ಗುರುವಾರ , ಅಕ್ಟೋಬರ್ 22, 2020
27 °C
ಡಿಕೆಶಿ ನಿವಾಸದ ಮೇಲೆ ಸಿಬಿಐ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರ ಬಂಧನ

‘ಉಪ ಚುನಾವಣೆಗೆ ಹೆದರಿ ಸಿಬಿಐ ಅಸ್ತ್ರ ಪ್ರಯೋಗ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ಖಂಡಿಸಿ ಮಂಗಳವಾರ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್‌ ಭವನದಿಂದ ಅಜ್ಜರಕಾಡು ಹುತಾತ್ಮರ ಸ್ಮಾರಕದವರೆಗೂ ಪ್ರತಿಭಟನಾ ರ‍್ಯಾಲಿ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭ ರಸ್ತೆ ತಡೆ ನಡೆಸಿದ 20ಕ್ಕೂ ಹೆಚ್ಚು ಮುಖಂಡರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್‌ ಮುಖಂಡ ಹರೀಶ್ ಕಿಣಿ, ‘ರಾಜ್ಯದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹತ್ತಿರವಾಗುತ್ತಿರುವಂತೆ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿರುವುದು ಖಂಡನೀಯ. ಉಪ ಚುನಾವಣೆಗೆ ಹೆದರಿರುವ ಬಿಜೆಪಿ ಸರ್ಕಾರ ಸಿಬಿಐ ಮುಂದಿಟ್ಟುಕೊಂಡು ಬೆದರಿಸುವ ತಂತ್ರ ಮಾಡುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

ಎರಡು ವರ್ಷಗಳ ಹಿಂದೆ ಪರೇಶ್ ಮೇಸ್ತ ಸಾವನ್ನು ಮುಂದಿಟ್ಟುಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಿ 2 ವರ್ಷಗಳಾದರೂ ಪ್ರಕರಣದ ತನಿಖೆ ಮುಕ್ತಾಯವಾಗಿಲ್ಲ. ಮೇಸ್ತ ಕುಟುಂಬಸ್ಥರನ್ನು ಭೇಟಿಯಾಗಿ ವಿಚಾರಣೆ ನಡೆಸಿಲ್ಲ. ಆದರೆ, ಡಿಕೆಶಿ ನಿವಾಸದ ಮೇಲೆ ಮಾತ್ರ ಸಿಬಿಐ ದಾಳಿ ನಡೆಸುತ್ತಲೇ ಇದೆ ಟೀಕಿಸಿದ ಹರೀಶ್ ಕಿಣಿ, ‘ಸಿಬಿಐಗೆ ನಿಜವಾದ ಕಾಳಜಿ ಇದ್ದರೆ ಪರೇಶ್ ಮೇಸ್ತ ಸಾವಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಸಿಬಿಐ, ಇಡಿ ದಾಳಿಗೆ ಹೆದರಿ ಬಿಜೆಪಿ ಸೇರಲು ಡಿ.ಕೆ.ಶಿವಕುಮಾರ್ ಅವರು ಎಸ್‌.ಎಂ.ಕೃಷ್ಣ ಅಲ್ಲ; ಕನಕಪುರದ ಬಂಡೆ. ಉಪ ಚುನಾವಣೆಗೆ ಹೆದರಿ ಸಿಬಿಐ ದಾಳಿ ಮಾಡಿಸಿರುವುದು ನಾಚಿಕೆಗೇಡು ಎಂದು ವ್ಯಂಗ್ಯವಾಡಿದರು.

ಪ್ರತಿಭಟನೆ ವೇಳೆ ಕಾಂಗ್ರೆಸ್‌ ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ಕಿಶನ್‌ ಹೆಗ್ಡೆ ಕೊಳ್ಕೆಬೈಲು, ರಮೇಶ್ ಕಾಂಚನ್‌, ಯತೀಶ್ ಕರ್ಕೆರಾ, ಜನಾರ್ಧನ್‌ ಭಂಡಾರ್ಕರ್‌,  ಗೀಗಾ ವಾಗ್ಳೆ, ಜ್ಯೋತಿ ಹೆಬ್ಬಾರ್, ವೆರೊನಿಕಾ ಕರ್ನೆಲಿಯೊ, ಶಬ್ಬೀರ್ ಅಹಮ್ಮದ್‌, ಭಾಸ್ಕರ್ ರಾವ್ ಕಿದಿಯೂರು, ಇಸ್ಮಾಯಿಲ್ ಆತ್ರಾಡಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು