ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಂಭವಾಗದ ಆಳಸಮುದ್ರ ಮೀನುಗಾರಿಕೆ: ಮೀನು ದುಬಾರಿ

ಗ್ರಾಹಕರ ಬೇಡಿಕೆಗೆ ತಕ್ಕ ಮೀನುಗಳು ಲಭ್ಯವಿಲ್ಲ; ಬೇಸರ
Last Updated 4 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಮೀನುಗಾರಿಕಾ ಋತು ಆರಂಭವಾಗಿದ್ದರೂ ಯಾಂತ್ರೀಕೃತ ಬೋಟ್‌ಗಳು ಆಳ ಸಮುದ್ರ ಮೀನುಗಾರಿಕೆಗೆ ತೆರಳದ ಪರಿಣಾಮ ಮಾರುಕಟ್ಟೆಯಲ್ಲಿ ಮೀನನ ದರ ಗಗನಕ್ಕೇರಿದೆ. ಬೆಲೆ ಏರಿಕೆಯ ಬಿಸಿಯ ಜತೆಗೆ ತಾಜಾ ಹಾಗೂ ಬೇಡಿಕೆಯ ಮೀನುಗಳು ಲಭ್ಯವಿಲ್ಲದಿರುವುದು ಮತ್ಸ್ಯಪ್ರಿಯರನ್ನು ನಿರಾಶೆಗೊಳಿಸಿದೆ.

ಆ.1ರಿಂದ ಜಿಲ್ಲೆಯಲ್ಲಿ ಆಳಸಮುದ್ರ ಮೀನುಗಾರಿಕೆಗೆ ಹಸಿರು ನಿಶಾನೆ ದೊರೆತಿದ್ದು ಭರಪೂರ ಮೀನಿನ ಸುಗ್ಗಿ ನಿರೀಕ್ಷಿಸಲಾಗಿತ್ತು. ಆದರೆ, ಭಾರಿ ಮಳೆಯಿಂದ ಕಡಲು ಪ್ರಕ್ಷುಬ್ಧಗೊಂಡಿರುವ ಪರಿಣಾಮ ಪರ್ಸಿನ್ ಬೋಟ್‌ಗಳು ಸಮುದ್ರಕ್ಕಿಳಿದಿಲ್ಲ. ತೂಫಾನ್ ಕಾರಣದಿಂದ ನಾಡದೋಣಿಗಳು ಸಮುದ್ರಕ್ಕಿಳಿಯುತ್ತಿಲ್ಲ. ಪರಿಣಾಮ ಗ್ರಾಹಕರ ಬೇಡಿಕೆಯಷ್ಟು ಮೀನುಗಳು ಲಭ್ಯವಾಗುತ್ತಿಲ್ಲ. ಎಲ್ಲ ಮೀನುಗಳ ದರ ದುಪ್ಪಟ್ಟಾಗಿದೆ.

ಸಾಮಾನ್ಯವಾಗಿ ಆಳಸಮುದ್ರ ಮೀನುಗಾರಿಕೆ ನಡೆಯುವ ಸಂದರ್ಭ ಭೂತಾಯಿ ಮೀನು ಕೆ.ಜಿಗೆ ₹100 ರಿಂದ ₹150 ದರ ಇರುತ್ತಿತ್ತು. ಸದ್ಯ ದರ ₹250ರಿಂದ ₹300ಕ್ಕೆ ಹೆಚ್ಚಾಗಿದೆ. ಬಂಗುಡೆಯೂ ₹100ರಿಂದ ₹250ಕ್ಕೆ ಜಿಗಿದಿದೆ. ದಪ್ಪನಾದ ಪಾಂಪ್ಲೆಟ್‌ ಕೆ.ಜಿಗೆ ₹1000ದ ಗಡಿ ದಾಟಿದೆ. ಹಿಂದೆ ₹700ಕ್ಕೆ ಲಭ್ಯವಾಗುತ್ತಿತ್ತು. ₹500ಕ್ಕೆ ಸಿಗುತ್ತಿದ್ದ ಸಣ್ಣ ಪಾಂಪ್ಲೆಟ್‌ ₹ 700 ಮುಟ್ಟಿದೆ. ಅಂಜಲ್‌ ಕೆ.ಜಿಗೆ ₹1000 ದಿಂದ ₹1200ಕ್ಕೆ ಮಾರಾಟವಾಗುತ್ತಿದೆ.

ಮೀನುಗಳ ಬೆಲೆ ದುಪ್ಪಟ್ಟಾಗಿದೆ. ಹೆಚ್ಚು ಹಣ ತೆತ್ತರೂ ಗುಣಮಟ್ಟದ ಹಾಗೂ ತಾಜಾ ಮೀನುಗಳು ಲಭ್ಯವಾಗುತ್ತಿಲ್ಲ. ನಮಗೆ ಬೇಕಾದ ಮೀನುಗಳು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು ಗ್ರಾಹಕರಾದ ಫಾತಿಮಾ.

ಆಳಸಮುದ್ರ ಮೀನುಗಾರಿಕೆ ಶುರುವಾಗದ ಪರಿಣಾಮ 2 ತಿಂಗಳಿನಿಂದ ಮೀನಿನ ದರ ಹೆಚ್ಚಾಗಿದೆ. ಮೀನು ಖರೀದಿಗೆ ಬರುವ ಗ್ರಾಹಕರ ಸಂಖ್ಯೆಯೂ ಕಡಿಮೆಯಾಗಿದೆ. ದಿನವಿಡೀ ಮಾರುಕಟ್ಟೆಯಲ್ಲಿ ಕುಳಿತರೂ ಸಂಪೂರ್ಣವಾಗಿ ಮೀನು ಮಾರಾಟವಾಗುತ್ತಿಲ್ಲ. ಕೆಲವೊಮ್ಮೆ ಹಾಕಿದ ಬಂಡವಾಳವೂ ದಕ್ಕುತ್ತಿಲ್ಲ. ನಷ್ಟದ ಹೊರೆಯೊಂದಿಗೆ ಮನೆಗೆ ಮರಳುವಂತಾಗಿದೆ ಎಂದು ಮೀನು ಮಾರಾಟ ಮಾಡುವ ಮಹಿಳೆ ಬೇಸರ ವ್ಯಕ್ತಪಡಿಸಿದರು.

ಕೆರೆಯಲ್ಲಿ ಸಾಕುವ ರೂಹಿ, ಕಾಟ್ಲಾ ಸೇರಿದಂತೆ ಇತರ ಜಾತಿಯ ಮೀನುಗಳು ಬರುತ್ತಿವೆ. ಇವುಗಳ ಬೆಲೆಯೂ ಎರಡುಪಟ್ಟು ಹೆಚ್ಚಾಗಿದೆ. ಆಳಸಮುದ್ರ ಮೀನುಗಾರಿಕೆ ಆರಂಭವಾದರೆ ಗ್ರಾಹಕರಿಗೆ ತರಹೇವಾರಿ ಮೀನುಗಳು ಲಭ್ಯವಾಗಲಿವೆ. ಬೆಲೆಯೂ ಇಳಿಕೆಯಾಗಲಿದೆ. ವ್ಯಾಪಾರವೂ ಹೆಚ್ಚಾಗಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.

ಗಾಳದ ಮೀನಿಗೆ ದರ ಹೆಚ್ಚಾಗಿದ್ದು, ಪಾಲಿಗೆ ₹ 700 ರಿಂದ ₹ 1,000ಕ್ಕೆ ಮಾರಾಟವಾಗುತ್ತಿದೆ. ಅಂಜಲ್, ಪಾಂಪ್ಲೆಟ್‌ಗೆ ಬೇಡಿಕೆ ಇದ್ದರೂ ಲಭ್ಯವಾಗುತ್ತಿಲ್ಲ. ಹೊರಗಿನಿಂದ ಜಿಲ್ಲೆಗೆ ದುಬಾರಿ ಬೆಲೆಯ ಮೀನುಗಳನ್ನು ತರಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT