ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ: ಕೃಷಿ, ಪ್ರಕೃತಿ ಪ್ರಧಾನ ದೀಪಾವಳಿ

ಮೂರು ದಿನ ನಡೆಯುವ ಸಂಭ್ರಮದ ‘ಪರ್ಬ’: ಕತ್ತಲೆ ಸರಿದು ಬೆಳಕಿನೆಡೆಗೆ ಪಯಣ
Last Updated 23 ಅಕ್ಟೋಬರ್ 2022, 14:37 IST
ಅಕ್ಷರ ಗಾತ್ರ

ಉಡುಪಿ: ನಾಡಿನಾದ್ಯಂತ ಬೆಳಕಿನ ಹಬ್ಬವಾಗಿ ಆಚರಿಸಲಾಗುವ ದೀಪಾವಳಿಯನ್ನು ಕರಾವಳಿಯಲ್ಲಿ ಪರ್ಬ (ಹಬ್ಬ) ಅಂತಲೇ ಆಚರಿಸುವುದು ದೀಪಾವಳಿಯ ಹಬ್ಬಕ್ಕೆ ತುಳುನಾಡಿನಲ್ಲಿ ನೀಡಲಾಗಿರುವ ಮಹತ್ವವನ್ನು ಸಾರುತ್ತದೆ.

ಮಾತೃಪ್ರಧಾನ ವ್ಯವಸ್ಥೆ ಅಸ್ತಿತ್ವದಲ್ಲಿರುವ ತುಳುನಾಡಿನ ಜನರು ಮೂಲದಿಂದಲೂ ಕೃಷಿ, ಮತ್ಸ್ಯ ಸಂಪತ್ತು ಹಾಗೂ ಕಾಡುತ್ಪತ್ತಿಯಲ್ಲಿ ಬದುಕು ಕಟ್ಟಿಕೊಂಡವರು. ಹಾಗಾಗಿ, ಇಲ್ಲಿನ ಬಹುತೇಕ ಆಚರಣೆಗಳು, ಹಬ್ಬಗಳು ಇಂದಿಗೂ ಕೃಷಿ ಪ್ರಧಾನ ಹಾಗೂ ಪ್ರಕೃತಿ ಪ್ರಧಾನವಾಗಿರುವುದನ್ನು ಕಾಣಬಹುದು.

ಕರಾವಳಿಯಲ್ಲಿ ದೀಪಾವಳಿಯನ್ನು ಕಡು ಕಷ್ಟಗಳನ್ನು ಎದುರಿಸಿ ಸಂತಸ, ಸಂಭ್ರಮದ ದಿನಗಳನ್ನು ಬರಮಾಡಿಕೊಳ್ಳುವ ಹಬ್ಬವಾಗಿಯೂ ಆಚರಿಸಲಾಗುತ್ತದೆ. ತುಳುನಾಡಿನಲ್ಲಿ ದೀಪಾವಳಿ ಹಬ್ಬವನ್ನು ಮೂರು ದಿನಗಳಾಗಿ ಆಚರಿಸಲಾಗುತ್ತದೆ. ಹಬ್ಬದ ಮೊದಲನೆಯ ದಿನವನ್ನು ಸತ್ತವರ ಹಬ್ಬ ಎಂದು ಆಚರಿಸಿದರೆ ಎರಡನೇ ದಿನವನ್ನು ಇದ್ದವರ ಹಬ್ಬವಾಗಿ, ಮೂರನೇ ದಿನವನ್ನು ಕೃಷಿಕರ ಬೆನ್ನೆಲುಬಾದ ಗೋವುಗಳ ಹಬ್ಬವಾಗಿ ಆಚರಿಸಲಾಗುತ್ತದೆ.

ಹಬ್ಬದ ಮೊದಲ ದಿನ ಮೃತರಾದ ಪೂರ್ವಜರನ್ನು ಹಾಗೂ ದೈವಗಳನ್ನು ಶ್ರದ್ಧೆ ಹಾಗೂ ಭಕ್ತಿಯಿಂದ ಕುಟುಂಬದ ಸದಸ್ಯರೆಲ್ಲ ಒಟ್ಟಾಗಿ ಸೇರಿ ಸ್ಮರಿಸುತ್ತಾರೆ. ಕರಾವಳಿಯಲ್ಲಿ ಸ್ವರ್ಗ ಹಾಗೂ ನರಕದ ಕಲ್ಪನೆ, ಪೂರ್ವಜನ್ಮದ ನಂಬಿಕೆ ಇಲ್ಲ. ಗತಿಸಿದ ಪೂರ್ವಜರು ನಮ್ಮ ನಡುವೆಯೇ ಇರುತ್ತಾರೆ ಎಂದು ಬಲವಾಗಿ ನಂಬಲಾಗುತ್ತದೆ.

ಹಾಗಾಗಿ, ಸತ್ತವರ ದಿನ ಪೂರ್ವಜರಿಗೆ ಮೀನಿನ ಸಾರು, ಅರಶಿನದ ಎಲೆಯ ಕಡುಬು ಸೇರಿದಂತೆ ಬಗೆಬಗೆಯ ಖಾದ್ಯಗಳನ್ನು ಸಿದ್ಧಪಡಿಸಿ ನಡುಮನೆಯ ಕೋಣೆಯಲ್ಲಿ ‘ಎಡೆ’ ಬಡಿಸಲಾಗುತ್ತದೆ. ಮನೆಯ ಯಜಮಾನ ಬೆನ್ನುಮಾಡಿ ನಿಂತು ಮೀಸಲು ಸೇವಿಸಿ ಕುಟುಂಬವನ್ನು ಹರಸುವಂತೆ ಪ್ರಾರ್ಥಿಸುತ್ತಾರೆ.

ಹಬ್ಬದ ಎರಡನೇ ದಿನ ‘ಇದ್ದವರ’ ಹಬ್ಬ. ಕೃಷ್ಣ ನರಕಾಸುರನನ್ನು ವಧಿಸಿ ದಣಿವು ಕಳೆದುಕೊಳ್ಳಲು ಎಣ್ಣೆ ಸ್ನಾನ ಮಾಡಿದ ಎಂಬ ಕಥೆ ನಾಡಿನೆಲ್ಲೆಡೆ ಪ್ರಚಲಿತದಲ್ಲಿದ್ದರೂ ತುಳುನಾಡಿನಲ್ಲಿ ಮಾತ್ರ ಜನಪದೀಯ ಕಾರಣ ಇದೆ.

ನಿರಂತರವಾದ ಕೃಷಿ ಕೆಲಸಗಳಿಂದ ಬಳಲಿ, ಬೆಂಡಾದ ಜೀವಕ್ಕೆ ಎಣ್ಣೆ ಸ್ನಾನದ ಮೂಲಕ ನವ ಚೈತನ್ಯ ತುಂಬುವುದು ಹಬ್ಬದ ಉದ್ದೇಶ. ದೊಡ್ಡ ಗುಡಾಣವನ್ನು ಸಿಂಗರಿಸಿ, ಕೊರಳಿಗೆ ಬಳ್ಳಿಯ ಮಾಲೆ ಪೋಣಿಸಿ ಬಿಸಿನೀರು ಕಾಯಿಸಿ ಮನೆ ಮಂದಿಯೆಲ್ಲ ಮಜ್ಜನ ಮಾಡಿ ಸಂಭ್ರಮಿಸುತ್ತಾರೆ.

ಬಲೀಂಧ್ರ ಪೂಜೆ ವಿಶೇಷ ಘಟ್ಟ:

ಕರಾವಳಿಯ ದೀಪಾವಳಿಯಲ್ಲಿ ಬಲೀಂಧ್ರನ ಆರಾಧನೆಗೆ ವಿಶೇಷ ಮಹತ್ವ. ತುಳುನಾಡ ದೀಪಾವಳಿಯ ಅತ್ಯಂತ ಮಹತ್ವದ ಘಟ್ಟವೂ ಹೌದು. ಹಬ್ಬದ ಎರಡನೇ ದಿನ ಸಂಜೆ ಕೃಷಿಕರು ದೊಡ್ಡ ಬುಟ್ಟಿಗಳಲ್ಲಿ ತೆಂಗಿನ ಕಾಯಿಯ ಚೂರು, ಅವಲಕ್ಕಿ, ವೀಳ್ಯೆದೆಲೆ, ಸೊಪ್ಪುಗಳನ್ನು ತುಂಬಿಕೊಂಡು ಗದ್ದೆಗೆ ತೆರಳಿ ಬದುಗಳಲ್ಲಿ ದೀಪಗಳನ್ನಿಟ್ಟು ಒಟ್ಟಾಗಿ ಬಲೀಂಧ್ರನನ್ನು ಕರೆಯುತ್ತಾರೆ.

ಗದ್ದೆಗಳು ದೀಪದಿಂದ ಕಂಗೊಳಿಸುವ ದೃಶ್ಯವನ್ನು ಕಣ್ತುಂಬಿಕೊಳ್ಳುವುದೇ ಬಲು ಸೊಗಸು. ಜತೆಗೆ ಬಲೀಂಧ್ರನನ್ನು ಕರೆಯುವ ಕ್ರಮವೂ ಆಕರ್ಷಕ. ಕೆಲವು ಕಡೆ ಬಲೀಂಧ್ರನ ಚರಿತ್ರೆಯ ಕುರಿತು ಪಾಡ್ದಾನಗಳನ್ನೂ ಹಾಡಲಾಗುತ್ತದೆ. ಅಂದು ಬಲೀಂಧ್ರ ತನ್ನ ಪ್ರೀತಿಯ ಪ್ರಜೆಗಳನ್ನು ಕಾಣಲು ಭೂಮಿಗೆ ಬರುತ್ತಾನೆ ಎಂಬುದು ನಂಬಿಕೆ.

ಬಳಿಕ ಮನೆಯಲ್ಲಿ ಸಂಭ್ರಮದ ತುಳಸಿ ಪೂಜೆ ನಡೆಯುತ್ತದೆ. ಪಾನಕ, ಪಂಚಕಜ್ಜಾಯ ತಯಾರಿಸಿ ದೇವರನ್ನು ಕಲಶದ ರೂಪದಲ್ಲಿ ಪೂಜಿಸಿ, ಅವಲಕ್ಕಿ ನೈವೇದ್ಯ ಅರ್ಪಿಸಿ ಬಳಿಕ ಎಲ್ಲರೂ ಪ್ರಸಾದ ಸ್ವೀಕರಿಸಲಾಗುತ್ತದೆ. ತಿರುಪತಿಗೆ ಸಮರ್ಪಿತ ಹುಂಡಿಗೆ ಮನೆಯ ಯಜಮಾನ ಕಾಣಿಕೆ ಹಾಕುತ್ತಾನೆ.

ಮನೆಯ ಅಂಗಳದಲ್ಲಿ ದೀಪಾವಳಿಯ ಕಂಬ ಪ್ರತಿಷ್ಠಾಪಿಸುವ ಮನೆಯ ಯಜಮಾನ ತಾಮ್ರದ ಕೈಸಟ್ಟಿಯಲ್ಲಿ ದೀಪವನ್ನಿಡಿದುಕೊಂಡು ಮನೆಯ ಎಲ್ಲ ವಸ್ತುಗಳಿಗೂ ಹಣತೆಯ ದರ್ಶನ ಮಾಡಿಸುತ್ತಾನೆ. ದನದ ಕೊಟ್ಟಿಗೆಯಲ್ಲಿ ಗೋವುಗಳಿಗೆ ಆರತಿ ಮಾಡಿ ತುಡರ್‌ ಬೆಳಗಲಾಗುತ್ತದೆ.

ಮೂರನೆಯ ದಿನ ಪರ್ಬದ ಪಾಡ್ಯವಾಗಿ ಗೋಪೂಜೆ ಆಚರಿಸಲಾಗುತ್ತದೆ. ಗೋವುಗಳ ಮೈತೊಳೆದು ಮೈಗೆ ಶೇಡಿ ಹಚ್ಚಿ ಸಿಂಗಾರಗೊಳಿಸಲಾಗುತ್ತದೆ. ಕೃಷಿ ಕಾರ್ಯಗಳಿಗೆ ಬಳಸುವ ಎಲ್ಲ ಪರಿಕರಗಳನ್ನು ಶುಚಿಯಾಗಿಸಿ ಒಪ್ಪ ಓರಣವಾಗಿ ಜೋಡಿಸಲಾಗುತ್ತದೆ. ಬಳಿಕ ಗೋಪೂಜೆ ನಡೆಯುತ್ತದೆ. ಅಂದು ಗೋವುಗಳಿಗೆ ಹೊಟ್ಟೆಯ ತುಂಬ ಕಡಬು ನೀಡಲಾಗುತ್ತದೆ. ಮುತೈದೆಯರು ಆರತಿ ಬೆಳಗುತ್ತಾರೆ.

ಸಂಜೆಯಾಗುತ್ತಿದ್ದಂತೆ ಊರಿನ ಯುವಕರೆಲ್ಲ ಒಟ್ಟಾಗಿ ಶಕ್ತಿ ಕಲ್ಲು ಎತ್ತುವ ಸರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸುತ್ತಾರೆ. ಊರಿನ ಕಸ ಕಡ್ಡಿಗಳನ್ನು ಹೆಕ್ಕಿ ಒಂದೆಡೆ ಹಾಕಿ ಸುಡಲಾಗುತ್ತದೆ. ರಾತ್ರಿ ದೈವಗಳಿಗೆ ಮಾಂಸದೂಟ ಸೇರಿದಂತೆ ಹಲವು ಬಗೆಯ ಖಾದ್ಯಗಳನ್ನು ಮೀಸಲಿಟ್ಟು ಕುಟುಂಬದ ಸದಸ್ಯರೆಲ್ಲರೂ ಸೇರಿ ಸೇವಿಸುತ್ತಾರೆ.

ಇವಿಷ್ಟು ಕರಾವಳಿ ದೀಪಾವಳಿಯ ಸಂಪ್ರದಾಯಬದ್ಧವಾದ ಆಚರಣೆಗಳು. ನಗರೀಕರಣ ಹಾಗೂ ಬದಲಾದ ಕಾಲಘಟ್ಟದಲ್ಲಿ ಕೆಲವು ಆಚರಣೆಗಳು ಬದಲಾದರೂ ದೀಪಾವಳಿ ಹಬ್ಬಕ್ಕೆ ಇರುವ ಮಹತ್ವ ಕಡಿಮೆಯಾಗಿಲ್ಲ.

ಅನಂತ ಪದ್ಮನಾಭ ಸನ್ನಿಧಿಯಲ್ಲಿ ವಿಶ್ವರೂಪ ದರ್ಶನ:

ಹೆಬ್ರಿಯ ಇತಿಹಾಸ ಪ್ರಸಿದ್ಧ ಅನಂತ ಪದ್ಮನಾಭ ದೇವಸ್ಥಾನದಲ್ಲಿ ದೀಪಾವಳಿಯ ನರಕ ಚತುದರ್ಶಿಯ ಪರ್ವಕಾಲದ ಸೋಮವಾರ ಮುಂಜಾನೆ 5.30 ವಿಶ್ವರೂಪ ದರ್ಶನ ನಡೆಯಲಿದೆ. 9 ಗಂಟೆಗೆ ವಿಶೇಷ ಪಂಚಾಮೃತಾಭಿಷೇಕ ನಡೆಯಲಿದೆ.

ಭಾನುವಾರ ಸಂಜೆ ಜಲ ಪೂರಣ (ನೀರು ತುಂಬುವ ಹಬ್ಬ) ಬಳಿಕ ಸೋಮವಾರ ಮುಂಜಾನೆ ತೈಲಾಭ್ಯಂಜನ ನಡೆದು ದೀಪಾವಳಿಯ ವಿವಿಧ ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಧನ ಧಾನ್ಯ ಲಕ್ಷ್ಮೀ ಪೂಜೆ, ಬಲೀಂದ್ರ ಪೂಜೆ ನಡೆಯಲಿದೆ.

ಹಬ್ಬಗಳಿಗೆ ಬಟ್ಟೆ ಖರೀದಿಗೆ ಪೇಟೆಗಳಲ್ಲಿ ಜನಸಂದಣಿ ಹೆಚ್ಚಾಗಿದೆ. ಪಟಾಕಿ ಮಳಿಗೆಯಲ್ಲೂ ಖರೀದಿ ಭರಾಟೆ ಇದೆ. 25ರಂದು ಗ್ರಹಣ ಹಿನ್ನೆಲೆಯ ಹಬ್ಬದ ಧಾರ್ಮಿಕ ಆಚರಣೆ ಇರುವುದಿಲ್ಲ.

‘ಬದಲಾದ ದೀಪಾವಳಿ’

ಬದಲಾದ ಕಾಲಘಟ್ಟದಲ್ಲಿ ಕರಾವಳಿಯ ಸಂಪ್ರದಾಯಬದ್ಧ ದೀಪಾವಳಿ ಆಚರಣೆಯ ಕ್ರಮಗಳು ಬದಲಾದಂತೆ ಕಾಣುತ್ತಿವೆ. ಉಡುಪಿಯ ಮೇಲೆ ಮುಂಬೈ ನಗರದ ಪ್ರಭಾವ ಹೆಚ್ಚಾಗಿರುವ ಕಾರಣ ಇಲ್ಲಿಯೂ ವ್ಯಾಪಾರಿಗಳು ಅಂಗಡಿ ಪೂಜೆ ಅಥವಾ ಲಕ್ಷ್ಮೀ ಪೂಜೆಯನ್ನು ಅದ್ಧೂರಿಯಾಗಿ ಮಾಡುತ್ತಿದ್ದಾರೆ. ಸಂಬಂಧಿಗಳನ್ನು ಅಂಗಡಿ ಪೂಜೆಗೆ ಕರೆದು ಹೊಸ ಬಟ್ಟೆಯ ಉಡುಗೊರೆ, ಸಿಹಿ ತಿನಿಸು ಕೊಡಲಾಗುತ್ತಿದೆ. ಕುಟುಂಬ ಸದಸ್ಯರೆಲ್ಲರೂ ಸೇರಿ ಪಟಾಕಿ ಸಿಡಿಸುವುದು ಹೆಚ್ಚಾಗಿ ಕಂಡುಬರುತ್ತಿದೆ.
‘ಗೂಡು ದೀಪಗಳ ಮೆರುಗು’

ಕರಾವಳಿ ದೀಪಾವಳಿಯ ಪ್ರಮುಖ ಆಕರ್ಷಣೆ ಸಾಂಪ್ರದಾಯಿಕ ಗೂಡು ದೀಪಗಳು. ಪ್ರತಿಯೊಬ್ಬರ ಮನೆಯ ಅಂಗಳದಲ್ಲೂ ಬೆಳಗುವ ಗೂಡು ದೀಪಗಳು ಹಬ್ಬಕ್ಕೆ ವಿಶೇಷ ಮೆರಗು ನೀಡುತ್ತವೆ. ಹಿಂದೆಲ್ಲ ಮನೆಯಲ್ಲಿಯೇ ಸಾಂಪ್ರದಾಯಿಕ ಗೂಡು ದೀಪಗಳನ್ನು ತಯಾರಿಸಲಾಗುತ್ತಿತ್ತು. ಕಾಲಾನಂತರ ಮಾರುಕಟ್ಟೆಗೆ ರೆಡಿಮೆಡ್ ಗೂಡುದೀಪಗಳು ಪ್ರವೇಶಿಸಿದ ಬಳಿಕ ಹಿನ್ನಲೆಗೆ ಸರಿದವು. ಆದರೂ, ಸಾಂಪ್ರದಾಯಿಕ ಗೂಡುದೀಪ ತಯಾರಿಕೆ ಕಲೆ ಉಳಿಸುವ ಉದ್ದೇಶದಿಂದ ಹಲವು ಸಂಘ ಸಂಸ್ಥೆಗಳು ಗೂಡು ದೀಪ ತಯಾರಿಸುವ ಸ್ಪರ್ಧೆಗಳನ್ನು ದಶಕಗಳಿಂದ ಆಯೋಜಿಸಿಕೊಂಡು ಬಂದಿವೆ.


ಕೃಷ್ಣಮಠದಲ್ಲಿ ದೀಪಾವಳಿ

ಉಡುಪಿಯ ಕೃಷ್ಣಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿಶಿಷ್ಟವಾಗಿ ದೀಪಾವಳಿ ಆಚರಿಸಲಾಗುತ್ತಿದ್ದು ಅ.23ರಂದು ಸಂಜೆ ಯಮದೀಪ ಮತ್ತು ಜಲಪೂರಣ ನಡೆಯಲಿದೆ. 24ರಂದು ಬೆಳ್ಳಿಗೆ 5.14ಕ್ಕೆ ತೈಲಾಭ್ಯಂಜನ, ನರಕ ಚತುರ್ದಶಿ. ಸಂಜೆ ವ್ಯೋಮ ದೀಪ, ದೀಪಾವಳಿ, ಧನ ಧಾನ್ಯ, ಲಕ್ಷ್ಮೀಪೂಜೆ, ಬಲಿಂದ್ರ ಪೂಜೆಗಳು ಜರುಗಲಿವೆ. 25ರಂದು ಬೆಳಿಗ್ಗೆ ಗೋಪೂಜೆ, ಸಂಜೆ 5.08ಕ್ಕೆ ಗ್ರಹಣ ಗೋಚರವಾಗಲಿದ್ದು, ಸಂಜೆ 6.29ಕ್ಕೆ ಗ್ರಹಣ ಮೋಕ್ಷವಾಗಲಿದೆ. ಸ್ವಾತಿ ನಕ್ಷತ್ರ ತುಲಾ ರಾಶಿಯಲ್ಲಿ ಕೇತು ಗ್ರಹಣ ಸಂಭವಿಸಲಿದೆ. 26ರಂದು ಬಲಿಪಾಡ್ಯಮಿ, ಅಭ್ಯಂಜನ ಹಾಗೂ ಸಂಜೆ ಅಂಗಡಿ ಪೂಜೆ, ತುಳಸಿ ಪುಜಾರಂಭ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT