್ಭ ರಕ್ತದ ಕೊರತೆ ಎದುರಾಗಬಾರದು, ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಅಗತ್ಯ ಪ್ರಮಾಣದ ರಕ್ತ ಸಿಗಬೇಕು ಎಂಬ ದೃಷ್ಟಿಯಿಂದ ಜಿಲ್ಲಾ ಆಸ್ಪತ್ರೆಯ ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿ ಸ್ವತಃ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಸದ್ಯ ಕೊರೊನಾ ಸೋಂಕು ಹರಡುವಿಕೆ ತಡೆಗೆ ರಾಜ್ಯ ಲಾಕ್‌ಡೌನ್ ಆಗಿರುವುದರಿಂದ ರಕ್ತದಾನ ಶಿಬಿರಗಳು ಸ್ಥಗಿತವಾಗಿವೆ. ರಕ್ತದಾನಿಗಳು ಪೊಲೀಸರಿಗೆ ಹೆದರಿ ಮನೆಬಿಟ್ಟು ಹೊರಬಾರದ ಪರಿಣಾಮ ಅಗತ್ಯ ಪ್ರಮಾಣದ ರಕ್ತ ಸಂಗ್ರಹವಾಗುತ್ತಿಲ್ಲ.

ಏಪ್ರಿಲ್‌ 14ರ ಬಳಿಕವೂ ಲಾಕ್‌ಡೌನ್ ಮುಂದುವರಿದರೆ ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತದ ಸಮಸ್ಯೆ ಉಂಟಾಗಲಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು, ನರ್ಸ್‌ಗಳು ಹಾಗೂ ಡಿ ದರ್ಜೆಯ ನೌಕರರಿಗೆ ರಕ್ತದಾನ ಮಾಡುವಂತೆ ಮನವಿ ಮಾಡಲಾಗಿತ್ತು.

ಮನವಿಗೆ ಸ್ಪಂದಿಸಿರುವ ಆಸ್ಪತ್ರೆಯ 22 ಸಿಬ್ಬಂದಿ ಮಂಗಳವಾರ ರಕ್ತದಾನ ಮಾಡಿದ್ದಾರೆ. ಬೇರೆ ಬೇರೆ ಶಿಫ್ಟ್‌ನಲ್ಲಿರುವ ಉಳಿದವರು ಕೂಡ ಸರದಿಯಲ್ಲಿ ರಕ್ತದಾನ ಮಾಡುತ್ತಿದ್ದಾರೆ ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ಡಾ.ವೀಣಾ ಮಾಹಿತಿ ನೀಡಿದರು.

ಜಿಲ್ಲಾ ಆಸ್ಪತ್ರೆಯ ರಕ್ತನಿಧಿಯಲ್ಲಿ ಸದ್ಯ ಅಗತ್ಯ ಪ್ರಮಾಣದ ರಕ್ತ ಸಂಗ್ರಹ ಇದೆ. ಲಾಕ್‌ಡೌನ್‌ ಮುಂದುವರಿದರೆ ರಕ್ತದ ಕೊರತೆ ಎದುರಾಗಲಿದೆ. ಅದಕ್ಕಾಗಿ ಈಗಿನಿಂದಲೇ ರಕ್ತ ಸಂಗ್ರಹ ಮಾಡುತ್ತಿದ್ದೇವೆ. ಅದಕ್ಕೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ನೌಕರರೂ ಕೈಜೋಡಿಸಿರುವುದು ವಿಶೇಷ ಎಂದರು.

ಆರೋಗ್ಯ ಇಲಾಖೆಯ ಸಿಬ್ಬಂದಿಯಿಂದಲೇ 100 ರಿಂದ 150 ಯುನಿಟ್ ರಕ್ತ ಸಂಗ್ರಹ ಗುರಿ ಇದೆ. ಜತೆಗೆ, ರಕ್ತನಿಧಿಯಲ್ಲಿ ಹೆಸರು ನೋಂದಾಯಿಸಿಕೊಂಡಿರುವ (ಲೈವ್ ಡೋನರ್ಸ್‌) ದಾನಿಗಳಿಗೆ ಕರೆ ಮಾಡಿ ರಕ್ತ ಪಡೆಯಲಾಗುತ್ತಿದೆ ಎಂದು ಡಾ.ವೀಣಾ ಮಾಹಿತಿ ನೀಡಿದರು.

ರಕ್ತದಾನಿಗಳಿಗೆ ರಸ್ತೆಯಲ್ಲಿ ಪೊಲೀಸರು ತೊಂದರೆ ಕೊಡದಂತೆ ಇ ಪಾಸ್ ವ್ಯವಸ್ಥೆ ಮಾಡಲಾಗಿದೆ. ದಾನಿಗಳು ಮುಂದೆ ಬಂದರೆ ವಾಟ್ಸ್‌ ಆ್ಯಪ್‌ ಮೂಲಕ ಈ ಪಾಸ್‌ ಕಳಿಸಲಾಗುವುದು. ಪಾಸ್‌ ದುರುಪಯೋಗ ತಡೆಗೆ ದಾನಿಯ ಹೆಸರು, ಸರ್ಜನ್‌ ಹಾಗೂ ಬ್ಲಡ್‌ ಬ್ಯಾಂಕ್‌ ದೂರವಾಣಿ ಸಂಖ್ಯೆಗಳು ಅದಲ್ಲಿರುತ್ತವೆ. ಪೊಲೀಸರಿಗೆ ಅನುಮಾನ ಬಂದರೆ ಕರೆ ಮಾಡಿ ನಿಜವಾದ ದಾನಿಗಳೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT