ಭಾನುವಾರ, ಜುಲೈ 3, 2022
25 °C

ಗಾಂಧಿ ತತ್ವಗಳ ಅಗತ್ಯವಿಲ್ಲ, ಗೋಡ್ಸೆ ತತ್ವಗಳು ಬೇಕು: ಹಿಂದೂ ಮಹಾಸಭಾದ ಧರ್ಮೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ‘ನಮಗೆ ಗಾಂಧಿ ತತ್ವಗಳ ಅಗತ್ಯವಿಲ್ಲ, ಗೋಡ್ಸೆ ತತ್ವಗಳು ಬೇಕು. ಹಿಂದುತ್ವಕ್ಕೆ ಸಂ‍ಪೂರ್ಣ ನ್ಯಾಯ ಕೊಡಲು ಗೋಡ್ಸೆ ತತ್ವಗಳಿಂದ ಮಾತ್ರ ಸಾಧ್ಯ’ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಹೇಳಿದರು.

ನಗರದ ಓಷನ್ ಪರ್ಲ್‌ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಗಾಂಧೀಜಿ ವಿಚಾರಧಾರೆಗಳನ್ನು ಅಳವಡಿಸಿಕೊಂಡಿರುವ ಶಾಂತಿಧೂತರ ಹಾವಳಿ ಹೆಚ್ಚಾಗಿದ್ದು, ಅವರನ್ನು ಹದ್ದುಬಸ್ತಿನಲ್ಲಿಡಲು ಗೋಡ್ಸೆ ತತ್ವಗಳು ಬೇಕು’ ಎಂದರು.

ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ಹಿಂದೂ ಕಾರ್ಯಕರ್ತರನ್ನು ರಕ್ಷಿಸುತ್ತಿಲ್ಲ. ದಕ್ಷಿಣ ಕನ್ನಡದಲ್ಲಿ ಮತಾಂಧ ಪೊಲೀಸ್‌ ಅಧಿಕಾರಿ ಹಿಂದೂ ಕಾರ್ಯಕರ್ತನನ್ನು ಠಾಣೆಗೆ ಕರೆತಂದು ಥಳಿಸಿರುವುದು, ಪೊಲೀಸ್ ಇಲಾಖೆ ಸರ್ಕಾರದ ಮಾತು ಕೇಳುತ್ತಿಲ್ಲವೇ ಎಂಬ ಅನುಮಾನ ಮೂಡುತ್ತಿದೆ ಎಂದು ಹೇಳಿದರು.

‘ಹಿಂದೂಗಳಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದ್ದು, ಹಿಂದೂಗಳು ಮನೆಯಲ್ಲಿ ಆಯುದ್ಧಗಳನ್ನಿಟ್ಟುಕೊಂಡು ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕು. ಶಸ್ತ್ರ ಹಾಗೂ ಶಾಸ್ತ್ರ ಧರ್ಮದ ಅವಿಭಾಜ್ಯ ಅಂಗವಾಗಿದ್ದು, ಅವಶ್ಯಕತೆ ಬಂದಾಗ ಸಿಡಿದು ಶಸ್ತ್ರದ ಮೂಲಕ ಉತ್ತರ ಕೊಡಬೇಕು’ ಎಂದರು.

ರಾಜ್ಯದಲ್ಲಿ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಹಿಂದೆ ದುರ್ಬಲ ಗೃಹಮಂತ್ರಿಯಾಗಿದ್ದವರು ಪ್ರಸ್ತುತ ಮುಖ್ಯಮಂತ್ರಿಯಾಗಿದ್ದಾರೆ. ಇಂದಿನ ಗೃಹಮಂತ್ರಿಯೂ ದುರ್ಬಲರಾಗಿದ್ದಾರೆ. ಧಾರ್ಮಿಕ ಶ್ರದ್ಧಾಕೇಂದ್ರವಾಗಿರುವ ಉಡುಪಿಯಲ್ಲಿ ಹಿಜಾಬ್‌ ಹೋರಾಟ ಮಾಡುತ್ತಿರುವ 6 ಹೆಣ್ಣುಮಕ್ಕಳನ್ನು ಹದ್ದುಬಸ್ತಿನಲ್ಲಿಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ಉಡುಪಿಯ ಸ್ಥಳೀಯ ಶಾಸಕರ ನಿರ್ಲಕ್ಷ್ಯದಿಂದ ಹಿಜಾಬ್ ವಿವಾದ ರಾಷ್ಟ್ರ ಹಾಗೂ ರಾಷ್ಟ್ರಮಟ್ಟದಲ್ಲಿ ಕುಖ್ಯಾತಿ ಪಡೆಯುವಂತಾಯ್ತು. ತಾಲಿಬಾನಿ ಸಂಘಟನೆಯ ಮುಖ್ಯಸ್ಥ ಕರ್ನಾಟಕದ ಹೆಣ್ಣುಮಕ್ಕಳ ಕುರಿತು ಕವನ ಬರೆಯುವಂತಾಯ್ತು ಎಂದು ಧರ್ಮೇಂದ್ರ ಲೇವಡಿ ಮಾಡಿದರು.

ಜೈಲಿನಲ್ಲಿರುವ ಹಿಂದೂ ಕಾರ್ಯಕರ್ತರರನ್ನು ಬಿಡುಗಡೆಗೊಳಿಸಲು ಸಂಘಟನೆ ಶ್ರಮಿಸುತ್ತಿದ್ದು, ಅವರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗುವುದು ಎಂದರು.

ಅಯೋಧ್ಯೆಗಾಗಿ ಹೋರಾಟ ನಡೆಸಿದ್ದು ಹಿಂದೂ ಮಹಾಸಭಾ. ಆದರೆ, ರಾಮನನ್ನು ರಸ್ತೆಗೆ ತಂದ ಬಿಜೆಪಿಯು ಹಿಂದುತ್ವವನ್ನು ಪ್ರತಿಪಾದಿಸುತ್ತಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ, ಕೊಲೆಗಳಾದರೂ ಸರ್ಕಾರ ಮೌನವಾಗಿದೆ ಎಂದು ಟೀಕಿಸಿದರು.

ರಾಜ್ಯ ಸಚಿವ ಸಂಪುಟದಲ್ಲಿ ಮೂಲ ಬಿಜೆಪಿಗರ ಸಂಖ್ಯೆ ಕಡಿಮೆಯಾಗಿದೆ. 40 ಪರ್ಸೆಂಟ್ ಕಮಿಷನ್ ಆರೋಪವಿರುವ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಕೂಡ ಮೌನವಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಸಮಾನವಾಗಿ ರಾಜ್ಯದ ಜನರನ್ನು ಲೂಟಿ ಮಾಡಿವೆ. ಮುಂದಿನ ಚುನಾವಣೆಯಲ್ಲಿ ಹಿಂದೂ ಮಹಾಸಭಾ ಎಲ್ಲ ಕ್ಷೇತ್ರಗಳಿಂದಲೂ ಸ್ಪರ್ಧಿಸಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹಿಂದೂ ಮಹಾಸಭಾ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಪ್ರಮೋದ್ ಉಚ್ಚಿಲ್‌, ಬಂಟ್ವಾಳ ಅಧ್ಯಕ್ಷ ಹರ್ಷ ನಾಯಕ್‌, ಮುಖಂಡರಾದ ಪ್ರತಾಪ್ ಇದ್ದರು.

ಅಖಿಲ ಭಾರತ ಹಿಂದೂ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ

ಗಾಂಧಿ ತತ್ವಗಳ ಅಗತ್ಯವಿಲ್ಲ; ಗೋಡ್ಸೆ ತತ್ವಗಳು ಬೇಕು: ಹಿಂದೂ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು