ಭಾನುವಾರ, ನವೆಂಬರ್ 27, 2022
27 °C
ಗಾಂಧಿ ಜಯಂತಿಯಲ್ಲಿ ಪ್ರೊ.ಅಶೋಕ್ ಕುಮಾರ್ ಸಿನ್ಹಾ

ಅಗತ್ಯ ಆಧಾರಿತ ಆರ್ಥಿಕತೆ ಪ್ರತಿಪಾದಕ ಗಾಂಧೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ‌ಜಾತಿ, ಧರ್ಮ, ಬಣ್ಣ, ಜನಾಂಗ ಹಾಗೂ ತಾರತಮ್ಯ ಮುಕ್ತವಾದ ಶಾಂತಿ, ಸಮಾನತೆ, ಅಹಿಂಸೆ, ಸಹಿಷ್ಣುತೆಯ ಮೇಲೆ ಆಧರಿತವಾದ ಗಾಂಧಿಯ ಪ್ರಾಪಂಚಿಕ ದೃಷ್ಟಿ ಮತ್ತು ಪ್ರಪಂಚ ಅಗತ್ಯ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಕುಲಪತಿ ಡಾ.ಎಂ.ಡಿ.ವೆಂಕಟೇಶ್ ಪ್ರತಿಪಾದಿಸಿದರು.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಯೋಜಿಸಿದ್ದ ಗಾಂಧಿ ಜಯಂತಿಯಲ್ಲಿ ಮಾತನಾಡಿ, ಮಹಾತ್ಮ ಗಾಂಧೀಜಿ ಆದರ್ಶಪ್ರಾಯವಾದ ಜೀವನ ನಡೆಸಿದವರು. ಅವರ ಆದರ್ಶಗಳ ಒಂದು ಭಾಗವನ್ನಾದರೂ ನಾವೆಲ್ಲರೂ ಅನುಸರಿಸಿದರೆ ಜಗತ್ತು ಉತ್ತಮವಾಗಿರುತ್ತದೆ ಎಂದರು.

ಗಾಂಧೀಜಿ ಅವರದ್ದು ಅತ್ಯಂತ ಸ್ಫೂರ್ತಿದಾಯಕ ನಾಯಕತ್ವ. ಸಾಮೂಹಿಕ ಚಳುವಳಿ ಹಾಗೂ ಸತ್ಯಾಗ್ರಹದಿಂದಲೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ಎಂದರು.

ಮಗಧ ವಿಶ್ವವಿದ್ಯಾಲಯದ ಪ್ರೊ.ಅಶೋಕ್ ಕುಮಾರ್ ಸಿನ್ಹಾ ‘ಸಮಾನ ಮತ್ತು ಸುಸ್ಥಿರ ಅಭಿವೃದ್ಧಿ’ ಆಧಾರಿತ ಗಾಂಧಿಯವರ ಅರ್ಥಶಾಸ್ತ್ರದ ಅಗತ್ಯವನ್ನು ಒತ್ತಿ ಹೇಳಿ, ದುರಾಸೆ ಆಧಾರಿತ ಆರ್ಥಿಕತೆಗಿಂತ ಅಗತ್ಯ ಆಧಾರಿತ ಆರ್ಥಿಕತೆ ರಾಷ್ಟ್ರದ ತಾತ್ವಿಕ ಆಧಾರವಾಗಿರಬೇಕು ಎಂದು ಅವರು ಹೇಳಿದರು.

ಗಾಂಧೀಜಿ ತತ್ವಗಳನ್ನು ಕಲೆಯೊಂದಿಗೆ ಸಮೀಕರಿಸಿ ಮಾತನಾಡಿದ ಡಾ.ಶೋಭಾ ಕಾಮತ್, ಗಾಂಧೀಜಿ ಕಲೆಯನ್ನು ಉನ್ನತ ಉದ್ದೇಶಕ್ಕಾಗಿ ಬಯಸಿದ್ದರು. ಚಲನಚಿತ್ರ, ವರ್ಣಚಿತ್ರ, ಸಾಹಿತ್ಯ, ರಂಗಭೂಮಿ, ಸಂಗೀತ ಮತ್ತು ನೃತ್ಯದಂತಹ ವಿವಿಧ ಕಲಾ ಪ್ರಕಾರಗಳಲ್ಲಿ ಗಾಂಧಿ ತತ್ವಗಳು ಪ್ರಕಟವಾಗಿದ್ದು, ಸ್ಫೂರ್ತಿ ನೀಡುತ್ತದೆ ಎಂದರು.

ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಶಿಕ್ಷಣವು ಗಾಂಧಿ ತತ್ವವನ್ನು ಆಧರಿಸಿರಬೇಕು. ಜಿಸಿಪಿಎಎಸ್ ಪ್ರತಿಪಾದಿಸುವ ಪರಿಸರ, ಸೌಂದರ್ಯಶಾಸ್ತ್ರ ಮತ್ತು ಶಾಂತಿಯನ್ನು ಗಾಂಧಿ ತತ್ವಗಳಿಂದಲೇ ಪಡೆಯಲಾಗಿದೆ ಎಂದು ಉಲ್ಲೇಖಿಸಿದರು.

ಜಿಸಿಪಿಎಎಸ್ ವಿದ್ಯಾರ್ಥಿಗಳಾದ ಶ್ರಾವ್ಯ ಬಾಸ್ರಿ ಸಂಗೀತ ನೀಡಿದರು. ಅಪೂರ್ವ, ಶಿಖಾ ರಾಣಾ ನೃತ್ಯ ಮಾಡಿದರು. ಅಪರ್ಣ ಪರಮೇಶ್ವರನ್ ವರ್ಣಚಿತ್ರ ರಚಿಸಿದರು. ಸಂಪದ ಭಾಗವತ್  ಚಲನಚಿತ್ರಗಳ ಮೂಲಕ ಗಾಂಧಿ ವಂದನೆ ಆಯೋಜಿಸಿದ್ದರು. ಶಾಂತಿಯ ವಿವಿಧ ಆಯಾಮಗಳ ಕುರಿತು ಚಿನ್ಮಯಿ ಬಾಳ್ಕರ್, ವೆಲಿಕಾ, ಸುಹಾನಿ ರಜಪೂತ್, ಆಲಿಸ್ ಚೌಹಾನ್ ಪ್ರಬಂಧ ಮಂಡಿಸಿದರು.

ವಿಜೇತರಾದ ಅಕಾಡೆಮಿ ಪ್ರಾಥಮಿಕ ಶಾಲೆಯ ಮಕ್ಕಳು ಬಹುಮಾನ ಸ್ವೀಕರಿಸಿದರು. ಇದೇವೇಲೆ ಜಿಸಿಪಿಎಎಸ್ ವಿದ್ಯಾರ್ಥಿ ಸಮಿತಿಗಳನ್ನು ಉದ್ಘಾಟಿಸಲಾಯಿತು. ಮಣಿಪಾಲದ ತಪೋವನ ಸಹಯೋಗದಲ್ಲಿ ಧಾರವಾಡದ ಗೊಂಬೆಮನೆ ತಂಡದವರಿಂದ ಮಹಾತ್ಮ ಗಾಂಧೀಜಿಯವರ ಕುರಿತ ತೊಗಲುಬೊಂಬೆ ನಾಟಕ ಪ್ರದರ್ಶನಗೊಂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.