ಬುಧವಾರ, ಅಕ್ಟೋಬರ್ 21, 2020
21 °C
ಗಾಂಧಿ ಗ್ರಾಮ ಪುರಸ್ಕಾರಕ್ಕೆ ಸರ್ಕಾರಕ್ಕೆ ಶಿಫಾರಸು

ಉಡುಪಿ: ಕಸದಲ್ಲಿ ಕಾಸು ತೆಗೆದ ಬಡಗಬೆಟ್ಟು ಪಂಚಾಯಿತಿ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಘನ ಹಾಗೂ ದ್ರವ ಸಂಪನ್ಮೂಲ ಘಟಕಗಳ (ಎಸ್‌ಎಲ್‌ಆರ್‌ಎಂ) ನಿರ್ವಹಣೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಉಡುಪಿ ತಾಲ್ಲೂಕಿನ 80 ಬಡಗಬೆಟ್ಟು ಗ್ರಾಮ ಪಂಚಾಯಿತಿಗೆ ಈ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ನೀಡುವಂತೆ ಜಿಲ್ಲಾ ಪಂಚಾಯಿತಿ ಶಿಫಾರಸು ಮಾಡಿದ್ದು, ಬಹುತೇಕ ಆಯ್ಕೆ ಖಚಿತವಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆ, ವಿದ್ಯುತ್ ದೀಪಗಳ ನಿರ್ವಹಣೆ, ಸರ್ಕಾರದ ಅನುದಾನದ ಸದ್ಬಳಕೆ, ನರೇಗಾ ಕಾಮಗಾರಿ ಅನುಷ್ಠಾನ, ಸಮರ್ಪಕ ತ್ಯಾಜ್ಯ ವಿಲೇವಾರಿ, ನಿಯಮಿತ ಗ್ರಾಮ ಸಭೆ, ಸಾಮಾನ್ಯ ಸಭೆ, ಸ್ಥಾಯಿ ಸಮಿತಿಗಳ ಆಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಬಡಗಬೆಟ್ಟು ಗ್ರಾಮ ಪಂಚಾಯಿತಿ ಉತ್ತಮ ಸಾಧನೆ ಮಾಡಿದೆ.

ಮಾದರಿ ಎಸ್ಎಲ್‌ಆರ್‌ಎಂ:

ರಾಜ್ಯಕ್ಕೆ ಮಾದರಿಯಾಗಿರುವ ಘನ, ದ್ರವ ತ್ಯಾಜ್ಯ ಸಂಪನ್ಮೂಲ ಘಟಕಗಳ ನಿರ್ವಹಣೆಯಲ್ಲಿ 80 ಬಡಗಬೆಟ್ಟು ಪಂಚಾಯಿತಿ ಮುಂದಿದೆ. ತ್ಯಾಜ್ಯ ನಿರ್ವಹಣೆಗೆ ಪಂಚಾಯಿತಿಯ ಅನುದಾನ ಬಳಕೆ ಮಾಡದೆ, 2,500ಕ್ಕೂ ಹೆಚ್ಚು ಮನೆ, ಅಂಗಡಿ, ಹೋಟೆಲ್‌ಗಳಿಂದ ಸಂಗ್ರಹವಾಗುವ ಕಸ ನಿರ್ವಹಣೆಯ ಶುಲ್ಕ ಹಾಗೂ ಘನ ತ್ಯಾಜ್ಯ ಮಾರಾಟದಿಂದ ಬರುವ ಆದಾಯವನ್ನು ಬಳಸಿಕೊಂಡು, ಸಿಬ್ಬಂದಿ ವೇತನ, ಘಟಕಗಳ ಖರ್ಚು–ವೆಚ್ಚವನ್ನು ನಿಭಾಯಿಸುತ್ತಿರುವುದು ಪಂಚಾಯಿತಿಯ ಹೆಚ್ಚುಗಾರಿಕೆ.

ಜತೆಗೆ ಸುವರ್ಣ ನದಿಯ 2ನೇ ಹಂತದ ಕುಡಿಯುವ ನೀರಿನ ಯೋಜನೆಯಡಿ ಪಂಚಾಯಿತಿ ವ್ಯಾಪ್ತಿಯ ಪ್ರತಿ ಮನೆಗೂ ನೀರು ಪೂರೈಕೆ ಮಾಡಲಾಗುತ್ತಿದೆ. ಮನೆಗಳಿಗೆ ನೀರಿನ ಮೀಟರ್‌ ಅಳವಡಿಸಿ, ಪಂಚಾಯಿತಿಗೆ ನೀರಿನ ಕಂದಾಯ ಹರಿದು ಬರುವ ಪ್ರಮಾಣ ಹೆಚ್ಚು ಮಾಡಲಾಗಿದೆ. ಪರಿಣಾಮ ಪಂಚಾಯಿತಿಯ ಅನುದಾನವನ್ನು ಕುಡಿಯುವ ನೀರು ಪೂರೈಕೆಗೆ ಬಳಸದೆ ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಸೋಲಾರ್‌ ಅಳವಡಿಕೆ:

ಪಂಚಾಯಿತಿ ಕಚೇರಿಗೆ ದಾನಿಗಳ ನೆರವಿನಿಂದ ಸೋಲಾರ್ ಅಳವಡಿಸಲಾಗಿದೆ. ಇದರಿಂದ ವಿದ್ಯುತ್ ಇಲ್ಲದಿದ್ದರೂ, ದಿನನಿತ್ಯದ ಕಾರ್ಯಗಳು ಅಡಚಣೆ ಇಲ್ಲದೆ ಹವಾನಿಯಂತ್ರಿತ (ಎಸಿ) ವ್ಯವಸ್ಥೆಯಲ್ಲಿ ನಡೆಯುತ್ತಿದೆ ಎನ್ನುತ್ತಾರೆ ಪಿಡಿಒ ಅಶೋಕ್ ಕುಮಾರ್‌.

ಪಂಚಾಯಿತಿ ವ್ಯಾಪ್ತಿಯ್ಲಲಿ ಬೀದಿ ದೀಪಗಳ ನಿರ್ವಹಣೆ, ನರೇಗಾ ಕಾಮಗಾರಿ, ಎಸ್‌ಸಿ, ಎಸ್‌ಟಿ ವರ್ಗಕ್ಕೆ ಮೀಸಲಾದ ಅನುದಾನ ಬಳಕೆ, ಸಕಾಲ ಸೇರಿದಂತೆ ಸರ್ಕಾರದ ಎಲ್ಲ ಯೋಜನೆಗಳ ಅನುಷ್ಠಾನದಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದೆ ಎನ್ನುತ್ತಾರೆ ಅಶೋಕ್‌.

‘ತಾಲ್ಲೂಕಿನಲ್ಲಿಯೇ ಗರಿಷ್ಠ ಅಂಕ’

ಸರ್ಕಾರದ ಎಲ್ಲ ಯೋಜನೆಗಳ ಅನುಷ್ಠಾನ ಹಾಗೂ ಪಂಚಾಯಿತಿ ಕಾರ್ಯವೈಖರಿಯನ್ನು ಮೌಲ್ಯಮಾಪನ ಮಾಡಿ ಒಟ್ಟು 200 ಅಂಕಗಳಲ್ಲಿ ಬಡಗಬೆಟ್ಟು ಗ್ರಾಮ ಪಂಚಾಯಿತಿಗೆ 176 ಅಂಕಗಳು ಸಿಕ್ಕಿವೆ. ಉಡುಪಿ ತಾಲ್ಲೂಕಿನಲ್ಲಿಯೇ ಇದು ಗರಿಷ್ಠ ಅಂಕ. 2014 ಹಾಗೂ 2015ನೇ ಸಾಲಿನಲ್ಲೂ ಬಡಗಬೆಟ್ಟು ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು ಪಿಡಿಒ ಅಶೋಕ್ ಕುಮಾರ್‌.

‘ಬಡಗಬೆಟ್ಟು ಮಾದರಿ ಪಂಚಾಯಿತಿ’

ನಗರಸಭೆಗೂ ಮುನ್ನವ ಕಸ ನಿರ್ವಹಣೆ ವಿಚಾರದಲ್ಲಿ ಬಡಗಬೆಟ್ಟು ಪಂಚಾಯಿತಿ ಮಾದರಿಯಾಗಿ ಕೆಲಸ ಮಾಡಿದೆ. ಪ್ರತಿ ಮನೆಯಿಂದ ಕಸ ಸಂಗ್ರಹ, ಶುದ್ಧ ಕುಡಿಯುವ ನೀರು ಪೂರೈಕೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಪಂಚಾಯಿತಿಯ ಅನುದಾನವನ್ನು ಕಸ ನಿರ್ವಹಣೆಗೆ ಹಾಗೂ ನೀರು ಪೂರೈಕೆಗೆ ಬಳಸದೆ, ಜನರಿಂದ ಸಂಗ್ರಹವಾಗುವ ಶುಲ್ಕವನ್ನು ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಪಂಚಾಯಿತಿ ಅನುದಾನವನ್ನು ರಸ್ತೆಗಳ ನಿರ್ಮಾಣ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಮಾತ್ರ ಬಳಕೆ ಮಾಡಲಾಗುತ್ತಿದೆ ಎನ್ನುತ್ತಾರೆ ಬಡಗಬೆಟ್ಟು ಗ್ರಾಮ ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷ ಕೆ.ಶಾಂತಾರಾಮ ಶೆಟ್ಟಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು