ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಟ್ಟೆ ದುಬಾರಿ: ಈರುಳ್ಳಿ ಅಗ್ಗ, ಹೊಸ ವರ್ಷಕ್ಕೆ ಮಾಂಸ ದರ ಏರಿಕೆ

Published 22 ಡಿಸೆಂಬರ್ 2023, 5:54 IST
Last Updated 22 ಡಿಸೆಂಬರ್ 2023, 5:54 IST
ಅಕ್ಷರ ಗಾತ್ರ

ಉಡುಪಿ: ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ತ್ರಿಶತಕದ ಗಡಿ ದಾಟಿ ಮುನ್ನುಗ್ಗುತ್ತಿದೆ. ಕಳೆದವಾರ ಕೆ.ಜಿಗೆ ₹300 ರಿಂದ ₹310 ಮುಟ್ಟಿದ್ದ ಬೆಳ್ಳುಳ್ಳಿ ಸದ್ಯ ₹300 ರಿಂದ ₹320ರವರೆಗೆ ಮಾರಾಟವಾಗುತ್ತಿದೆ.

15 ರಿಂದ 20 ದಿನಗಳ ಅಂತರದಲ್ಲಿ ಬೆಳ್ಳುಳ್ಳಿ ದರ ದುಪ್ಪಟ್ಟಾಗಿದೆ. ಏಕಾಏಕಿ ಮಾರುಕಟ್ಟೆಗೆ ಬೆಳ್ಳುಳ್ಳಿ ಪೂರೈಕೆ ಕಡಿಮೆಯಾಗಿದ್ದರಿಂದ ಬೇಡಿಕೆ ಹೆಚ್ಚಾಗಿ ದರವೂ ಏರಿಕೆಯಾಗಿದೆ. ಕಳೆದವಾರಕ್ಕೆ ಹೋಲಿಸಿದರೆ ಮಾರುಕಟ್ಟೆಗೆ ಬೆಳ್ಳುಳ್ಳಿ ಪೂರೈಕೆ ಹೆಚ್ಚಾಗಿದ್ದು ದರ ನಿಧಾನವಾಗಿ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿವೆ ಎನ್ನುತ್ತಾರೆ ವ್ಯಾಪಾರಿ ಮಂಜುನಾಥ್‌.

ಟೊಮೆಟೊ ಅಲ್ಪ ಇಳಿಕೆ: ಕಳೆದವಾರ ಕೆ.ಜಿಗೆ ₹40ರಿಂದ ₹45ಕ್ಕೆ ತಲುಪಿದ್ದ ಟೊಮೆಟೊ ಪ್ರಸ್ತುತ ₹30ಕ್ಕೆ ಇಳಿಕೆಯಾಗಿದೆ. ದರ ಏರಿಕೆ ಮುನ್ಸೂಚನೆ ನೀಡಿದ್ದ ಟೊಮೆಟೊ ಏಕಾಏಕಿ ಇಳಿಕೆಯಾಗಲು ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಪೂರೈಕೆಯೇ ಕಾರಣ ಎನ್ನುತ್ತಾರೆ ವ್ಯಾಪಾರಿ ಮನ್ಸೂರ್.

ಟೊಮೆಟೊ ದರ ಇಳಿಕೆಯಾಗಿದ್ದರೂ ಗುಣಮಟ್ಟ ಉತ್ತಮವಾಗಿಲ್ಲ. ಹುಳಿ ಟೊಮೊಟೊ ಗುಣಮಟ್ಟ ಕುಸಿತವಾಗಿದ್ದು ಮೂರ್ನಾಲ್ಕು ದಿನಗಳಲ್ಲಿ ಒಂದು ಪಾರ್ಶ್ವ ಕೊಳೆಯುತ್ತಿದೆ. ಒಂದು ಕೆ.ಜಿ ಖರೀದಿಸಿದರೆ ಕಾಲು ಕೆ.ಜಿ ಹಾಳಾಗುತ್ತಿದೆ. ಸಿಹಿ ಟೊಮೆಟೊವನ್ನು ವಾರದವರೆಗೂ ಇಡಬಹುದಾದರೂ ಅಡುಗೆಗೆ ಹುಳಿ ಅಂಶ ಕೊಡುವುದಿಲ್ಲ ಎನ್ನುತ್ತಾರೆ ಗ್ರಾಹಕರು.

ಮೊಟ್ಟೆ ದುಬಾರಿ: ಮೊಟ್ಟೆಯ ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಗೆ ₹7.50 ದರ ಇದೆ. ಸಗಟು ರೂಪದಲ್ಲಿ ಮೊಟ್ಟೆ ಖರೀದಿಸಿದರೆ ಒಂದಕ್ಕೆ ₹6.50 ರಿಂದ 7ಕ್ಕೆ ಸಿಗುತ್ತಿದೆ. ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಕ್ಕೆ ಕೇಕ್‌ ಹಾಗೂ ಬೇಕರಿ ಉತ್ಪನ್ನಗಳ ತಯಾರಿಸಲು ಮೊಟ್ಟೆ ಅತ್ಯಗತ್ಯವಾಗಿರುವುದರಿಂದ ಮೊಟ್ಟೆಗೆ ವಿಪರೀತ ಬೇಡಿಕೆ ಹೆಚ್ಚಾಗಿದ್ದು ದರವೂ ಹೆಚ್ಚಾಗಿದೆ ಎನ್ನುತ್ತಾರೆ ಚಿಕ್‌ನ್ ಸೆಂಟರ್‌ ಮಾಲೀಕ ಮಹಮ್ಮದ್.

ಕ್ರಿಸ್‌ಮಸ್‌ ಹಾಗೂ ಹೊಸ ವರ್ಷ ಮುಗಿಯುವವರೆಗೂ ಮೊಟ್ಟೆ ದರ ಏರುಗತಿಯಲ್ಲಿರಲಿದೆ. ಚಿಕನ್ ದರವೂ ಕಳೆದವಾರಕ್ಕೆ ಹೋಲಿಸಿದರೆ ಕೆ.ಜಿಗೆ 20ರಷ್ಟು ಹೆಚ್ಚಾಗಿದೆ. ಸ್ಕಿನ್‌ಲೆಸ್ ಬ್ರಾಯ್ಲರ್ ಚಿಕನ್‌ ಕೆ.ಜಿಗೆ ₹220ರಿಂದ ₹240ಕ್ಕೆ ಹೆಚ್ಚಾಗಿದ್ದರೆ, ವಿತ್ ಸ್ಕಿನ್‌ ಚಿಕನ್‌ ₹200 ರಿಂದ ₹220ಕ್ಕೆ ಏರಿಕೆಯಾಗಿದೆ ಎನ್ನುತ್ತಾರೆ ಅವರು.

ತರಕಾರಿಗಳ ದರ ಬಹುತೇಕ ಸ್ಥಿರವಾಗಿದ್ದು  ಸೌತೆಕಾಯಿ ₹30, ಬದನೆಕಾಯಿ ₹40, ಬೆಂಡೆಕಾಯಿ ₹60, ತೊಂಡೆಕಾಯಿ ₹50, ಹೀರೇಕಾಯಿ ₹50, ಶುಂಠಿ ₹140, ಬೀನ್ಸ್‌ ₹60, ಸಾಂಬಾರ್ ಸೌತೆ ₹30, ಕುಂಬಳ ₹20, ಎಲೆಕೋಸು ₹15, ಹೂಕೋಸು ₹25 ದರ ಇದೆ.

ಈರುಳ್ಳಿ
ಈರುಳ್ಳಿ

ಇಳಿದ ಈರುಳ್ಳಿ ದರ

ಕಳೆದವಾರ ಕೆ.ಜಿಗೆ ₹60 ರಿಂದ ₹70 ಮುಟ್ಟಿದ್ದ ಈರುಳ್ಳಿ ದರ ಪ್ರಸ್ತುತ ಕೆ.ಜಿಗೆ ₹35 ರಿಂದ ₹40ಕ್ಕೆ ಇಳಿಕೆಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ₹100ಕ್ಕೆ ಮೂರು ಕೆ.ಜಿ ಈರುಳ್ಳಿ ದೊರೆಯುತ್ತಿದ್ದರೆ ಚಿಲ್ಲರೆ ಅಂಗಡಿಗಳಲ್ಲಿ ಕೆ.ಜಿಗೆ ₹40ಕ್ಕೆ ಮಾರಾಟವಾಗುತ್ತಿದೆ. ಮಹಾರಾಷ್ಟ್ರ ಮಧ್ಯಪ್ರದೇಶ ಸೇರಿದಂತೆ ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆಯಾಗುತ್ತಿರುವುದರಿಂದ ದರ ಏಕಾಏಕಿ ಕಡಿಮೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು. ಹಣ್ಣುಗಳ ದರ ಕಿತ್ತಳೆ ₹60 ಸೇಬು ₹170ರಿಂದ ₹240 ಕಲ್ಲಂಗಡಿ ₹30 ಪೈನಾಪಲ್ ₹40 ದಾಳಿಂಬೆ ₹200 ಸೀಬೆ ₹90 ಸಪೋಟ ₹60 ಪಪ್ಪಾಯ ₹45 ಮೂಸಂಬಿ ₹80 ಏಲಕ್ಕಿ ಬಾಳೆ ಹಣ್ಣು ₹80 ದರ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT