ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿಗಳಿಗೂ ಆಹಾರ ಸಿಗದಂತೆ ಮಾಡಿದ ಕೊರೊನಾ

ಜಿಲ್ಲಾ ನಾಗರಿಕ ಸೇವಾ ಸಮಿತಿ, ಅನಿಮಲ್‌ ಕೇರ್ ಟ್ರಸ್ಟ್‌ನಿಂದ ಆಹಾರ ಪೂರೈಕೆ
Last Updated 28 ಮಾರ್ಚ್ 2020, 16:25 IST
ಅಕ್ಷರ ಗಾತ್ರ

ಉ‌ಡುಪಿ: ಕೊರೊನಾ ರಾಜ್ಯದ ಜನರನ್ನು ಮನೆಯೊಳಗೆ ಬಂಧಿಯಾಗಿಸಿದೆ. ದಿನೇದಿನೇ ಸೋಂಕು ಹರಡುತ್ತಲೇ ಇದ್ದು, ಸಾರ್ವಜನಿಕರು ಮನೆಬಿಟ್ಟು ಹೊರಬರಲು ಹೆದರುತ್ತಿದ್ದಾರೆ. ವ್ಯಾಪಾರ, ವಾಣಿಜ್ಯ ಚಟುವಟಿಕೆಗಳು ಸ್ತಬ್ಧವಾಗಿವೆ. ಒಂದೆಡೆ, ಬಡವರು, ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದರೆ, ಮತ್ತೊಂದೆಡೆ ಬೀದಿ ನಾಯಿಗಳ ಸ್ಥಿತಿಯೂ ಅಯೋಮಯವಾಗಿದೆ.

ಜಿಲ್ಲೆ ಲಾಕ್‌ಡೌನ್‌ ಆಗಿರುವುದರಿಂದ ಹೋಟೆಲ್‌, ರೆಸ್ಟೋರೆಂಟ್‌, ಬೇಕರಿಗಳು ಬಂದ್‌ ಆಗಿವೆ. ನಿತ್ಯ ಹೋಟೆಲ್‌, ಬೇಕರಿಗಳ ಉಳಿಕೆ ಆಹಾರವನ್ನು ಅವಲಂಬಿಸಿದ್ದ ಬೀದಿ ನಾಯಿಗಳು ಈಗ ಆಹಾರ ಸಿಗದೆ ಹಸಿವಿನಿಂದ ಬೀದಿ ಅಲೆಯುವಂತಾಗಿದೆ.‌

ಸಾರ್ವಜನಿಕರು ಕೂಡ ಮನೆಬಿಟ್ಟು ಹೊರಬಾರದ ಕಾರಣ ಶ್ವಾನಗಳ ಹಸಿವಿನ ಬಾಧೆ ಕೇಳುವವರು ಇಲ್ಲದಂತಾಗಿದೆ. ರಸ್ತೆ ಬದಿ ವ್ಯಾಪಾರವೂ ನಿಂತಿರುವುದರಿಂದ ನೂರಾರು ನಾಯಿಗಳು ಆಹಾರಕ್ಕಾಗಿ ನಗರವನ್ನು ಸುತ್ತುತ್ತಿರುವ ದೃಶ್ಯಗಳು ಕಂಡುಬಂತು.

ಶ್ವಾನಗಳಿಗೆ ಆಹಾರದ ಕೊರತೆ ಎದುರಾಗಿರುವ ವಿಚಾರ ತಿಳಿದಉಡುಪಿ ಜಿಲ್ಲಾ ನಾಗರಿಕ ಸಮಿತಿ ನೆರವಿಗೆ ಧಾವಿಸಿದ್ದು, ನಿತ್ಯವು ನಾಯಿಗಳಿಗೆ ಆಹಾರ ನೀಡುತ್ತಿದೆ. ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ಪೃಥ್ವಿ ಪೈ ಹಲವು ಬಡಾವಣೆಗಳಿಗೆ ತೆರಳಿ ಆಹಾರ ಪೂರೈಸುತ್ತಿದ್ದಾರೆ.

ಭೂಮಿ ಮೇಲಿನ ಪ್ರತಿ ಜೀವಿಗೂ ಬದುಕುವ ಹಕ್ಕಿದೆ. ಕೊರೊನಾ ಭೀತಿಯಿಂದ ನಗರ ಬಂದ್‌ ಆಗಿರುವುದರಿಂದ ನಾಯಿಗಳಿಗೆ ಆಹಾರ ಸಿಗದೆ ಹಸಿವೆಯಿಂದ ಕಂಗೆಟ್ಟಿವೆ. ಹಲವೆಡೆ ಮನುಷ್ಯನ ಮೇಲೆ ದಾಳಿ ಮಾಡುತ್ತಿರುವ ಘಟನೆಗಳೂ ನಡೆಯುತ್ತಿವೆ. ಹಾಗಾಗಿ, ಅವುಗಳಿಗೆ ಆಹಾರ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದು ನಿತ್ಯಾನಂದ ಒಳಕಾಡು ತಿಳಿಸಿದರು.

ಮತ್ತೊಂದೆಡೆ, ಅನಿಮಲ್‌ ಕೇರ್ ಟ್ರಸ್ಟ್‌ ಕೂಡ ಬೀದಿನಾಯಿಗಳಿಗೆ ಆಹಾರ ನೀಡುವ ಕೆಲಸ ಮಾಡುತ್ತಿದೆ. ಮಲ್ಪೆ, ಉಡುಪಿ, ಹಾಗೂ ಮಣಿಪಾಲ ನಗರದ ಹಲವಡೆಗಳಲ್ಲಿ 500ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ನಿತ್ಯ ಆಹಾರ ಒದಗಿಸುವ ಕಾರ್ಯ ಮಾಡುತ್ತಿದೆ.

ಟ್ರಸ್ಟ್‌ನ ಮುಖ್ಯಸ್ಥೆ ಬಬಿತಾ ಮಧ್ವರಾಜ್‌ ಫೇಸ್‌ಬುಕ್‌ ಹಾಗೂ ಜಾಲತಾಣಗಳನ್ನು ಬಳಸಿಕೊಂಡು ಬೀದಿ ನಾಯಿಗಳಿಗೆ ಆಹಾರ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಕೊರೊನಾ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಸಂಕಷ್ಟ ತಂದಿದೆ. ಇಂತಹ ಕಠಿಣ ಸಮಯದಲ್ಲಿ ಸಾರ್ವಜನಿಕರು ಪ್ರಾಣಿಗಳ ಮೇಲೆ ಅನುಕಂಪ ಹಾಗೂ ದಯೆ ತೋರಬೇಕು ಎಂದು ಮನವಿ ಮಾಡಿದ್ದಾರೆ.

ಬೀದಿ ನಾಯಿಗಳು, ಬೀದಿ ದನಗಳು, ಪ್ರಾಣಿ ಪಕ್ಷಿಗಳು ನೀರು ಆಹಾರ ಇಲ್ಲದೆ ಪರಿತಪಿಸುತ್ತಿವೆ. ಹಾಗಾಗಿ, ಸಾರ್ವಜನಿಕರು ನಿತ್ಯ ಒಂದು ಪ್ಲೇಟ್‌ ಆಹಾರ ಹಾಗೂ ನೀರನ್ನು ಗೇಟ್‌ನಿಂದ ಹೊರಗೆ ಇಡುವಂತೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT