ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

300 ಲೀ. ಸೀಮೆಎಣ್ಣೆ: ಶೀಘ್ರ ಆದೇಶ ಅನುಷ್ಠಾನವಾಗಲಿ

ಕರ್ನಾಟಕ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟ ಆಗ್ರಹ
Last Updated 8 ಆಗಸ್ಟ್ 2022, 14:59 IST
ಅಕ್ಷರ ಗಾತ್ರ

ಉಡುಪಿ: ಮೋಟಾರೀಕೃತ ನಾಡದೋಣಿ ಮೀನುಗಾರರಿಗೆ ಕೊಡಲಾಗುತ್ತಿರುವ ಸಬ್ಸಿಡಿ ಸೀಮೆಎಣ್ಣೆ ಪ್ರಮಾಣವನ್ನು ತಿಂಗಳಿಗೆ 300 ಲೀಟರ್‌ಗೆ ಹೆಚ್ಚಿಸಿ 8,030 ನಾಡದೋಣಿಗಳಿಗೆ ವಿತರಿಸಲು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಶೀಘ್ರ ಅನುಷ್ಠಾನಕ್ಕೆ ಬರಬೇಕು ಎಂದು ಕರ್ನಾಟಕ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಆನಂದ ಖಾರ್ವಿ ಉಪ್ಪುಂದ ಒತ್ತಾಯಿಸಿದರು.

ಸೋಮವಾರ ಅಂಬಲಪಾಡಿಯ ಕಾರ್ತಿಕ್‌ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘2013ರಲ್ಲಿ 4,514 ನಾಡದೋಣಿಗಳಿಗೆ (ದಕ್ಷಿಣ ಕನ್ನಡ 1,345, ಉತ್ತರ ಕನ್ನಡ 1,789, ಉಡುಪಿ 4,896) ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಪ್ರತಿ ತಿಂಗಳು ತಲಾ 300 ಲೀಟರ್‌ನಂತೆ ₹ 16.50 ದರದಲ್ಲಿ ಸಬ್ಸಿಡಿ ಸೀಮೆ ಎಣ್ಣೆ ನೀಡಲು ಸರ್ಕಾರ ಆದೇಶಿಸಿತ್ತು’.

ಬಳಿಕ ನಾಡದೋಣಿಗಳ ಸಂಖ್ಯೆ 8,030ಕ್ಕೆ ಹೆಚ್ಚಾದರೂ (ದಕ್ಷಿಣ ಕನ್ನಡ 1,345, ಉತ್ತರ ಕನ್ನಡ 1,789, ಉಡುಪಿ 4,896) ಮಾಸಿಕ ಮಿತಿ ಹೆಚ್ಚಾಗಿರಲಿಲ್ಲ. ಸದ್ಯ ಚಾಲ್ತಿಯಲ್ಲಿರುವ ನಾಡದೋಣಿಗಳಿಗೆ ಅನುಗುಣವಾಗಿ ಪ್ರತಿ ನಾಡದೋಣಿಗೆ 300 ಲೀಟರ್‌ನಂತೆ ವಾರ್ಷಿಕ 24,090 ಲೀಟರ್‌ ಸೀಮೆಎಣ್ಣೆ ಅಗತ್ಯವಿರುವುದಾಗಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿತ್ತು.

ಅದರಂತೆ, ಮೀನುಗಾರರ ಬೇಡಿಕೆಗೆ ಸ್ಪಂದಿಸಿರುವ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಾಗೂ ಮೀನುಗಾರಿಕಾ ಸಚಿವ ಅಂಗಾರ ಅವರಿಗೆ ನಾಡದೋಣಿ ಮೀನುಗಾರರು ಅಭಿನಂದನೆ ಸಲ್ಲಿಸುತ್ತಾರೆ. ಸರ್ಕಾರ ಆದೇಶವನ್ನು ಶೀಘ್ರ ಅನುಷ್ಠಾನಗೊಳಿಸಬೇಕು. ಮೀನುಗಾರರಿಗೆ ಪ್ರಯೋಜನ ಸಿಗಬೇಕು ಎಂದು ಆಗ್ರಹಿಸಿದರು.

ನಾಡದೋಣಿಗಳಿಗೆ ಹಾನಿ:

ನಾಡದೋಣಿ ಮೀನುಗಾರಿಕೆ ಆರಂಭವಾದ ಕೆಲವೇ ದಿನಗಳಲ್ಲಿ ಭಾರಿ ಮಳೆಗೆ ಕಡಲು ಪ್ರಕ್ಷುಬ್ಧಗೊಂಡು ನಾಡದೋಣಿಗಳಿಗೆ ಹೆಚ್ಚಿನ ಹಾನಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ 64 ನಾಡದೋಣಿಗಳಿಗೆ ಹಾನಿಯಾಗಿದ್ದು, 10 ದೋಣಿಗಳು ಸಂಪೂರ್ಣ ಹಾನಿಯಾಗಿವೆ. ಅಂದಾಜು ₹ 3 ಕೋಟಿಯಷ್ಟು ನಷ್ಟ ಸಂಭವಿಸಿದೆ. ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಡದೋಣಿ ಮೀನುಗಾರಿಗೆ ಹಾನಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್‌.ಕೆ.ಗೋಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT