ಗುರುವಾರ , ಮಾರ್ಚ್ 23, 2023
28 °C
ಡೀಮ್ಡ್ ಫಾರೆಸ್ಟ್ ಕುರಿತ ಸಭೆಯಲ್ಲಿ ಸಚಿವ ಅರವಿಂದ ಲಿಂಬಾವಳಿ

ಡೀಮ್ಡ್ ಫಾರೆಸ್ಟ್ ಸಮಸ್ಯೆ ಶೀಘ್ರವೇ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಕಳ: ‘ರಾಜ್ಯದಲ್ಲಿ 9.91 ಸಾವಿರ ಹೆಕ್ಟೇರ್ ಪ್ರದೇಶದಲ್ಲಿರುವ ಡೀಮ್ಡ್ ಫಾರೆಸ್ಟ್‌ ಕುರಿತು ಇಲಾಖೆ ಅಧಿಕಾರಿಗಳ ಜತೆಗೆ ಚರ್ಚಿಸಲಾಗಿದೆ. ಡೀಮ್ಡ್ ಫಾರೆಸ್ಟ್ ಸಮಸ್ಯೆಗೆ ಶೀಘ್ರವೇ ಪರಿಹಾರ ಸಿಗಲಿದೆ’ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಅರಣ್ಯ ಇಲಾಖೆ ಕಾರ್ಕಳ ವಲಯದ ವತಿಯಿಂದ ಭಾನುವಾರ ಇಲ್ಲಿ ಹಮ್ಮಿಕೊಂಡಿದ್ದ ಡೀಮ್ಡ್ ಫಾರೆಸ್ಟ್ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ಯಾರಿಗೂ ತೊಂದರೆ ನೀಡುವ ಉದ್ದೇಶ ಅರಣ್ಯ ಇಲಾಖೆಗೆ ಇಲ್ಲ. ಸರ್ಕಾರ ಯಾವುದೋ ಸಂದರ್ಭದಲ್ಲಿ ನೀಡಿದ ಆದೇಶದಿಂದ ಸಮಸ್ಯೆ ಉದ್ಭವಿಸಿದೆ. ಶಾಸಕರು ತಮ್ಮ ವ್ಯಾಪ್ತಿಯ ಅಧಿಕಾರಿಗಳ ಜತೆಗೆ ಗ್ರಾಮಗಳಿಗೆ ತೆರಳಿ ಡೀಮ್ಡ್ ಫಾರೆಸ್ಟ್‌ ಕುರಿತು ಚರ್ಚಿಸಬೇಕು. ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದ ಅನ್ಯಾಯಕ್ಕೆ ಒಳಗಾದವರಿಗೆ ಹಕ್ಕುಪತ್ರ ನೀಡುವ ಪ್ರಯತ್ನ ಮಾಡಬೇಕು. ವನ್ಯಜೀವಿ ವಿಭಾಗದ ಅರಣ್ಯ ಹೊರತು ಪಡಿಸಿ ಇತರೆಡೆ ಹಿಂದಿನ ರಸ್ತೆಗಳಿದ್ದಲ್ಲಿ ಅಲ್ಲಿ ಡಾಂಬರ್‌ ಹಾಕಿಕೊಳ್ಳಲು ಅವಕಾಶ ನೀಡಲಾಗುವುದು. ಅಭಯಾರಣ್ಯದ ಪ್ರದೇಶಗಳಲ್ಲಿ ಇಂತಹ ಅನುಮತಿಗೆ ಸ್ವಲ್ಪ ವಿಳಂಬವಾಗಲಿದೆ. ಅದನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಬೇಕಾಗುತ್ತದೆ ಎಂದರು.

ಸಾರ್ವಜನಿಕ ಉದ್ದೇಶಕ್ಕೆ ನಿವೇಶನ ನೀಡಲು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಬೇಕಾಗಿದ್ದು, ಸರ್ಕಾರ ಸಿದ್ಧವಿದೆ. ಆದರೆ ಅರಣ್ಯ ಇಲಾಖೆ ಪ್ರಾಣಿ, ಮರ, ಜನರ ಪರವಾಗಿರಬೇಕು. ಕೋವಿಡ್‌ ಸೋಂಕಿನ ವೇಳ ಆಮ್ಲಜನಕ ಬೇರೆ ದೇಶಗಳಿಂದ ಖರೀದಿಸುವಂತಹ ಸ್ಥಿತಿ ಬಂತು. ಅರಣ್ಯ ಬೆಳಸಿದರೆ ಇಂತಹ ಯಾವುದೇ ಸಮಸ್ಯೆ ಉಂಟಾಗಲ್ಲ ಎಂದು ಅವರು ಹೇಳಿದರು.

ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಹೊರ ಹೋಗಲು ಸ್ವಇಚ್ಛೆಯಿಂದ ಮುಂದೆ ಬಂದ ಕೊಕ್ರಯ್ಯ ಎನ್ನುವವರಿಗೆ ₹ 44 ಲಕ್ಷ ಪರಿಹಾರವನ್ನು, ಇತರ ಫಲಾನಿಭವಿಗಳಿಗೆ ಹಕ್ಕು ಪತ್ರ ವಿತರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಶಾಸಕ ವಿ ಸುನಿಲ್ ಕುಮಾರ್ ಮಾತನಾಡಿದರು.

ಸಚಿವರ ಜತೆಗೆ ನಡೆದ ಸಂವಾದದಲ್ಲಿ ಪ್ರಗತಿಪರ ನಾಗರಿಕ ವೇದಿಕೆ ಸಂಜೀವ ಶೆಟ್ಟಿ ಹೆಬ್ರಿ, ರಾಘವ ನಾಯಕ್ ಮಾಳ, ಪವಿತ್ರಾ ಎಳ್ಳಾರೆ, ಕುಕ್ಕುಜೆಯ ವಿಶ್ವಕರ್ಮ ಬ್ರಾಹ್ಮಣ ಸಂಘದ ಪ್ರತಿನಿಧಿ ಮೊದಲಾದವರು ಭಾಗವಹಿಸಿ ತಮ್ಮ ಅಹವಾಲುಗಳನ್ನು ತಿಳಿಸಿದರು.

ಅರಣ್ಯಾಧಿಕಾರಿಗಳಾದ ಸೀಮ್ ಗರ್ಗ್, ಮಿಲ್ಲೋ ಟ್ಯಾಗೊ, ಪ್ರಕಾಶ್ ಎಸ್. ನೆಟ್ಟಾಲ್ಕರ್, ಬೆಂಗಳೂರಿನ ಸಂಜಯ ಬಿಜೂರು, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರ ಸದಾಶಿವ ಪ್ರಭು, ಪುರಸಭಾಧ್ಯಕ್ಷೆ ಸುಮಾ ಕೇಶವ್ ಇದ್ದರು.

ಉದಯ ಎಸ್. ಕೋಟ್ಯಾನ್ ಸ್ವಾಗತಿಸಿದರು. ನವೀನ್ ನಾಯಕ್ ನಿರೂಪಿಸಿದರು. ರೇಷ್ಮಾ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸುಮಿತ್ ಶೆಟ್ಟಿ ವಂದಿಸಿದರು.

‘65 ಸಾವಿರ ಹೆಕ್ಟೇರ್‌ ಡೀಮ್ಡ್‌ ಫಾರೆಸ್ಟ್’

ರಾಜ್ಯದ ಎಲ್ಲ ಶಾಸಕರು ಎಚ್ಚತ್ತು ನಿಶ್ಚಿತವಾಗಿ ಈ ಡೀಮ್ಡ್ ಫಾರೆಸ್ಟ್‌ ಸಮಸ್ಯೆಯನ್ನು ಪರಿಹರಿಸಲು ಸಹಕರಿಸಬೇಕು. ಉಡುಪಿ ಜಿಲ್ಲೆಯಲ್ಲೇ 65 ಸಾವಿರ ಹೆಕ್ಟೇರ್ ಡೀಮ್ಡ್ ಫಾರೆಸ್ಟ್‌ ಇದೆ. ಜನರ ವಾಸ್ತವ್ಯದ ಪ್ರದೇಶ ಹಾಗೂ ಕೃಷಿ ಚಟುವಟಿಕೆಯಿಂದ ಕೂಡಿದ ಪ್ರದೇಶವನ್ನು ಕೈಬಿಡುವಂತೆ ಸುಪ್ರೀಂ ಕೋರ್ಟ್‌ಗೆ ಅಪಿಧಾವಿತ್ ಸಲ್ಲಿಸಲಾಗುತ್ತದೆ. ಈ ಅವಧಿಯಲ್ಲಿ ಈ ಸಮಸ್ಯೆಗೆ ಪರಿಹಾರ ಸೂಚಿಸುವಲ್ಲಿ ಪ್ರಯತ್ನ ನಡೆಸಲಾಗುವುದು. ಕಾರ್ಕಳದಿಂದಲೇ ಈ ಸಮಸ್ಯೆ ಪರಿಹಾರಕ್ಕೆ ಚಾಲನೆ ನೀಡೋಣ, ನಂತರ ರಾಜ್ಯದಲ್ಲಿಯೂ ಮುಂದುವರಿಯಲಿ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.

‘ಡೀಮ್ಡ್‌ ಫಾರೆಸ್ಟ್‌ ಸಮಸ್ಯೆ’

 ‘ಈಗಾಗಲೇ ಗುಡಿಸಲು ಮನೆ ನಿರ್ಮಾಣ ಮಾಡಿಕೊಂಡು 94ಸಿ ಅಡಿಯಲ್ಲಿ 3,595 ಮಂದಿಗೆ, 94 ಸಿಸಿ ಅಡಿಯಲ್ಲಿ 1,175 ಮಂದಿಗೆ ಅಕ್ರಮ ಸಕ್ರಮದ ಅಡಿ ನಮೂನೆ 53 ರ ಅಡಿಯಲ್ಲಿ ಅರ್ಜಿ ಸಲ್ಲಿಸಿ 20 ವರ್ಷಗಳಿಂದ ಮನೆ ನಿರ್ಮಿಸಿಕೊಂಡವರಿಗೆ 3 ಸೆಂಟ್ಸ್, 5 ಸೆಂಟ್ಸ್ ಮನೆ ಕಟ್ಟಿಕೊಳ್ಳಲು ತಾಲ್ಲೂಕಿನಲ್ಲಿ ಅರ್ಜಿ ಹಾಕಿರುವ 6,616 ಮಂದಿಗೆ ಡೀಮ್ಡ್ ಫಾರೆಸ್ಟ್‌ ಸಮಸ್ಯೆಯಿದೆ’ ಎಂದು  ಶಾಸಕ ವಿ ಸುನಿಲ್ ಕುಮಾರ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು