ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮಾವರ: ಡ್ರ್ಯಾಗನ್ ಬೋಟ್ ಪಂದ್ಯಾವಳಿಗೆ ಸಿದ್ಧತೆ

700ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ
Last Updated 19 ಫೆಬ್ರುವರಿ 2023, 4:20 IST
ಅಕ್ಷರ ಗಾತ್ರ

ಬ್ರಹ್ಮಾವರ: ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿ ಫೆ.23ರಿಂದ 26ರವರೆಗೆ ಬ್ರಹ್ಮಾವರ ಬೈಕಾಡಿಯಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಡ್ರ್ಯಾಗನ್ ಬೋಟ್ ಪಂದ್ಯಾವಳಿಗೆ ಭರದ ತಯಾರಿ ನಡೆಯುತ್ತಿದೆ.

ರಾಷ್ಟ್ರೀಯ ಮಟ್ಟದ ಈ ಪಂದ್ಯಾವಳಿಯಲ್ಲಿ 18 ರಾಜ್ಯಗಳಿಂದ 18 ತಂಡಗಳು ಭಾಗವಹಿಸುವ ನಿರೀಕ್ಷೆ ಇದ್ದು, 700ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸುವರು. ವಿಜೇತರಾದವರು ಏಷ್ಯನ್ ಗೇಮ್ಸ್‌ನಲ್ಲಿ ಭಾರತದಿಂದ ಪ್ರತಿನಿಧಿಸುವರು.

ಬೈಕಾಡಿಯ ಮಡಿಸಾಲು ಹೊಳೆಯಲ್ಲಿ ಡ್ರ್ಯಾಗನ್‌ ಬೋಟ್‌ ಮತ್ತು ಕಯಾಕಿಂಗ್‌ ಅಸೋಸಿಯೇಶನ್‌ನ ಆಶ್ರಯದಲ್ಲಿ ನಡೆಯುವ ಈ ಪಂದ್ಯಾಕೂಟ ಹಿರಿಯ ಮತ್ತು ಕಿರಿಯ ಪುರುಷರು ಮತ್ತು ಮಹಿಳೆಯರಿಗೆ 200ಮೀ., 500ಮೀ. ಮತ್ತು 2000ಮೀ. ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿದೆ. ಈಗಾಗಲೇ ರಾಜ್ಯದ ಕೆಲವು ತಂಡದ ಸದಸ್ಯರು ತರಬೇತಿ ನಡೆಸುತ್ತಿದ್ದಾರೆ. ಅಲ್ಲದೇ ಸ್ಥಳೀಯ ಯುವಕ/ಯುವತಿಯರಿಗೂ ಮತ್ತು ಅಗ್ನಿಪಥ್‌ ತರಬೇತಿ ಪಡೆದ ಯುವಕರಿಗೂ ಈ ಕ್ರೀಡೆಯ ಬಗ್ಗೆ ಮಾಹಿತಿ ಮತ್ತು ತರಬೇತಿ ನೀಡಲಾಗುತ್ತಿದೆ. ಈ ಪ್ರದೇಶ ಸ್ಪರ್ಧೆಗೆ ಉತ್ತಮವಾಗಿದೆ ಎಂದು ಕೇರಳ ಮೂಲದ ರಾಜ್ಯದ ಕೋಚ್‌ ಆಗಿರುವ ಮಹೇಶ್‌ ಪ್ರಜಾವಾಣಿಗೆ ತಿಳಿಸಿದ್ದಾರೆ.

ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಈ ಪಂದ್ಯಾವಳಿ ನಡೆಯಲಿದೆ. ಫೆ.21ಮತ್ತು 22ರಂದು ಜಿಲ್ಲಾಮಟ್ಟ ಮತ್ತು ಫೆ.23ರಿಂದ 26 ರತನಕ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳು ನಡೆಯಲಿದೆ. ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ 7ರಿಂದ 8 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಕಳೆದ ಒಂದು ವಾರದಿಂದ ಭೂ ಸೇನೆಯ ವೀರರು ಪಂದ್ಯಾವಳಿಯ ಪೂರ್ವ ಸಿದ್ಧತೆ ಮಾಡುತ್ತಿದ್ದಾರೆ. ಇವರೊಂದಿಗೆ ಅಗ್ನಿವೀರ ತಂಡದ ಸದಸ್ಯರೂ ಶ್ರಮಿಸುತ್ತಿದ್ದಾರೆ ಎಂದು ಪಂದ್ಯಾವಳಿಯ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿರ್ತಿ ರಾಜೇಶ್ ಶೆಟ್ಟಿ ಪ್ರಜಾವಾಣಿಗೆ ತಿಳಿಸಿದರು.

ಈಗಾಗಲೇ ಶಾಸಕ ಲೆ.ರಘುಪತಿ ಭಟ್‌ ಅವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಮಟ್ಟದ ಪಂದ್ಯಾವಳಿ ಯಶಸ್ವಿಯಾಗಿ ನಡೆಸಲು ಸ್ವಾಗತ ಸಮಿತಿ ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಚಂದ್ರಶೇಖರ್ ಹೆಗ್ಡೆ, ರಾಜ್ಯ ಕಯಾಕಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ದಿಲೀಪ್ ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಷನ್ ಶೆಟ್ಟಿ ಮತ್ತು ಸ್ಥಳೀಯರು ಪಂದ್ಯಾವಳಿಯ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಡ್ರ್ಯಾಗನ್‌ ಬೋಟ್‌ ಪಂದ್ಯಾವಳಿ ಏನೆಂದೂ ಅರಿಯದ ಸ್ಥಳೀಯರು ಪ್ರತಿದಿನ ಇಲ್ಲಿ ನಡೆಯುವ ತರಬೇತಿಯನ್ನು ಕುತೂಹಲದಿಂದ ನೋಡುತ್ತಿದ್ದು, ಪಂದ್ಯಾವಳಿಯ ರೋಮಾಂಚಕ ಕ್ಷಣಗಳನ್ನು ನೋಡಲು ನಿರೀಕ್ಷಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT