ಗುರುವಾರ , ನವೆಂಬರ್ 21, 2019
20 °C
ಅಕ್ಟೋಬರ್‌ನಲ್ಲಿ 50ಕ್ಕಿಂತ ಹೆಚ್ಚು ಪ್ರಕರಣ ದಾಖಲು

ಗಾಂಜಾ ಹಾವಳಿ: ಹಾದಿ ತಪ್ಪುತ್ತಿದೆ ಯುವಜನತೆ

Published:
Updated:
Prajavani

ಉಡುಪಿ: ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಧಾರ್ಮಿಕ ಕ್ಷೇತ್ರಗಳನ್ನು ಹೊಂದಿರುವ ಉಡುಪಿ ಜಿಲ್ಲೆಯಲ್ಲಿ ಗಾಂಜಾ ಹಾವಳಿ ಮಿತಿಮೀರಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಜಿಲ್ಲೆಗೆ ಹೆಚ್ಚಿನ ಪ್ರಮಾಣದಲ್ಲಿ ಗಾಂಜಾ  ಪೂರೈಕೆಯಾಗುತ್ತಿದ್ದು, ಯುವಜನಾಂಗ ದುಶ್ಚಟಗಳಿಗೆ ಬಲಿಯಾಗುತ್ತಿದೆ.

ಪೊಲೀಸ್ ಇಲಾಖೆಯ ಅಂಕಿ ಅಂಶಗಳ ಪ್ರಕಾರ 2017ರಲ್ಲಿ 49, 2018ರಲ್ಲಿ 106 ಗಾಂಜಾ ಸೇವನೆ ಹಾಗೂ ಮಾರಾಟ ಪ್ರಕರಣಗಳು ದಾಖಲಾಗಿದ್ದರೆ, 2019ರಲ್ಲಿ ಬರೋಬ್ಬರಿ 166 ಪ್ರಕರಣಗಳು ದಾಖಲಾಗಿವೆ. ಅಕ್ಟೋಬರ್‌ನಲ್ಲಿಯೇ 50ಕ್ಕೂ ಹೆಚ್ಚು ಪ್ರಕರಣ ದಾಖಲಾಗಿರುವುದು ಸಮಸ್ಯೆಯ ಗಂಭೀರತೆಗೆ ಸಾಕ್ಷಿ.

ಜಿಲ್ಲೆಯಲ್ಲಿ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಿದ್ದು, ಹೊರ ರಾಜ್ಯ ಹಾಗೂ ವಿದೇಶಗಳ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಜತೆಗೆ, ನೆರೆ ಜಿಲ್ಲೆಗಳ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿದೆ. ಹಾಗಾಗಿ, ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡಿರುವ ಮಾಫಿಯಾ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿದೆ.

ಪೊಲೀಸರಿಗೆ ಸವಾಲು:

ಗಾಂಜಾ ಮಾರಾಟ ಹಾಗೂ ಸೇವನೆ ವಿರುದ್ಧ ಪೊಲೀಸ್ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. ಆದರೆ, ಕಿಡಿಗೇಡಿಗಳು ಗಾಂಜಾ ಪೂರೈಕೆಗೆ ಅನ್ಯಮಾರ್ಗಗಳನ್ನು ಬಳಸುತ್ತಿರುವುದರಿಂದ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ ಎನ್ನುತ್ತಾರೆ ಪೊಲೀಸರು. 

ಅನುಮಾನ ಬಾರದಂತೆ ರೈಲುಗಳಲ್ಲಿ, ಬಸ್‌ಗಳಲ್ಲಿ ಪಾರ್ಸೆಲ್‌ಗಳ ಮೂಲಕ, ಕೊರಿಯರ್‌ಗಳ ಮೂಲಕ ಹಾಗೂ  ಪರಿಚಯಸ್ಥರ ಮೂಲಕ ಗಾಂಜಾ ಸರಬರಾಜು ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಪ್ರಕರಣಗಳಲ್ಲಿ ಗಾಂಜಾ ಪತ್ತೆಹಚ್ಚುವುದು ಸವಾಲಿನ ಕೆಲಸ ಎನ್ನುತ್ತಾರೆ ಎಸ್‌ಪಿ ನಿಶಾ ಜೇಮ್ಸ್‌.

ನಗರದಲ್ಲಿರುವ ಪ್ರಮುಖ ಕೊರಿಯರ್ ಕೇಂದ್ರಗಳ ಮೇಲೆ ಕಣ್ಣಿಡಲಾಗಿದ್ದು ನಿಯಮಿತ ತಪಾಸಣೆ ನಡೆಯುತ್ತಿದೆ. ಅನುಮಾನ ಬಂದರೆ, ಪಾರ್ಸೆಲ್‌ ವಾರಸುದಾರರನ್ನು ಕರೆಸಿ ವಿಚಾರಿಸಲಾಗುತ್ತಿದೆ. ಅಪರಿಚಿತರಿಂದ ಪಾರ್ಸೆಲ್‌ ಸ್ವೀಕರಿಸದಂತೆ ಬಸ್ ಚಾಲಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪೂರೈಕೆಯ ಜಾಲವನ್ನು ಸಂಪೂರ್ಣ ಬಂದ್‌ ಮಾಡಲಾಗುತ್ತಿದೆ ಎಂದು ತಿಳಿಸಿದರು. 

ಮತ್ತೊಂದೆಡೆ ಮಣಿಪಾಲವನ್ನು ಗುರಿಯಾಗಿಸಿಕೊಂಡು ಸೆನ್‌, ಡಿಸಿಐಬಿ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಾಂಜಾ ಸೇವನೆ ಹಾಗೂ ಮಾರಾಟದ ವಿರುದ್ಧ ಪ್ರತಿದಿನ ಪ್ರಕರಣ ದಾಖಲಾಗುತ್ತಿದೆ. ಗೋವಾ, ಕೇರಳ, ಮುಂಬೈ, ಕೇರಳ, ಶಿವಮೊಗ್ಗ, ಬೆಂಗಳೂರು ಸೇರಿದಂತೆ ಹಲವಡೆಗಳಿಂದ ಗಾಂಜಾ ಸರಬರಾಜಾಗುತ್ತಿರುವುದು ಗಮನಕ್ಕೆ ಬಂದಿದ್ದು, ಗಾಂಜಾ ಸಾಗಾಟದ ಮೇಲೆ ಹದ್ದಿನ ಕಣ್ಣಿಡಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)