ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪತ್ತು ನಿರ್ವಹಣೆಗೆ ತಂತ್ರಜ್ಞಾನದ ನೆರವು

ಪೈಲಟ್ ಯೋಜನೆಯಾಗಿ ಉಡುಪಿ ಜಿಲ್ಲೆಯಲ್ಲಿ ಜಾರಿ
Last Updated 7 ಡಿಸೆಂಬರ್ 2021, 14:23 IST
ಅಕ್ಷರ ಗಾತ್ರ

ಉಡುಪಿ: ಪ್ರಾಕೃತಿಕ ವಿಕೋಪಗಳು ಎದುರಾದಾಗ ಸ್ಥಳೀಯವಾಗಿ ತುರ್ತು ಲಭ್ಯವಿರುವ ಸಂಪನ್ಮೂಲ, ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಉಪಕರಣಗಳು ಹಾಗೂ ಮಾನವ ಸಂಪನ್ಮೂಲಗಳ ಬಗ್ಗೆ ಮಾಹಿತಿ ಪಡೆಯಲು ನೆರವಾಗುವಂತೆ ಭೌಗೋಳಿಕ ಮಾಹಿತಿ ತಂತ್ರಜ್ಞಾನ ಆಧಾರಿತ ನಕ್ಷೆ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆಯ ಮೊಬೈಲ್‌ ತಂತ್ರಾಂಶ ಹಾಗೂ ಅಂತರ್ಜಾಲ ತಾಣವನ್ನು ಅಭಿವೃದ್ಧಿ ಪಡಿಸಲಾಗಿದೆ.

ಡಿಜಿಟಲ್ ಇಂಡಿಯಾ ಭಾಗವಾಗಿ ಅಭಿವೃದ್ಧಿಪಡಿಸಿರುವ ಆ್ಯಪ್‌ ಹಾಗೂ ವೆಬ್‌ಸೈಟ್‌ನಲ್ಲಿ ವಿಪತ್ತು ನಿರ್ವಹಣೆ ಮಾಡಲು ಸಂಬoಧಪಟ್ಟ ಎಲ್ಲ ಇಲಾಖೆಗಳ ಮಾಹಿತಿ, ದತ್ತಾಂಶ, ಸಂಪನ್ಮೂಲಗಳ ಲಭ್ಯತೆ ಹಾಗೂ ವಿಪತ್ತು ಸಂಭವಿಸಬಹುದಾದ ಪ್ರದೇಶಗಳ ನಕ್ಷೆ, ಕಾರ್ಯಾಚರಣೆಯ ವಿಧಾನಗಳು ಹಾಗೂ ಮಾರ್ಗಸೂಚಿಗಳು ಇರಲಿವೆ.

ಒಂದು ವೇಳೆ ವಿಪತ್ತುಗಳು ಸಂಭವಿಸಿದಾಗ ರಕ್ಷಣೆಗೆ ಅಗತ್ಯವಿರುವ ಸಂಪನ್ಮೂಲ, ಸಿಬ್ಬಂದಿ, ವಿಪತ್ತು ನಿರ್ವಹಣೆ ಮಾಡಲು ತರಬೇತಿ ಪಡೆದ ನಿವಾಸಿಗಳ ವಿವರ, ಸಮೀಪದಲ್ಲಿರುವ ಶಾಲೆ, ಆಸ್ಪತ್ರೆ, ವೈದ್ಯಕೀಯ ಸೌಲಭ್ಯಗಳು, ಸಿಬ್ಬಂದಿ, ಕಾಳಜಿ ಕೇಂದ್ರಗಳು, ತುರ್ತು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳ ಮಾಹಿತಿ ಮೊಬೈಲ್ ಆ್ಯಪ್ ಆಗೂ ವೆಬ್‌ಸೈಟ್‌ನಲ್ಲಿ ಕ್ಷಣಮಾತ್ರದಲ್ಲಿ ದೊರೆಯಲಿದ್ದು, ತ್ವರಿತ ರಕ್ಷಣಾ ಕಾರ್ಯಕ್ಕೆ ಸಹಕಾರಿಯಾಗಲಿದೆ.

ಜಿಲ್ಲಾ ವಿಪತ್ತು ಪರಿಣಿತರಿಗೆ ಯೋಜನೆಯ ತಂತ್ರಾoಶಗಳನ್ನು ಬಳಕೆ ಮಾಡುವ ಬಗ್ಗೆ ಹಾಗೂ ತಂತ್ರಾಂಶಗಳ ಕಾರ್ಯವಿಧಾನಗಳ ಕುರಿತು ಈಗಾಗಲೇ ತರಬೇತಿ ನೀಡಲಾಗಿದ್ದು, ತುರ್ತು ರಕ್ಷಣೆಗೆ ಅಗತ್ಯವಾದ ಸಿಬ್ಬಂದಿ ಮಾಹಿತಿಯ ಕ್ರೂಡೀಕರಣ ಕಾರ್ಯ ನಡೆಯುತ್ತಿದೆ.

ಜಿಲ್ಲೆಯ ಎಲ್ಲ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೂ ಕ್ಷೇತ್ರ ಮೌಲ್ಯಮಾಪನ ಮಾಡುವ ಬಗ್ಗೆ ತರಬೇತಿ ನೀಡಲಾಗುತ್ತಿದ್ದು, ಮುಂದಿನ ವರ್ಷ ಜನವರಿ ಅಂತ್ಯದೊಳಗೆ ಭೌಗೋಳಿಕ ಮಾಹಿತಿ ತಂತ್ರಜ್ಞಾನ ಆಧಾರಿತ ಜಿಲ್ಲಾ ವಿಪತ್ತು ನಿರ್ವಹಣೆ ಯೋಜನೆಯ ಕರಡು ರಚಿಸುವ ಗುರಿ ಹೊಂದಲಾಗಿದೆ.

ಯೋಜನೆಗೆ ಅಗತ್ಯವಾಗಿರುವ ಇಲಾಖೆಗಳ ಅಧಿಕೃತ ಮಾಹಿತಿ ಮತ್ತು ದತ್ತಾಂಶ ಸಂಗ್ರಹಣೆಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಯೋಜನೆ ಸಂಪೂರ್ಣವಾಗಿ ಪೂರ್ಣಗೊಂಡ ಬಳಿಕ ಎಲ್ಲ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಹಾಕಲಾಗುವುದು. ಬಳಿಕ ಸಾರ್ವಜನಿಕರು ಕೂಡ ವೀಕ್ಷಿಸಬಹುದು ಎನ್ನುತ್ತಾರೆ ಅಧಿಕಾರಿಗಳು.

ವಿಪತ್ತುಗಳು ಸಂಭವಿಸಿದಾಗ ಸಾರ್ವಜನಿಕರು ವೆಬ್‌ಸೈಟ್‌ನಲ್ಲಿಯೇ ತುರ್ತು ಸಂದರ್ಭಗಳಲ್ಲಿ ತೆರಳಬೇಕಾದ ಸಮೀಪದಲ್ಲಿರುವ ಸುರಕ್ಷಿತ ಸ್ಥಳಗಳು, ಅಲ್ಲಿಗೆ ತಲುಪಬೇಕಾದ ರಸ್ತೆ ಮಾರ್ಗ, ರಕ್ಷಣೆಗೆ ಸಂಪರ್ಕಿಸಬೇಕಾದ ಸಿಬ್ಬಂದಿಗಳ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಉಡುಪಿಯಲ್ಲಿ ಪ್ರಾಯೋಗಿಕ ಜಾರಿ

ಪ್ರಾಕೃತಿಕ ವಿಪತ್ತುಗಳು ಮುನ್ಸೂಚನೆ ನೀಡದೆ ಸಂಭವಿಸುವುದರಿಂದ ತುರ್ತು ಪರಿಹಾರ, ಸಂಪನ್ಮೂಲ ಕ್ರೋಢೀಕರಣ, ಉಪಕರಣಗಳು ಮತ್ತು ಮಾನವ ಸಂಪನ್ಮೂಲ ಲಭ್ಯತೆಯ ಮಾಹಿತಿ ಪಡೆಯುವುದು ಕಷ್ಟ. ಈ ನಿಟ್ಟಿನಲ್ಲಿ ಭೌಗೋಳಿಕ ಮಾಹಿತಿ ತಂತ್ರಜ್ಞಾನ ಆಧಾರಿತ ನಕ್ಷೆ ಮತ್ತು ಜಿಲ್ಲಾ ವಿಪತ್ತು ನಿರ್ವಹಣೆ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಇದು ಡಿಜಿಟಲ್ ಇಂಡಿಯಾದ ಭಾಗವಾಗಿದ್ದು, ದೇಶದಲ್ಲಿ ಪ್ರಥಮ ಬಾರಿಗೆ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಯೋಜನೆ ಪ್ರಾಯೋಗಿಕವಾಗಿ ಜಾರಿಯಾಗಿದ್ದು, ಉಡುಪಿ ಜಿಲ್ಲೆಯೂ ಒಂದು ಎಂಬುದು ವಿಶೇಷ.

ತುರ್ತು ಸಂದರ್ಭಗಳಲ್ಲಿ ನೆರವು

ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವ ಪೂರ್ವದಲ್ಲಿ ಸರ್ಕಾರ ಪ್ರಾಯೋಗಿಕವಾಗಿ ಕೆಲವು ಜಿಲ್ಲೆಗಳಲ್ಲಿ ಅನುಷ್ಠಾನ ಮಾಡಿ ಅದರ ಸಾಧಕ ಭಾದಕಗಳ ಆಧಾರದ ಮೇಲೆ ಯೋಜನೆಯನ್ನು ಎಲ್ಲೆಡೆ ವಿಸ್ತರಿಸುತ್ತದೆ. ಅದರಂತೆ, ಭೌಗೋಳಿಕ ಮಾಹಿತಿ ತಂತ್ರಜ್ಞಾನ ಆಧಾರಿತ ಜಿಲ್ಲಾ ವಿಪತ್ತು ನಿರ್ವಹಣೆ ಯೋಜನೆಯನ್ನು ಉಡುಪಿಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಲಾಗುತ್ತಿದೆ. ಇದರಿಂದ ತುರ್ತು ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT