ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಗ್ರಂಥಾಲಯಕ್ಕೆ ಆಧುನಿಕ ರೂಪ

ತ್ರಾಸಿ ಗ್ರಾಮ ಪಂಚಾಯಿತಿಯಲ್ಲಿ ಈಗ ಇದು ಜನರ ಆಕರ್ಷಣೆಯ ಕೇಂದ್ರ
Last Updated 6 ಜುಲೈ 2021, 3:14 IST
ಅಕ್ಷರ ಗಾತ್ರ

ಬೈಂದೂರು: ಕುಂದಾಪುರ ತಾಲ್ಲೂಕಿನ ತ್ರಾಸಿ ಗ್ರಾಮ ಪಂಚಾಯಿತಿಯ ಗ್ರಾಮ ಗ್ರಂಥಾಲಯವನ್ನು ಸುಸಜ್ಜಿತಗೊಳಿಸುವ ಜತೆಗೆ ಡಿಜಿಟಲ್ ಲೈಬ್ರರಿ ವಿಭಾಗವನ್ನು ಸೇರಿಸಿ, ಇದಕ್ಕೆ ಆಧುನಿಕ ರೂಪ ನೀಡಲಾಗಿದೆ. ಈ ಬದಲಾವಣೆಯು ಗ್ರಂಥಾಲಯಕ್ಕೆ ಹೆಚ್ಚು ಓದುಗರನ್ನು ಸೆಳೆಯುವ ಮೂಲಕ ಸುದ್ದಿ ಮಾಡುತ್ತಿದೆ.

ಸರ್ಕಾರದ ‘ಓದುವ ಬೆಳಕು’ ಕಾರ್ಯಕ್ರಮದಡಿ ಪಂಚಾಯಿತಿ ನಿಧಿ ಮತ್ತು ಕೇಂದ್ರ 14ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬಂದ ಅನುದಾನದ ಒಂದಂಶ ಸೇರಿ ಒಟ್ಟು ₹ 2 ಲಕ್ಷ ವೆಚ್ಚದಲ್ಲಿ ಗ್ರಂಥಾಲಯಕ್ಕೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಗ್ರಂಥಾಲಯ ಇರುವ ಹಳೆ ಗ್ರಾಮ ಪಂಚಾಯಿತಿ ಕಟ್ಟಡದ ಒಳಾಂಗಣವನ್ನು ವರ್ಣಮಯವಾಗಿ ಸುಂದರಗೊಳಿಸಲಾಗಿದೆ.

ಪುಸ್ತಕ ಮತ್ತು ಓದಿನ ಕುರಿತಾದ ಚಿತ್ರಗಳು ಮತ್ತು ಜ್ಞಾನಿಗಳ ನುಡಿಗಳನ್ನು ಬರೆಯಲಾಗಿದೆ. ಶಾಶ್ವತ ಶೆಲ್ಫ್ ಮತ್ತು ಕನ್ನಡಿ ಕಪಾಟುಗಳಲ್ಲಿ ಸುಮಾರು 5,000 ಪುಸ್ತಕಗಳನ್ನು ಓದುಗರ ಆಯ್ಕೆಗೆ ಅನುಕೂಲವಾಗುವಂತೆ ಒಪ್ಪವಾಗಿ ಜೋಡಿಸಿ ಇರಿಸಲಾಗಿದೆ. ಇನ್ನೊಂದೆಡೆ ಕಂಪ್ಯೂಟರ್‌ನಲ್ಲಿ, ದೇಶದಲ್ಲಿ ಲಭ್ಯವಿರುವ ಡಿಜಿಟಲ್ ಪುಸ್ತಕಗಳನ್ನು ಲಭ್ಯಗೊಳಿಸಲಾಗಿದೆ. ಅದರೊಂದಿಗೆ ಇ-ಲ್ಯಾಬ್ ತಂತ್ರಾಂಶದ ಮೂಲಕ ವಿದೇಶಗಳ ಡಿಜಿಟಲೈಸ್ಡ್ ಪುಸ್ತಕಗಳನ್ನು ತೆರೆದು ಓದುವ ಅವಕಾಶ ಕಲ್ಪಿಸಲಾಗಿದೆ. ಈ ವಿಭಾಗವು ಕಂಪ್ಯೂಟರ್ ಸಾಕ್ಷರ ಪ್ರೌಢ ಮತ್ತು ಯುವ ಓದುಗರನ್ನು ಆಕರ್ಷಿಸುತ್ತಿದೆ. ಪೀಠೋಪಕರಣ, ಗಾಳಿ, ಬೆಳಕು ಒದಗಿಸಿ, ಗ್ರಂಥಾಲಯವನ್ನು ಓದುಗಸ್ನೇಹಿಯಾಗಿ ಮಾರ್ಪಡಿಸಲಾಗಿದೆ. ಈಚೆಗೆ ಇಲ್ಲಿಗೆ ಭೇಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ನವೀಕೃತ ಗ್ರಂಥಾಲಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳೂ ತ್ರಾಸಿ ಮಾದರಿಯನ್ನು ಅನುಸರಿಸುವಂತೆ ಮಾಡಲಾಗುವುದು ಎಂದಿದ್ದರು.

‘ಗ್ರಂಥಾಲಯಕ್ಕೆ ಡಿಜಿಟಲ್ ವಿಭಾಗ’

ಮೇಲ್ದರ್ಜೆಗೇರಿದ ಗ್ರಂಥಾಲಯದ ಬಗೆಗೆ ಆಶಾವಾದ ವ್ಯಕ್ತಪಡಿಸಿದ ಅಭಿವೃದ್ಧಿ ಅಧಿಕಾರಿ ಶೋಭಾ ಎಸ್, ‘ಓದುಗರು ಸ್ಮಾರ್ಟ್ ಫೋನ್‌ಗಳ ಬಳಕೆಗೆ ಅಂಟಿಕೊಂಡ ಕಾರಣ ಗ್ರಂಥಾಲಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಅದಕ್ಕಾಗಿ ಸರ್ಕಾರದ ಆದೇಶ ಅನುಸರಿಸಿ, ಅನುದಾನ ಬಳಕೆಯ ಅವಕಾಶ ಬಳಸಿಕೊಂಡು ಗ್ರಾಮ ಪಂಚಾಯಿತಿ ಗ್ರಂಥಾಲಯಕ್ಕೆ ಡಿಜಿಟಲ್ ವಿಭಾಗ ಸೇರಿಸಲಾಗಿದೆ. ಬಳಕೆದಾರರ ಸ್ಪಂದನೆಗೆ ಅನುಗುಣವಾಗಿ ಈ ವಿಭಾಗವನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT