ಗುರುವಾರ , ಅಕ್ಟೋಬರ್ 1, 2020
20 °C

ರಂಜಿತಾ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಕಡೆಕಾರು ಗ್ರಾಮದ ಪಟೇಲ್ ತೋಟದಲ್ಲಿ 7 ವರ್ಷಗಳ ಹಿಂದೆ ನಡೆದಿದ್ದ ರಂಜಿತಾ (19) ಕೊಲೆ ಪ್ರಕರಣದ ಆರೋಪಿಗೆ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಪಟೇಲ್ ತೋಟದ ನಿವಾಸಿ ಯೋಗೀಶ್ ಶಿಕ್ಷೆಗೆ ಗುರಿಯಾದ ಆರೋಪಿ.

ಘಟನೆಯ ವಿವರ: ಮನೆಯ ಸಮೀಪದಲ್ಲಿ ವಾಸವಿದ್ದ ರಂಜಿತಾಳನ್ನು ಪ್ರೀತಿಸುವಂತೆ ಆರೋಪಿ ಯೋಗೀಶ್ ಆಗಾಗ ಪೀಡಿಸಿ ಕಿರುಕುಳ ನೀಡುತ್ತಿದ್ದ. ಯುವತಿ ವಿರೋಧಿಸಿದಾಗ ಜೀವ ಬೆದರಿಕೆಯೊಡ್ಡಿದ್ದ. ಆರೋಪಿಯ ದೌರ್ಜನ್ಯ ಸಹಿಸದ ಯುವತಿ 2013ರ ಸೆ.28ರಂದು ಮಲ್ಪೆ ಠಾಣೆಯಲ್ಲಿ ದೂರು ನೀಡಿದ್ದಳು.

2013ರ ನ.27ರಂದು ಬೆಳಿಗ್ಗೆ ರಂಜಿತಾ ಸ್ನೇಹಿತೆಯ ಜತೆ ಮಾತನಾಡುತ್ತಿದ್ದಾಗ, ಯೋಗೀಶ್ ಚೂರಿಯಿಂದ ರಂಜಿತಾಗೆ ಮಾರಣಾಂತಿಕವಾಗಿ ಇರಿದು ಪರಾರಿಯಾಗಿದ್ದ. ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ರಂಜಿತಾ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಳು.

ಮಲ್ಪೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು. ಅಂದಿನ ವೃತ್ತ ನಿರೀಕ್ಷಕ ಮಾರುತಿ ಜಿ.ನಾಯ್ಕ್ ಪ್ರಕರಣದ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜೆ.ಸುಬ್ರಹ್ಮಣ್ಯ ಅವರು ಸೆ.14ರಂದು ಆರೋಪಿಯನ್ನು ದೋಷಿ ಎಂದು ಆದೇಶ ನೀಡಿ, ಬುಧವರ ಜೀವಿತಾವಧಿ ಶಿಕ್ಷೆ ನೀಡಿದ್ದಾರೆ.

ಸರ್ಕಾರದ ಪರವಾಗಿ ಜಿಲ್ಲಾ ವಿಶೇಷ ಸರ್ಕಾರಿ ಅಭಿಯೋಜಕಿ ಶಾಂತಿ ಬಾಯಿ ವಾದ ಮಂಡಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು