ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಪುವಿನಲ್ಲಿ ಭಾರೀ ಮಳೆ: ವಿವಿಧೆಡೆ ಹಾನಿ

Last Updated 1 ಜುಲೈ 2022, 2:28 IST
ಅಕ್ಷರ ಗಾತ್ರ

ಕಾಪು (ಪಡುಬಿದ್ರಿ): ಕಳೆದ ರಾತ್ರಿಯಿಂದ ನಿರಂತರ ಸುರಿಯುತ್ತಿರುವ ಭಾರೀ ಮಳೆಗೆ ಕಾಪು ತಾಲ್ಲೂಕಿನಾದ್ಯಂತ ನೆರೆ ಭೀತಿ ಉಂಟಾಗಿದೆ.

ತಾಲ್ಲೂಕಿನಾದ್ಯಂತ ಮಳೆ ಪ್ರಮಾಣ ತೀವ್ರಗೊಂಡಿದ್ದು ಪಡುಬಿದ್ರಿ, ಕಾಪು, ಶಿರ್ವ ಪರಿಸರದಲ್ಲಿ ಕೃಷಿ ಭೂಮಿ ಜಲಾವೃತಗೊಂಡಿದೆ. ಮೂಳೂರಿನಲ್ಲಿ ಕಡಲ್ಕೊರೆತ ಕಾಣಿಸಿಕೊಂಡಿದೆ. ಕೆಲವೆಡೆ ನೀರು ಸರಾಗವಾಗಿ ಹರಿದು ಹೋಗುವ ತೋಡುಗಳಲ್ಲಿ ಹೂಳು ತುಂಬಿದ್ದು ಕೃತಕ ನೆರೆ ಉಂಟಾಗಿದೆ. ಉಚ್ಚಿಲದಲ್ಲಿ ರಾಷ್ಟ್ರೀಯ ಹೆದ್ದಾರಿ 66 ಸರ್ವಿಸ್ ರಸ್ತೆಯ ವಿಳಂಬ ಕಾಮಗಾರಿಯಿಂದ ನೆರೆ ಉಂಟಾಗಿ ಉಚ್ಚಿಲ ಪೇಟೆ ಜಲಾವೃತಗೊಂಡಿದೆ.

ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಪಡುಬಿದ್ರಿಯಲ್ಲಿ ಮಳೆ ನೀರು ಹೋಗಲು ರಚಿಸಿದ ಚರಂಡಿಯಲ್ಲಿ ನೀರು ಹೋಗದೆ ಸರ್ವಿಸ್ ರಸ್ತೆಯಲ್ಲಿಯೇ ನೀರು ಹರಿಯುತ್ತಿದ್ದು, ಸಾರ್ವಜನಿಕರು ಸಮಸ್ಯೆ ಅನುಭವಿಸಿದರು. ಇದರ ಪರಿಣಾಮ ಪಡುಬಿದ್ರಿಯ ಶ್ರೀ ಮಹಾಗಣತಿ ದೇವಸ್ಥಾನದ ರಸ್ತೆಯಲ್ಲಿ ಹತ್ತಿರದ ಬೀಚ್ ರಸ್ತೆಯಲ್ಲಿನ ಆರು ಮನೆಗಳು ನೆರೆಯ ದಿಗ್ಬಂಧನಕ್ಕೆ ಒಳಗಾಗಿವೆ. ಇಲ್ಲಿ ಇದ್ದ ದ್ವಿಚಕ್ರ ವಾಹನವೊಂದು ನೆರೆಯಲ್ಲಿ ಕೊಚ್ಚಿ ಹೋಗುತಿದ್ದಾಗ ಸಾರ್ವಜನಿಕರು ಅದನ್ನು ಮೇಲಕೆತ್ತಿದರು.

ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಒಳಗೆ ಹೊರಗೆ ಅಂಗಣಗಳಲ್ಲಿ ನೆರೆ ನೀರು ಆವರಿಸಿದೆ. ಗರ್ಭಗುಡಿಯ ಎರಡು ಮೆಟ್ಟಿಲುಗಳು ಜಲಾವೃತವಾಗಿದ್ದು, ರಾತ್ರಿಯೂ ಇದೆ ರೀತಿ ಮುಂದುವರಿದಲ್ಲಿ ಗರ್ಭಗುಡಿಯ ಒಳ ಭಾಗಕ್ಕೆ ನೆರೆ ನೀರು ಆವರಿಸಲಿದೆ.

ಮಲ್ಲಾರಿನ ಸಂಯುಕ್ತ ಉರ್ದು ಪ್ರೌಢಶಾಲೆ ಹಾಗೂ ಮೌಲಾನಾ ಅಬ್ದುಲ್ ಕಲಾಂ ಶಾಲೆಯ ಮೇಲ್ಚಾವಣಿ ಸೋರುತ್ತಿರುವುದರಿಂದ ಶಾಲಾ ವಿದ್ಯಾರ್ಥಿಗಳು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಹೊರಗೆ ಬಂದು ನಿಂತರು.

ಶಾಲೆಯ ಮೈದಾನದಲ್ಲಿ ಮಳೆ ನೀರು ನಿಂತು ಮಕ್ಕಳು ಸಮಸ್ಯೆ ಅನುಭವಿಸಿದರು. ಈ ವೇಳೆ ಪೋಷಕರು ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಶಿಥಿಲಾವಸ್ಥೆಯಲ್ಲಿರುವ ಶಾಲೆಯನ್ನು ಅಭಿವೃದ್ಧಿ ಪಡಿಸದೆ ಇರುವುದನ್ನು ಅಧಿಕಾರಿಗಳ ಗಮನಕ್ಕೆ ತಂದರು. ಪರಿಸ್ಥಿತಿ ಮನಗಂಡು ಶಾಲೆಗೆ ರಜೆ ಸಾರಲಾಯಿತು.

ಮೂಳೂರಿನ ತೊಟ್ಟಂನಲ್ಲಿ ಕಡಲ್ಕೊರೆತ ಉಂಟಾಗಿದ್ದು, ಎರಡು ತೆಂಗಿನ ಮರಗಳು ಸಮುದ್ರ ಪಾಲಾಗಿವೆ, ಹಲವು ತೆಂಗಿನ ಮರಗಳು ಕಡಲು ಪಾಲಾಗುವ ಭೀತಿಯಲ್ಲಿವೆ. ಸಮಿಪದ ನಿವಾಸಿಗಳು ಆತಂಕದಲ್ಲಿದ್ದಾರೆ.

ಪಡುಬಿದ್ರಿಯ ಕಾಮತ್ ಪೆಟ್ರೋಲ್ ಬಂಕ್ ಬಳಿ ಮಳೆ ನೀರು ಹೋಗಲು ವ್ಯವಸ್ಥೆ ಇಲ್ಲದೆ ಎರ್ಮಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಜಲಕೋಡಿಯಲ್ಲಿ 10 ಮನೆಗಳು ಜಲಾವೃತಗೊಂಡಿದ್ದವು. ಸ್ಥಳೀಯರ ನೆರವಿನಿಂದ ನೀರು ಹೋಗಲು ವ್ಯವಸ್ಥೆ ಕಲ್ಪಿಸಲಾಯಿತು.

ಜಿಲ್ಲಾಧಿಕಾರಿ ಭೇಟಿ: ಪಡುಬಿದ್ರಿ, ಫಲಿಮಾರು ಶಾಂಭವಿ ನದಿ ಪಕ್ಕದಲ್ಲಿ ನೆರೆ ಉಂಟಾಗುವ ಪ್ರದೇಶಕ್ಕೆ ಜಿಲ್ಲಾಧಿಕಾರಿ ಕೂರ್ಮಾರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೃಹರಕ್ಷಕ ದಳದ ಸಿಬ್ಬಂದಿ ಪ್ರಕೃತಿ ವಿಕೋಪ ತುರ್ತು ಸಂದರ್ಭಗಳಿಗೆ ನೀಡಿದ ಬೋಟ್‌ ವೀಕ್ಷಣೆ ಮಾಡಿದರು. ಬಳಿಕ ಪಡುಬಿದ್ರಿಯ ಕೆಪಿಎಸ್ ಶಾಲೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರೊಂದಿಗೆ ಮಾತುಕತೆ ನಡೆಸಿದರು.

ಶಾಲೆಯಲ್ಲಿ ಮೂಲಸೌಕರ್ಯಗಳ ಸಮಸ್ಯೆಯ ಬಗ್ಗೆ ಸಾರ್ವಜನಿಕರು ಗಮನಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT