ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಂದೂರು: ಕಾವೇರಿ ತಂತ್ರಾಂಶದಲ್ಲಿ ತಾಂತ್ರಿಕ ದೋಷ

ನೋಂದಣಿ: ನಿಲ್ಲದ ಭೂಮಿ ಖರೀದಿದಾರರ ಪರದಾಟ
Last Updated 10 ಆಗಸ್ಟ್ 2021, 3:53 IST
ಅಕ್ಷರ ಗಾತ್ರ

ಬೈಂದೂರು: ನೋಂದಣಿ ಕಚೇರಿಗಳಲ್ಲಿ ಗಣಕೀಕೃತ ಆನ್‌ಲೈನ್ ನೋಂದಣಿ ಸೌಲಭ್ಯ ಮಾಡಲಾಗಿದ್ದು, ಆದರೆ ಕಳೆದ 7 ತಿಂಗಳುಗಳಿಂದ ಕಾವೇರಿ ತಂತ್ರಾಂಶ ಕೈಕೊಟ್ಟಿರುವ ಪರಿಣಾಮ ಕೃಷಿಯೇತರ ಭೂಮಿ ಪರಿವರ್ತನೆಯ ಜಮೀನು ನೋಂದಣಿ ಮಾಡಿಸಿರುವವರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆಗೊಂಡಿರುವ ಸ್ಥಿರಾಸ್ತಿಗಳ ನೋಂದಣಿ ಅಂತಿಮವಾಗಲು ನೋಂದಣಿ ಇಲಾಖೆ ಕಾವೇರಿ ತಂತ್ರಾಂಶ ಮತ್ತು ಗ್ರಾಮ ಪಂಚಾಯಿತಿ ಪಂಚತಂತ್ರದ ಇ- ಸ್ವತ್ತು ಸಂಯೋಜನೆಗೊಳಬೇಕು. ಈ ಪ್ರಕ್ರಿಯೆ ಬಳಿಕವಷ್ಟೇ ಪರಿವರ್ತನೆಯಾದ ದಾಖಲೆಯನ್ನು ಆನ್‌ಲೈನ್ ಮೂಲಕ ಗ್ರಾಮ ಪಂಚಾಯಿತಿಗೆ ರವಾನೆ ಮಾಡಲಾಗುತ್ತದೆ. ಆದರೆ, ಕಾವೇರಿ ತಂತ್ರಾಂಶದಲ್ಲಿ ದೋಷ ಉಂಟಾಗಿರುವ ಕಾರಣದಿಂದ ಕೃಷಿಯೇತರ ಸ್ಥಿರಾಸ್ತಿಗಳ ನೋಂದಣಿ ಪ್ರಕ್ರಿಯೆಗೆ ಹಿನ್ನಡೆ ಉಂಟಾಗಿದೆ. ನೋಂದಣಿ ಆಗಿರುವ ಮಾಹಿತಿ ಗ್ರಾಮ ಪಂಚಾಯಿತಿಗಳಿಗೆ ವರ್ಗಾವಣೆ ಆಗಿದೆ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.

ನಿರ್ದಿಷ್ಟ ಉದ್ದೇಶಕ್ಕೆ ಪರಿವರ್ತಿತ ಭೂಮಿಯ ಅಗತ್ಯ ಇರುವವರು ಶುಲ್ಕ ಕಟ್ಟಿ ಭೂಮಿ ಖರೀದಿಯ ನೋಂದಣಿ ಮಾಡಿಕೊಂಡವರು ಹಲವರು ಇದ್ದಾರೆ. ಆದರೆ, ನೋಂದಣಿ ದಾಖಲೆ ಪಂಚಾಯಿತಿಗಳಿಗೆ ವರ್ಗಾವಣೆ ಆಗದೇ ಸಂಕಷ್ಟ ಪಡುತ್ತಿದ್ದು, ನೋಂದಣಿ ಪ್ರಕ್ರಿಯೆ ಆಗದೇ ಇರುವುದರಿಂದ ಯಾವುದೇ ಕೆಲಸ ಆಗುತ್ತಿಲ್ಲ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದರು.

ಇಲಾಖೆಯಲ್ಲಿ ಭೂಮಿ ಪರಿವರ್ತನೆಗೆ ನೋಂದಣಿ ಮಾಡಿ ಕೊಂಡಿರುವ ಸಾವಿರಾರು ಪ್ರಕರಣಗಳು ಬಾಕಿ ಇವೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ನೋಂದಣಿ ಮಾಡಿಸಿಕೊಂಡವರು ಕಚೇರಿಗೆ ಬಂದು ಹೋಗುತ್ತಿದ್ದಾರೆ. ಬೈಂದೂರಿನಲ್ಲಿ ಇಂತಹ ಹಲವು ಪ್ರಕರಣಗಳಿವೆ ಎಂದು ದಸ್ತಾವೇಜು ಬರಹಗಾರರು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಆರು ತಿಂಗಳುಗಳಿಂದ ಸಮಸ್ಯೆ ಇರುವುದು ನಿಜ. ತಂತ್ರಾಂಶದ ಗೊಂದಲವನ್ನು ಈಗಾಗಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು ಶೀಘ್ರವೇ ಸರಿಯಾಗಲಿದೆ ಎಂದು ಜಿಲ್ಲಾ ನೋಂದಣಿ ಅಧಿಕಾರಿ ಶ್ರೀಧರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT