ಶುಕ್ರವಾರ, ಜೂನ್ 25, 2021
30 °C
ಮೇ 10ರಿಂದ 24ರವರೆಗೆ ಕಠಿಣ ಲಾಕ್‌ಡೌನ್ ಜಾರಿ: ಜನರ ಸಂಚಾರ ನಿರ್ಬಂಧ

ಉಡುಪಿ: ವಾಹನ ರಸ್ತೆಗಳಿಸಿದರೆ ಮುಟ್ಟುಗೋಲು; ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಮೇ 10ರಿಂದ 24ರವರೆಗೆ ರಾಜ್ಯದಾದ್ಯಂತ ಕಠಿಣ ಲಾಕ್‌ಡೌನ್‌ ಜಾರಿಗೆ ಬರಲಿದ್ದು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಎಚ್ಚರಿಕೆ ನೀಡಿದರು.

ಶನಿವಾರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ, ಕೊರೊನಾ ಸೋಂಕಿನ ಸರಪಳಿ ಕತ್ತರಿಸಲು ಲಾಕ್‌ಡೌನ್‌ ಜಾರಿ ಮಾಡಲಾಗಿದ್ದು, ಮೇ 10ರ ಬೆಳಿಗ್ಗೆ 6ರಿಂದ 24ರ ಬೆಳಿಗ್ಗೆ 6ಗಂಟೆಯವರೆಗೂ ಮಾರ್ಗಸೂಚಿಗಳು ಜಾರಿಯಲ್ಲಿರುತ್ತವೆ. ಈ ಅವಧಿಯಲ್ಲಿ ಸಾರ್ವಜನಿಕರು ವಾಹನಗಳನ್ನು ರಸ್ತೆಗಿಳಿದದರೆ ಮುಟ್ಟುಗೋಲು ಹಾಕಿಕೊಂಡು ಎಪಿಡಮಿಕ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದರು.

ಜನರ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸುವ ಉದ್ದೇಶದಿಂದ ದ್ವಿಚಕ್ರ, ಕಾರು ಸೇರಿದಂತೆ ಯಾವುದೇ ವಾಹನಗಳನ್ನು ಬಳಸುವಂತಿಲ್ಲ. ಹೋಟೆಲ್‌ಗಳಲ್ಲಿ ಪಾರ್ಸೆಲ್‌ ಕೊಂಡೊಯ್ಯಬೇಕಾದರೂ ನಡೆದುಕೊಂಡೇ ಬರಬೇಕು. ಹೋಟೆಲ್‌ಗಳು ರಾತ್ರಿ 9ರವರೆಗೆ ತೆರೆದಿರಲಿದ್ದು, ಆನ್‌ಲೈನ್‌ ಮೂಲಕ ಮನೆಗೆ ಊಟ ತರಿಸಿಕೊಳ್ಳಬಹುದು ಎಂದರು.

ಮಾರುಕಟ್ಟೆಯಿಂದ ದಿನಸಿ, ಹಾಲು, ಹಣ್ಣು, ತರಕಾರಿ, ಮಾಂಸ ಖರೀದಿಗೂ ವಾಹನ ಬಳಸದೆ ನಡೆದುಕೊಂಡೇ ಹೋಗಬೇಕು. ಬೆಳಿಗ್ಗೆ 6ರಿಂದ 10ರವರೆಗೆ ಅವಕಾಶ ಇದೆ. ಸಾರ್ವಜನಿಕರು ಸಾಧ್ಯವಾದಷ್ಟು ಮನೆಯ ಹತ್ತಿರದ ಅಂಗಡಿಗಳಲ್ಲಿ ದಿನ ಬಳಕೆಯ ವಸ್ತುಗಳನ್ನು ಖರೀದಿಸಬೇಕು. ತಳ್ಳುಗಾಡಿಗಳಲ್ಲಿ ತರಕಾರಿ, ಹಣ್ಣು ಕೊಂಡುಕೊಳ್ಳಬೇಕು ಎಂದರು.

ಅಂತರ ಜಿಲ್ಲಾ ಪ್ರಯಾಣ ನಿರ್ಬಂಧ

ಅಂತರ ಜಿಲ್ಲೆ ಹಾಗೂ ಅಂತರ ರಾಜ್ಯ ಪ್ರಯಾಣ ನಿರ್ಬಂಧಿಸಲಾಗಿದೆ. ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ರೋಗಿಗಳು ಬರಲು ಅನುಮತಿ ಇದೆ. ಆರೋಗ್ಯ ಇಲಾಖೆ ಸಿಬ್ಬಂದಿ, ನ್ಯಾಯಾಲಯದ ಸಿಬ್ಬಂದಿ ಕಚೇರಿಗೆ ತೆರಳಲು ಐಡಿ ಕಾರ್ಡ್‌ ಕಡ್ಡಾಯ. ರೈಲು ಹಾಗೂ ವಿಮಾನ ಪ್ರಯಾಣ ಮಾಡುವವರು ಟಿಕೆಟ್‌ ತೋರಿಸಬೇಕು ಎಂದರು.

ಕೆಎಂಎಫ್‌ ಮಿಲ್ಕ್ ಬೂತ್‌ ಹಾಗೂ ಹಾಪ್‌ಕಾಮ್ಸ್‌ ಮಳಿಗೆಗಳು ಮಾತ್ರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ತೆರೆದಿರಲಿವೆ. ಬ್ಯಾಂಕ್, ವಿಮಾ ಕಚೇರಿಗಳು, ಎಟಿಎಂಗಳು, ಪಡಿತರ ಕೇಂದ್ರಗಳು ಬೆಳಿಗ್ಗೆ 10ರವರೆಗೆ ತೆರೆದಿರಲಿವೆ ಎಂದು ಮಾಹಿತಿ ನೀಡಿದರು.

ಕೈಗಾರಿಕೆಗಳಲ್ಲಿ ಅಗತ್ಯ ವಸ್ತುಗಳ, ಆಹಾರ ಸಾಮಾಗ್ರಿ ಹಾಗೂ ವೈದ್ಯಕೀಯ ಪರಿಕರಗಳ ಉತ್ಪಾದನೆಗೆ ಮಾತ್ರ ಅವಕಾಶವಿದೆ. ಕಟ್ಟಡ ನಿರ್ಮಾಣ ಕಾಮಗಾರಿಗೆ ಕಾರ್ಮಿಕರನ್ನು ಹೊರಗಿನಿಂದ ಕರೆಸುವಂತಿಲ್ಲ. ಕಟ್ಟಡ ನಿರ್ಮಾಣ ವಸ್ತುಗಳ ಮಾರಾಟ ಮಳಿಗೆಗಳನ್ನು ತೆರೆಯುವಂತಿಲ್ಲ. ಭಾನುವಾರದೊಳಗೆ ಖರೀದಿ ಮಾಡಿಟ್ಟುಕೊಂಡು ಕಾಮಗಾರಿ ಮುಂದುವರಿಸಬೇಕು ಎಂದರು.

ಸರಕು ಸಾಗಣೆ ವಾಹನಗಳ ಓಡಾಟಕ್ಕೆ ಅಡ್ಡಿ ಇಲ್ಲ. ಮುಂಗಾರು ಪೂರ್ವ ತಯಾರಿಗೆ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಅನುಮತಿ ಇದೆ ಎಂದು ತಿಳಿಸಿದರು.

ಮದುವೆಗೆ 50 ಜನ ಮಾತ್ರ

ಮದುವೆಗೆ 50 ಮಂದಿ ಸೇರಲು ಮಾತ್ರ ಅವಕಾಶವಿದ್ದು, ಪಾಸ್‌ಗಳನ್ನು ತಹಶೀಲ್ದಾರ್ ವಿತರಿಸಲಿದ್ದಾರೆ. ಉಳಿದಂತೆ ಮೆಹಂದಿ, ಬೀಗರೂಟ ಆಯೋಜನೆಗೆ ಅವಕಾಶವಿಲ್ಲ. ಅಂತ್ಯಕ್ರಿಯೆಗೆ ಕೇವಲ 5 ಜನ ಸೇರಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮೀನುಗಾರಿಕೆಗೆ ಅಡ್ಡಿ ಇಲ್ಲ, ಆದರೆ, ಬಂದರಿನಲ್ಲಿ ಮಾರಾಟ ಮಾಡುವಂತಿಲ್ಲ. ಸಗಟು ಮೀನು ಮಾರಾಟಗಾರರಿಂದ ಖರೀದಿಸಿ ಚಿಲ್ಲರೆಯಾಗಿ ಮನೆಮನೆಗೆ ತೆರಳಿ ಮಾರಾಟ ಮಾಡಲು ಅನುಮತಿ ಇದೆ. ಮಹಿಳೆಯರು ಬುಟ್ಟಿಯಲ್ಲಿಟ್ಟಕೊಂಡು ಮಾರಬಹುದು. ಪುರುಷರು ದ್ವಿಚಕ್ರ ವಾಹನಗಳಲ್ಲಿ ಮಾರಾಟ ಮಾಡಬಹುದು ಎಂದರು.

ಕಾಪು ಶಾಸಕರಾದ ಲಾಲಾಜಿ ಮೆಂಡನ್‌, ಉಡುಪಿ ಶಾಸಕ ರಘುಪತಿ ಭಟ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್ ಭಟ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಇದ್ದರು.

‘ಬೆಡ್‌, ಅಮ್ಲಜನಕ ಕೊರತೆ ಇಲ್ಲ’

ಜಿಲ್ಲೆಯಲ್ಲಿ ಬೆಡ್‌ ಹಾಗೂ ಆಮ್ಲಜನಕ ವ್ಯವಸ್ಥೆ ಇಲ್ಲ. 1,300 ಆಮ್ಲಜನಕ ವ್ಯವಸ್ಥೆ ಇರುವ ಬೆಡ್‌ಗಳಲ್ಲಿ 350 ಮಾತ್ರ ಭರ್ತಿಯಾಗಿದ್ದುಲ 950 ಖಾಲಿ ಇವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್‌ಗಳು ಭರ್ತಿಯಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಐಸಿಯು, ವೆಂಟಿಲೇಟರ್‌, ಎಚ್‌ಎಫ್‌ಎನ್‌ಸಿ ಬೆಡ್‌ಗಳು ಲಭ್ಯವಿದ್ದು, ರೋಗಿಯ ಆರೋಗ್ಯಸ್ಥಿತಿ ಆಧರಿಸಿ ಬೆಡ್‌ಗಳ ವ್ಯವಸ್ಥೆ ಮಾಡಲಾಗುವುದು. ಆಮ್ಲಜನಕ ಕೊರತೆ ಇಲ್ಲ. ಜಿಲ್ಲಾ ಆಸ್ಪತ್ರೆಯ ಸಂಗ್ರಹಾಗಾರಕ್ಕೆ 4 ಟನ್‌ ಆಮ್ಲಜನಕ ಪೂರೈಕೆಯಾಗಿದೆ. ಭಾನುವಾರ ಬೆಳಪು ಸಂಗ್ರಹಾಗಾರಕ್ಕೆ 10 ಟನ್ ಪೂರೈಕೆಯಾಗಲಿದೆ. ಈಚೆಗೆ ಬಹರೇನ್‌ನಿಂದ 6 ಟನ್‌ ಆಮ್ಲಜನಕ ಸಿಕ್ಕಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

‘ಕೋವಿಡ್‌ ಕೇರ್ ಕೇಂದ್ರ ಸ್ಥಾಪನೆ’

ಹಳ್ಳಿಗಳು ಸೇರಿದಂತೆ ನಗರಗಳಲ್ಲಿ ಸೋಂಕಿತರಿಗೆ ಪ್ರತ್ಯೇಕವಾಸಕ್ಕೆ ಸೂಕ್ತ ವ್ಯವಸ್ಥೆ ಇಲ್ಲದಿದ್ದರೆ ಕೋವಿಡ್‌ ಕೇರ್ ಕೇಂದ್ರಗಳಿಗೆ ದಾಖಲಾಗಬಹುದು. ಮಣಿಪಾಲದಲ್ಲಿ 300 ಬೆಡ್‌ ಹಾಗೂ ಕುಂದಾಪುರದ ದೇವರಾಜ ಅರಸು ವಸತಿ ನಿಲಯದಲ್ಲಿ 70 ಬೆಡ್‌ ಹಾಗೂ ಮಿಯಾರಿನ ಮೊರಾರ್ಜಿ ದೇಸಾತಿ ವಸತಿಯುತ ಶಾಲೆಯಲ್ಲಿ 60 ಬೆಡ್‌ಗಳ ಕೋವಿಡ್‌ ಕೇರ್ ಕೇಂದ್ರ ತೆರೆಯಲಾಗಿದೆ. ಕೋವಿಡ್ ಕಾಲ್‌ಸೆಂಟರ್ ಸಂಪರ್ಕಿಸಿ ದಾಖಲಾಗಬಹುದು ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು