ಶನಿವಾರ, ಜನವರಿ 25, 2020
19 °C
ಮಧ್ವರಾಜ್ ಅನಿಮಲ್ ಕೇರ್‌ ಟ್ರಸ್ಟ್‌ನಿಂದ ಡಾಗ್ ಶೋ

ಮಲ್ಪೆ ಬೀಚ್‌ನ ರ‍್ಯಾಂಪ್‌ ಮೇಲೆ ಡಾಗ್ ವಾಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಮಲ್ಪೆ ಬೀಚ್‌ ಪರಿಸರದಲ್ಲಿ ಭಾನುವಾರ ಮಧ್ವರಾಜ್ ಅನಿಮಲ್ ಕೇರ್‌ ಟ್ರಸ್ಟ್‌ನಿಂದ ಆಯೋಜಿಸಿದ್ದ ಗ್ರೇಟ್ ಇಂಡಿಯನ್ ಡಾಗ್ ಶೋನಲ್ಲಿ ದೇಸಿ ಶ್ವಾನಗಳು ಡಾಗ್ ವಾಕ್ ನಡೆಸಿದವು. ಮಾಲೀಕರೊಂದಿಗೆ ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ನೆರೆದಿದ್ದವರನ್ನ ರಂಜಿಸಿದವು.

ವಿಶೇಷ ಎಂದರೆ, ಇಲ್ಲಿ ವಿದೇಶಿ ತಳಿಯ ನಾಯಿಗಳಿಗೆ ಪ್ರವೇಶ ಇರಲಿಲ್ಲ. ಸ್ವದೇಶಿ ತಳಿಯ ನಾಯಿಗಳಿಗೆ ಮಾತ್ರ ಶೋ ಮೀಸಲಾಗಿತ್ತು. ಮಂಗಳೂರು, ಕುಂದಾಪುರ ಉಡುಪಿಯ ಹಲವೆಡೆಗಳಿಂದ 40 ನಾಯಿಗಳು ಭಾಗವಹಿಸಿದ್ದವು.

ಪಾಶಮಿ ಹೌಂಡ್‌, ಕನ್ನಿ, ಕೊಂಬಾಯಿ, ಕಾರಾವಾನ್ ಹೌಂಡ್‌, ಮುಧೋಳ ತಳಿಗಳು ಗಮನ ಸೆಳೆದವು. ಇದರ ಜತೆಗೆ 32 ಕ್ರಾಸ್‌ ತಳಿಯ ನಾಯಿಗಳು ಪ್ರದರ್ಶನದಲ್ಲಿದ್ದವು.

ಮಧ್ವರಾಜ್ ಅನಿಮಲ್ ಕೇರ್‌ ಟ್ರಸ್ಟ್‌ನ ಮುಖ್ಯಸ್ಥೆ ಬಬಿತಾ ಮಧ್ವರಾಜ್ ಮಾತನಾಡಿ, ‘ವಿದೇಶಿ ನಾಯಿಗಳ ಮೇಲಿರುವಷ್ಟೆ ಪ್ರೀತಿ ನಮ್ಮ ನೆಲದ ನಾಯಿಗಳ ಮೇಲೂ ಇರಬೇಕು ಎಂಬ ಉದ್ದೇಶದಿಂದ ‘ನಮ್ಮ ಸ್ವಂತ, ನಮ್ಮ ಹೆಮ್ಮೆ’ ಎಂಬ ಘೋಷಣೆಯಡಿ ಡಾಗ್ ಶೋ ಹಮ್ಮಿಕೊಳ್ಳಲಾಗಿದೆ ಎಂದರು.

ವಿದೇಶಿ ತಳಿಯ ನಾಯಿಗಳನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಖರೀದಿಸಿ ಸಾಕುತ್ತೇವೆ. ಆದರೆ, ದೇಸಿ ನಾಯಿಗಳನ್ನು ಬೀದಿಗೆ ಬಿಡುತ್ತೇವೆ. ಅಪಘಾತದಲ್ಲಿ, ರೋಗಗಳಿಂದ ಬೀದಿ ನಾಯಿಗಳು ಸಾವನಪ್ಪುತ್ತವೆ. ಈ ಧೋರಣೆ ನಿಲ್ಲಬೇಕು. ಬೀದಿನಾಯಿಗಳಿಗೂ ಆರೈಕೆ ಸಿಗಬೇಕು. ಇದರ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ವಿದೇಶಿ ತಳಿಯ ನಾಯಿಗಳು ಭಾರತದ ಹವಾಮಾನಕ್ಕೆ ಒಗ್ಗದಿದ್ದರೂ ಪ್ರತಿಷ್ಠೆಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ಸಾಕುತ್ತೇವೆ. ಅವು ನಮ್ಮನ್ನು ಕಾಯುವುದಿಲ್ಲ, ಬದಲಾಗಿ, ನಾವೇ ಅವುಗಳನ್ನು ಕಾಯಬೇಕಿದೆ. ಆದರೆ, ದೇಸಿ ನಾಯಿಗಳು ಇಡೀ ಕುಟುಂಬವನ್ನು ಕಾಯುತ್ತವೆ ಎಂದರು.

ಬೀದಿನಾಯಿಗಳು ಅಪಘಾತಕ್ಕೀಡಾದರೆ, ಅನಾರೋಗ್ಯಕ್ಕೆ ತುತ್ತಾದರೆ ಚಿಕಿತ್ಸೆ ಸಿಗುತ್ತಿಲ್ಲ. ಶ್ವಾನಗಳಿಗೂ ಬದುಕುವ ಹಕ್ಕಿದ್ದು, ಅಪಘಾತವಾದರೆ ತಕ್ಷಣ ಟ್ರಸ್ಟ್‌ಗೆ ಮಾಹಿತಿ ನೀಡಬೇಕು ಎಂದರು.

ಟ್ರಸ್ಟ್‌ನಿಂದ 15 ತಿಂಗಳಲ್ಲಿ 300 ನಾಯಿಗಳನ್ನು ಸಾರ್ವಜನಿಕರಿಗೆ ದತ್ತು ನೀಡಲಾಗಿದೆ. ಬೀದಿ ನಾಯಿಗಳನ್ನು ಅನುಕಂಪ‍ದಿಂದ ನೋಡಿ ಎಂದು ಬಬಿತಾ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪ್ರೀತಂ ಅಡಿಗ, ನಂದಕಿಶೋರ್, ನವ್ಯ, ನಿತಿನ್‌, ಟೆನ್ಸನ್ ಇದ್ದರು. 

ಪ್ರತಿಕ್ರಿಯಿಸಿ (+)