ಶನಿವಾರ, ಮೇ 21, 2022
22 °C
ಕಳೆದ ವರ್ಷ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದ 4,549 ಹೆರಿಗೆಗಳಲ್ಲಿ 2,343 ಸಿಸೇರಿಯನ್‌

ಉಡುಪಿ: ಪ್ರಸವ ವೇದನೆ ಭಯ, ಸಿಸೇರಿಯನ್‌ನತ್ತ ಒಲವು

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ರಾಜ್ಯದಲ್ಲಿ ಅತಿ ಹೆಚ್ಚು ಸಿಸೇರಿಯನ್‌ ಹೆರಿಗೆ ನಡೆಯುತ್ತಿರುವ ಜಿಲ್ಲೆಗಳಲ್ಲಿ ಉಡುಪಿಯೂ ಒಂದು. ಕಳೆದ ಜನವರಿಯಿಂದ ಡಿಸೆಂಬರ್ ಅಂತ್ಯದವರೆಗೆ ಇಲ್ಲಿನ ಸರ್ಕಾರಿ ಕೂಸಮ್ಮ ಶಂಭುಶೆಟ್ಟಿ ಮೊಮೊರಿಯಲ್‌ ಹಾಜಿ ಅಬ್ದುಲ್ಲ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 4,549 ಹೆರಿಗೆಗಳು ನಡೆದಿವೆ. ಇವುಗಳಲ್ಲಿ 2,343 ಹೆರಿಗೆ ಸಿಸೇರಿಯನ್‌ ! 2,206 ಸಹಜ ಹೆರಿಗೆ. ಅಂದರೆ, ಶೇ 50ಕ್ಕಿಂತ ಹೆಚ್ಚು ಹೆರಿಗೆಗಳು ಸಿಸೇರಿಯನ್.

ಸಿಸೇರಿಯನ್‌ಗೆ ಕಾರಣ:

ಕರಾವಳಿಯಲ್ಲಿ ತಾಯಂದಿರ ಮನಸ್ಥಿತಿಯಲ್ಲಾದ ಬದಲಾವಣೆ ಸಿಸೇರಿಯನ್‌ ಹೆಚ್ಚಾಗಲು ಕಾರಣ ಎನ್ನುತ್ತಾರೆ ವೈದ್ಯರು. ಹಿಂದೆ, ಪ್ರಸವದ ವೇಳೆ ತಾಯ್ತನದ ನೋವನ್ನು ಸಂಭ್ರಮಿಸುತ್ತಿದ್ದರು. ಈಗ ಹೆಚ್ಚಿನ ತಾಯಂದಿರು ವೇದನೆ ಅನುಭವಿಸಲು ಸಿದ್ಧರಿಲ್ಲ. ಅರ್ಧಗಂಟೆಯಲ್ಲಿ ನೋವು ರಹಿತವಾಗಿ ಹೆರಿಗೆ ಮುಗಿಯಬೇಕು ಎಂದು ತುದಿಗಾಲಿನಲ್ಲಿ ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ ಕುಂದಾಪುರ ತಾಲ್ಲೂಕು ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ವೈದ್ಯ ಡಾ.ಚಂದ್ರ ಮರಕಾಲ.

ಮಗುವಿನ ತೂಕ ಹೆಚ್ಚಳ:

ಹಿಂದೆ ಹುಟ್ಟಿದ ಮಗುವಿನ ಸರಾಸರಿ ತೂಕ 2 ಕೆ.ಜಿಯ ಒಳಗೆ ಇರುತ್ತಿದ್ದರಿಂದ ಸಹಜ ಹೆರಿಗೆ ಸಾಧ್ಯತೆ ಹೆಚ್ಚಿತ್ತು. ಇಂದಿನ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯ ಬದಲಾವಣೆಯಿಂದ ಈಗ ಜನಿಸುತ್ತಿರುವ ಮಕ್ಕಳ ಸರಾಸರಿ ತೂಕ 3 ಕೆ.ಜಿಗೂ ಹೆಚ್ಚಾಗಿದೆ. ಪರಿಣಾಮ. ಹೆರಿಗೆ ವೇಳೆ ಶಿಶುವಿನ ತಲೆಯು ದ್ವಾರದಿಂದ ಹೊರ ಬರಲು ಸಾಧ್ಯವಾಗದೆ, ಸಹಜ ಹೆರಿಗೆ ಕಷ್ಟವಾಗುತ್ತಿದೆ ಎನ್ನುತ್ತಾರೆ ಅವರು.

ಶ್ರಮ ಸಂಸ್ಕೃತಿ ದೂರ:

ಈಚೆಗೆ ಶ್ರಮ ಸಂಸ್ಕೃತಿಯು ದೂರವಾಗಿದ್ದು, ಗರ್ಭಿಣಿಯರಲ್ಲಿ ಬೊಜ್ಜು, ರಕ್ತದೊತ್ತಡ, ಮಧುಮೇಹದಂತಹ ಸಮಸ್ಯೆಗಳು ಹೆಚ್ಚಾಗಿವೆ. ಗರ್ಭಿಣಿಯರು ಹೆಚ್ಚು ಶ್ರಮ ಬೇಡುವ ಕೆಲಸ ಮಾಡದಿದ್ದರೂ ಕಡಿಮೆ ಶ್ರಮದ ಕೆಲಸ, ಯೋಗಾಸನ ಮಾಡುವುದು ಒಳ್ಳೆಯದು. ಇದರಿಂದ ದ್ವಾರದ ಸ್ನಾಯು ಹಾಗೂ ಮೂಳೆಗಳು ಸಡಿಲಗೊಂಡು ಸಹಜ ಹೆರಿಗೆಗೆ ಅನುಕೂಲವಾಗುತ್ತವೆ. ಈಗ ಗರ್ಭಿಣಿಯಾದ ದಿನದಿಂದಲೇ ದೈಹಿಕ ಶ್ರಮದಿಂದ ದೂರ ಉಳಿಯಲಾಗುತ್ತಿದ್ದು, ತಾಯಿ ಹಾಗೂ ಮಗುವಿನಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತಿದೆ. ಇದರಿಂದ ಸಿಸೇರಿಯನ್ ಹೆಚ್ಚುತ್ತಿದೆ.

ವೈದ್ಯರ ಮೇಲೆ ಒತ್ತಡ:

ಪ್ರಸವ ವೇದನೆಯನ್ನ ನೋಡಲಾಗದ ಸಂಬಂಧಿಗಳು ಸಿಸೇರಿಯನ್‌ ಮಾಡುವಂತೆ ವೈದ್ಯರ ಮೇಲೆ ಅತಿಯಾದ ಒತ್ತಡ ಹಾಕುತ್ತಿದ್ದಾರೆ. ಕೆಲವರು ರಾಜಕಾರಣಗಳಿಂದಲೂ ಶಿಫಾರಸು ಮಾಡಿಸಿರುವ ನಿದರ್ಶನ ಕಂಡಿದ್ದೇನೆ. ಒತ್ತಡಕ್ಕೆ ಮಣಿದು ವೈದ್ಯರು ಸಹಜ ಹೆರಿಗೆಯಾಗುವ ಸಾಧ್ಯತೆಗಳಿದ್ದರೂ ಸಿಸೇರಿಯನ್‌ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ ಎಂದು ವಿಷಾಧದಿಂದ ಹೇಳುತ್ತಾರೆ ಡಾ.ಚಂದ್ರ ಮರಕಾಲ.

‘ಶ್ರಮ ಕಡಿಮೆ; ಬೊಜ್ಜು ಹೆಚ್ಚಳ’

ಬೀದರ್‌, ಕಲಬುರ್ಗಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಗರ್ಭಿಣಿಯರು ಹೆಚ್ಚು ಶ್ರಮದ ಕೆಲಸ ಮಾಡುವುದರಿಂದ ಸಹಜ ಹೆರಿಗೆ ಪ್ರಮಾಣ ಹೆಚ್ಚು. ಜತೆಗೆ, ಮಕ್ಕಳ ಜನನ ಪ್ರಮಾಣವೂ ಹೆಚ್ಚು. ಆದರೆ, ಕರಾವಳಿಯಲ್ಲಿ ಗರ್ಭಿಣಿಯರು ಹೆಚ್ಚು ಶ್ರಮದ ಕೆಲಸ ಮಾಡುತ್ತಿಲ್ಲ. ಒಂದು, ಹೆಚ್ಚೆಂದರೆ ಎರಡು ಮಕ್ಕಳಿಗೆ ಆಪರೇಷನ್‌ ಮಾಡಿಸಿಕೊಳ್ಳುತ್ತಿದ್ದು, ಹೆರಿಗೆ ಸಂದರ್ಭ ರಿಸ್ಕ್ ತೆಗೆದುಕೊಳ್ಳದೆ ಹೆಚ್ಚಿನವರು ಸಿಸೇರಿಯನ್‌ ಮೊರೆ ಹೋಗುತ್ತಿದ್ದಾರೆ.

–ಡಾ.ಚಂದ್ರ ಮರಕಾಲ, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ವೈದ್ಯ ಕುಂದಾಪುರ

‘ಸಿಸೇರಿಯನ್‌ ಪ್ರಮಾಣ ಶೇ 15 ಮೀರುವಂತಿಲ್ಲ’

ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಪ್ರಕಾರ ಒಟ್ಟು ಹೆರಿಗೆಗಳ ಪ್ರಮಾಣದಲ್ಲಿ ಶೇ 15ಕ್ಕಿಂತ ಹೆಚ್ಚು ಸಿಸೇರಿಯನ್‌ ಮಾಡುವಂತಿಲ್ಲ. ಆದರೆ, ಉಡುಪಿಯ ಸರ್ಕಾರಿ ತಾಯಿ ಹಾಗೂ ಮಕ್ಕಳ ಆಸ್ಪತ್ರೆಯಲ್ಲಿ ಶೇ 50ಕ್ಕಿಂತ ಹೆಚ್ಚು ಸಿಸೇರಿಯನ್‌ಗಳು ನಡೆಯುತ್ತಿವೆ. ಖಾಸಗಿ ಆಸ್ಪತ್ರೆಗಳಲ್ಲೂ ಈ ಪ್ರಮಾಣ ಕಡಿಮೆ ಇಲ್ಲ. ಸಹಜ ಹೆರಿಗೆ ಸಾಧ್ಯತೆಗಳು ಹೆಚ್ಚಿದ್ದಾಗ ತಾಯಂದಿರು ನಿರಾಕರಿಸಬಾರದು. ಸಹಜ ಹೆರಿಗೆ ತಾಯಿ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಿಂದ ಒಳಿತು.

–ಡಾ.ಮಧುಸೂಧನ್ ನಾಯಕ್‌, ಜಿಲ್ಲಾ ಸರ್ಜನ್‌

ಯಾವಾಗ ಸಿಸೇರಿಯನ್ ಅಗತ್ಯ?

– ಮಗುವಿನ ಗಾತ್ರ ದೊಡ್ಡದಾಗಿದ್ದಾಗ
– ಮಗುವಿನ ತಲೆ ದ್ವಾರದ ಕಡೆ ಇರದಿದ್ದರೆ
– ತಾಯಿಗೆ ಮಧುಮೇಹ, ರಕ್ತದೊತ್ತಡ, ಇತರೆ ಕಾಯಿಲೆಗಳಿದ್ದಾಗ
– ಅವಳಿ, ತ್ರಿವಳಿ ಮಕ್ಕಳಿಗೆ ಜನ್ಮ ನೀಡುವಾಗ
–ಕೆಲವು ಕ್ಲಿಷ್ಟ ಸನ್ನಿವೇಶಗಳಲ್ಲಿ
ಸಹಜ ಹೆರಿಗೆಯ ಪ್ರಯೋಜನ

***
ಹೆರಿಗೆಯಾದ 2 ದಿನಗಳಲ್ಲಿ ಡಿಸ್‌ಚಾರ್ಜ್‌
ಹೆರಿಗೆ ನಂತರ ನೋವು ಕಡಿಮೆ
ಬೆನ್ನು, ಸೊಂಟ ನೋವು ಬಾಧಿಸುವುದಿಲ್ಲ
ಮಗು, ತಾಯಿಯ ಆರೋಗ್ಯದ ದೃಷ್ಟಿಯಿಂದ ಉತ್ತಮ
ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಪ್ರಮಾಣ (2020)

ತಿಂಗಳು–ಸಿಸೇರಿಯನ್‌–ಸಹಜ ಹೆರಿಗೆ
ಜನವರಿ–166–175
ಫೆಬ್ರುವರಿ–162–166
ಮಾರ್ಚ್‌–179–196
ಏಪ್ರಿಲ್‌–211–205
ಮೇ–179–196
ಜೂನ್‌–191–204
ಜುಲೈ–182–153
ಆಗಸ್ಟ್‌–204–196
ಸೆಪ್ಟೆಂಬರ್‌–204–182
ಅಕ್ಟೋಬರ್‌–252–196
ನವೆಂಬರ್‌–217–176
ಡಿಸೆಂಬರ್‌–196–161

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು