ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಂಟ್‌ ಮೇರಿಸ್ ದ್ವೀಪದಲ್ಲಿ ತೇಲುವ ಜೆಟ್ಟಿ

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌
Last Updated 3 ಜುಲೈ 2018, 15:41 IST
ಅಕ್ಷರ ಗಾತ್ರ

ಉಡುಪಿ: ‘ಮಲ್ಪೆಯಿಂದ ಸೇಂಟ್‌ ಮೇರಿಸ್ ದ್ವೀಪಕ್ಕೆ ತೆರಳುವ ಪ್ರವಾಸಿಗರಿಗೆ, ದ್ವೀಪದಲ್ಲಿ ಇಳಿಯಲು ಅನುಕೂಲವಾಗುವಂತೆ ₹2.26 ಕೋಟಿ ವೆಚ್ಚದಲ್ಲಿ ಸಮುದ್ರದಲ್ಲಿ ತೇಲುವ ಜೆಟ್ಟಿ ನಿರ್ಮಾಣ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರಸ್ತುತ ಮಲ್ಪೆಯಿಂದ ಸೇಂಟ್‌ ಮೇರಿಸ್‌ ದೀಪಕ್ಕೆ ದೊಡ್ಡಬೋಟ್‌ನಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವಾಗ ದ್ವೀಪದಿಂದ ಸುಮಾರು 150 ಮೀಟರ್‌ ದೂರ ಇರುವಾಗಲೇ ಪ್ರವಾಸಿಗರನ್ನು ಸಣ್ಣ ದೋಣಿಗಳಿಗೆ ಇಳಿಸಲಾಗುತ್ತಿತ್ತು. ಬಳಿಕ ಪ್ರವಾಸಿಗರನ್ನುದ್ವೀಪಕ್ಕೆ ತಲುಪಿಸಲಾಗುತ್ತಿತ್ತು. ಸಮುದ್ರದ ಮಧ್ಯೆ ಬೋಟ್‌ಗಳನ್ನು ಬದಲಾಯಿಸುವುದು ಅಪಾಯಕಾರಿಯಾಗಿರುವ ಹಿನ್ನೆಲೆಯಲ್ಲಿ ಈ ಹೊಸ ಯೋಜನೆ ರೂಪಿಸಲಾಗಿದೆ’ ಎಂದರು.

‘ಯಾವುದೇ ರೀತಿಯಾದ ಅಪಾಯಗಳು ಎದುರಾಗದಂತೆ ದ್ವೀಪದ ಬಳಿ ₹2.26 ಕೋಟಿ ಅಂದಾಜು ವೆಚ್ಚದಲ್ಲಿ ಪ್ಲೋಟಿಂಗ್ ಜೆಟ್ಟಿ ನಿರ್ಮಿಸಲು ಪ್ರಸ್ತಾವ ರೂಪಿಸಲಾಗಿದೆ. ಮಳೆಗಾಲದ ಸಮಯದಲ್ಲಿ ಈ ಜೆಟ್ಟಿಯನ್ನು ಸುಲಭವಾಗಿ ಬಿಚ್ಚಿಡಲು ಸಾಧ್ಯವಾಗುವಂತೆ ಜೆಟ್ಟಿ ನಿರ್ಮಾಣ ಕಾಮಗಾರಿ ನಡೆಯಲಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಮಲ್ಪೆ ಬೀಚ್‌ನಲ್ಲಿ ಈಗಾಗಲೇ ಪೊಲೀಸ್ ಇಲಾಖೆಯಿಂದ ನಿಗದಿಪಡಿಸಲಾಗಿರುವ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಶೆಲ್ಟರ್ ಹಾಗೂ ವಾಚ್ ಟವರ್ ನಿರ್ಮಿಸುವಂತೆ’ ಕೆಆರ್‌ಐಡಿಎಲ್ ಅಧಿಕಾರಿಗಳಿಗೆ ಸೂಚಿಸಿದರು. ತ್ರಾಸಿ ಮರವಂತೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಜಾಗವನ್ನು ಗುರುತಿಸಿ ಬೇಲಿ ಅಳವಡಿಸುವಂತೆ ಹಾಗೂ ಯಾತ್ರಿ ನಿವಾಸ ನಿರ್ಮಿಸುವ ಕುರಿತಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ತ್ರಾಸಿಯಲ್ಲಿರುವ ಪ್ರವಾಸೋದ್ಯಮ ಇಲಾಖೆಯ ವಸತಿಗೃಹವನ್ನು ಪಾರಂಪರಿಕ ರೀತಿಯಲ್ಲಿ ಆಕರ್ಷಕವಾಗಿ ನವೀಕರಣಗೊಳಿಸಲು ಪ್ರಸ್ತಾವ ಸಲ್ಲಿಸುವಂತೆ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದ ಡಿಸಿ, ತ್ರಾಸಿ ಸಮುದ್ರ ತೀರದಲ್ಲಿ ವಾಚ್ ಟವರ್ ನಿರ್ಮಾಣ ಹಾಗೂ ಲೈಟಿಂಗ್ ವ್ಯವಸ್ಥೆ ಕುರಿತು ಪರಿಶೀಲಿಸುವಂತೆ ಕೆಆರ್‌ಐಡಿಎಲ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಈಗಾಗಲೇ 2 ಹೌಸ್ ಬೋಟ್‌ಗಳಿಗೆ ಅನುಮೋದನೆ ನೀಡಲಾಗಿದ್ದು, ಹೊಸದಾಗಿ 5 ಹೌಸ್ ಬೋಟ್‌ಗಳಿಗೆ ಅನುಮತಿ ಕೋರಿರುವ ಕುರಿತಂತೆ ಚರ್ಚೆ ನಡೆಸಲಾಯಿತು. ಹೌಸ್ ಬೋಟ್‌ಗಳ ಸಂಖ್ಯೆಯು ನದಿಯಲ್ಲಿ ಹೆಚ್ಚಾಗದಂತೆ ಪರಿಶೀಲಿಸಿ ಅನುಮತಿ ನೀಡಬೇಕು ಹಾಗೂ ಹೌಸ್ ಬೋಟ್‌ಗಳ ನಿರ್ವಹಣೆ ಕುರಿತಂತೆ ಪ್ರತ್ಯೇಕ ನಿಯಮಗಳನ್ನು ರೂಪಿಸುವಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

‘ಸೋಷಿಯಲ್ ಮೀಡಿಯಾಗಳಲ್ಲಿ ಜಿಲ್ಲೆಯ ಪ್ರವಾಸೋದ್ಯಮವನ್ನು ಪ್ರಚಾರ ಮಾಡಬೇಕು. ಪ್ರವಾಸೋದ್ಯಮವನ್ನು ವ್ಯವಸ್ಥಿತ ರೀತಿಯಲ್ಲಿ ಅಭಿವೃದ್ಧಿ ಪಡಿಸಬೇಕು. ಈ ಬಗ್ಗೆ ತರಬೇತಿ ನೀಡುವ ವ್ಯವಸ್ಥೆ ಮಾಡಿ’ ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT