ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವಿ ಕಾಲೇಜು ಆರಂಭ: ಮೊದಲ ದಿನ ನೀರಸ

ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ಬಾರದ ವಿದ್ಯಾರ್ಥಿಗಳು: ಕಾಲೇಜುಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ
Last Updated 17 ನವೆಂಬರ್ 2020, 13:11 IST
ಅಕ್ಷರ ಗಾತ್ರ

ಉಡುಪಿ: ಕೊರೊನಾ ಲಾಕ್‌ಡೌನ್‌ನಿಂದಾಗಿ ಹಲವು ತಿಂಗಳ ಕಾಲ ಮುಚ್ಚಲಾಗಿದ್ದ ಪದವಿ ಕಾಲೇಜುಗಳು ಇಂದು ಪುನಾರಂಭಗೊಂಡವು. ಆದರೆ, ಕಾಲೇಜಿಗೆ ಹಾಜರಾಗಲು ಸರ್ಕಾರ ಕೋವಿಡ್‌ ಪರೀಕ್ಷೆ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಬೆರಳೆಣಿಕೆಯ ವಿದ್ಯಾರ್ಥಿಗಳು ಮಾತ್ರ ಮಂಗಳವಾರ ಕಾಲೇಜಿಗೆ ಬಂದಿದ್ದರು.

ಎಂಜಿಎಂ ಕಾಲೇಜು:ನಗರದ ಎಂಜಿಎಂ ಕಾಲೇಜಿಗೆ ಕೋವಿಡ್‌ ಪರೀಕ್ಷಾ ವರದಿಯ ಜತೆಗೆ ಪೋಷಕರ ಒಪ್ಪಿಗೆ ಪತ್ರ ತಂದಿದ್ದ ನಾಲ್ವರು ವಿದ್ಯಾರ್ಥಿಗಳು ಮಾತ್ರ ಅಂತಿಮ ವರ್ಷದ ಪದವಿ ತರಗತಿಗೆ ಹಾಜರಾಗಿದ್ದರು. ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬಾರದ ವಿದ್ಯಾರ್ಥಿಗಳನ್ನು ಸಿಬ್ಬಂದಿ ಮನೆಗೆ ಕಳುಹಿಸಿದರು.

ಸರ್ಕಾರದ ಸೂಚನೆಯಂತೆ ಅಂತಿಮ ವರ್ಷದ ಪದವಿ ತರಗತಿಗಳನ್ನು ಮಾತ್ರ ಆರಂಭಿಸಲಾಗಿದೆ. ಮೊದಲ ದಿನ ಕಾಲೇಜಿಗೆ ಬಂದ ವಿದ್ಯಾರ್ಥಿಗಳ ದೇಹದ ಉಷ್ಣಾಂಶ ಪರೀಕ್ಷಿಸಿ ತರಗತಿ ಒಳಗೆ ಬಿಡಲಾಯಿತು. ತರಗತಿಯಲ್ಲಿ ಅಂತರ ಕಾಯ್ದುಕೊಂಡು ಪ್ರಾಧ್ಯಾಪಕರು ಪಾಠ ಮಾಡಿದರು. ಮಾಸ್ಕ್‌, ಸ್ಯಾನಿಟೈಸರ್‌ ಬಳಕೆ ಕಡ್ಡಾಯ ಮಾಡಲಾಗಿದೆ, ಕಾಲೇಜಿನ ಕ್ಯಾಂಟೀನ್‌ ಹಾಗೂ ಗ್ರಂಥಾಲಯವನ್ನು ಮುಚ್ಚಲಾಗಿದೆ. ಕೊಠಡಿಗಳು ಹಾಗೂ ಶೌಚಾಲಯಗಳನ್ನು ಸ್ಯಾನಿಟೈಸರ್‌ನಿಂದ ಶುಚಿಗೊಳಿಸಲಾಗಿದೆ ಎಂದು ಪ್ರಾಂಶುಪಾಲ ದೇವಿದಾಸ್ ನಾಯಕ್‌ ಮಾಹಿತಿ ನೀಡಿದರು.

ಸತತ ರಜೆ ಹಾಗೂ ಕೋವಿಡ್ ಪರೀಕ್ಷೆ ಕಡ್ಡಾಯದ ಕಾರಣದಿಂದ ಮೊದಲ ದಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿಲ್ಲ. ಹಂತಹಂತವಾಗಿ ವಿದ್ಯಾರ್ಥಿಗಳು ಬರುವ ವಿಶ್ವಾಸವಿದೆ. ಹಾಜರಾಗದವರಿಗೆ ಆನ್‌ಲೈನ್‌ನಲ್ಲಿ ಪಾಠಗಳು ನಡೆಯಲಿವೆ ಎಂದು ತಿಳಿಸಿದರು.

ಪೂರ್ಣಪ್ರಜ್ಞ ಕಾಲೇಜಿಗೆ ಒಬ್ಬಳು ವಿದ್ಯಾರ್ಥಿನಿ ಮಾತ್ರ ಕೋವಿಡ್‌ ಪರೀಕ್ಷಾ ವರದಿಯೊಂದಿಗೆ ತರಗತಿಗೆ ಹಾಜರಾಗಿದ್ದಳು. ಪರೀಕ್ಷೆ ಮಾಡಿಸದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದರೂ ಅವರಿಗೆ ತರಗತಿಗೆ ಹಾಜರಾಗಲು ಅನುಮತಿ ನೀಡಲಿಲ್ಲ. ಅವರಿಗೆಲ್ಲ ಕಾಲೇಜು ಆವರಣದಲ್ಲಿ ಕೋವಿಡ್‌ ಪರೀಕ್ಷೆ ಮಾಡಿಸಿ, ವರದಿ ನೆಗೆಟಿವ್ ಬಂದ ಬಳಿಕ ಕಾಲೇಜಿಗೆ ಬರುವಂತೆ ತಿಳಿಸಲಾಗಿದೆ ಎಂದು ಪ್ರಾಂಶಪಾಲ ರಾಘವೇಂದ್ರ ಭಟ್ ತಿಳಿಸಿದರು.

ಜಂಟಿ ನಿರ್ದೇಶಕರ ಕಚೇರಿಯಿಂದ ಬಂದಿದ್ದ ಟಾಸ್ಕ್‌ಫೋರ್ಸ್‌ ಸಮಿತಿ ಕಾಲೇಜಿನಲ್ಲಿ ಕೋವಿಡ್‌ ತಡೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.

ನಗರದ ಡಾ.ಜಿ.ಶಂಕರ್ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚು ಕಂಡುಬಂತು. ಆದರೆ, ಬಹುತೇಕರು ಕೋವಿಡ್‌ ಪರೀಕ್ಷಾ ವರದಿಯೊಂದಿಗೆ ಬಂದಿರಲಿಲ್ಲ. ಪರೀಕ್ಷೆ ಮಾಡಿಸಿಕೊಳ್ಳದವರಿಗೆ ಕಾಲೇಜಿನಲ್ಲಿಯೇ ಪರೀಕ್ಷೆ ನಡೆಸಲಾಯಿತು. ವರದಿ ಬಂದ ಬಳಿಕ ಬರುವಂತೆ ಸೂಚನೆ ನೀಡಿ ಮನೆಗೆ ಕಳುಹಿಸಲಾಯಿತು. ಒಟ್ಟಾರೆ, ಮೊದಲ ದಿನ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT