ಮಂಗಳವಾರ, ಆಗಸ್ಟ್ 16, 2022
21 °C
ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್‌

ಸಮಾಜದ ಶಾಂತಿಗೆ ಆರಕ್ಷಕರ ಜತೆ ಗೃಹ ರಕ್ಷಕರ ಶ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯ ಜತೆ ಸಮನ್ವಯದಿಂದ ಕಾರ್ಯ ನಿರ್ವಹಿಸುತ್ತಿರುವ ಗೃಹ ರಕ್ಷಕದಳದ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.

ಶುಕ್ರವಾರ ಜಿಲ್ಲಾ ಗೃಹ ರಕ್ಷಕದಳದ ಕಚೇರಿ ಆವರಣದಲ್ಲಿ ನಡೆದ ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಗೃಹರಕ್ಷಕದಳ ದಿನಾಚರಣೆಯನ್ನು ರಕ್ತದಾನ ಮಾಡುವ ಮೂಲಕ ಆಚರಿಸುತ್ತಿರುವುದು ಮಾದರಿಯ ಕಾರ್ಯ. ಒಬ್ಬ ವ್ಯಕ್ತಿ ರಕ್ತದಾನ ಮಾಡಿದರೆ ನಾಲ್ಕು ಜನರ ಜೀವ ಉಳಿಸಬಹುದು. ರಕ್ತದಾನದಲ್ಲಿ ಉಡುಪಿ ಜಿಲ್ಲೆಯು ರಾಜ್ಯಕ್ಕೆ ಮಾದರಿಯಾಗಿದೆ. ರಕ್ತದಾನದಂತಹ ಶ್ರೇಷ್ಠ ಕೆಲಸದಲ್ಲಿ ಕೈಜೋಡಿಸಿರುವ ಗೃಹರಕ್ಷಕ ದಳದ ಸಿಬ್ಬಂದಿಗೆ ಅಭಿನಂದನಾರ್ಹರು ಎಂದರು.

ತುರ್ತು ಸಂದರ್ಭಗಳಲ್ಲಿ ಸಮಾಜದ ಶಾಂತಿ ಕಾಪಾಡುವಲ್ಲಿ ಗೃಹ ರಕ್ಷಕದಳದ ಪಾತ್ರ ಬಹಳ ಮುಖ್ಯ. ಸೂಕ್ಷ್ಮ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆ ಸೂಚಿಸಿದ ಕಾರ್ಯಗಳನ್ನು ಗೃಹ ರಕ್ಷಕ ಸಿಬ್ಬಂದಿ ಸಮನ್ವಯದಿಂದ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಯಲ್ಲೂ ಗೃಹರಕ್ಷಕ ಸಿಬ್ಬಂದಿಯ ಪಾಲಿದೆ. ಕಾಪು ಬೀಚ್‌ನಲ್ಲಿ ಡಾ. ಪ್ರಶಾಂತ್‌ ಶೆಟ್ಟಿ ಅವರ ನೇತೃತ್ವದ ತಂಡ ಉತ್ತಮ ಕೆಲಸ ಮಾಡಿದೆ. ಮಲ್ಪೆ ಬೀಚ್‌ನಲ್ಲಿ ಈಜು ಪರಿಣತಿ ಹೊಂದಿರುವ ಗೃಹ ರಕ್ಷಕ ಸಿಬ್ಬಂದಿಯನ್ನು ನೇಮಕ ಮಾಡಲಾಗಿದ್ದು, ಪ್ರವಾಸಿಗರ ರಕ್ಷಣೆಯ ಹೊಣೆ ನಿಭಾಯಿಸುತ್ತಿದ್ದಾರೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಮಾತನಾಡಿ, ಗೃಹ ರಕ್ಷಕರು ಪೊಲೀಸ್ ಇಲಾಖೆಯ ಅವಿಭಾಜ್ಯ ಅಂಗವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಮಾಜ ಮತ್ತು ನಾಗರಿಕರ ರಕ್ಷಣೆಗೆ ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿಯೂ ಗೃಹ ರಕ್ಷಕ ದಳದ ಸೇವೆ ಮಹತ್ವದ್ದು’ ಎಂದರು.

ರಕ್ತದಾನ ಶಿಬಿರ ಹಾಗೂ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು. ಪ್ರಸಕ್ತ ಸಾಲಿನಲ್ಲಿ ಮುಖ್ಯಮಂತ್ರಿ ಪದಕ ಪುರಸ್ಕೃತರಾದ ಎಸ್‌ಪಿ ಎನ್. ವಿಷ್ಣುವರ್ಧನ್, ಉಡುಪಿ ಡಿವೈಎಸ್‌ಪಿ ಜೈಶಂಕರ್‌, ಸರ್ಕಲ್ ಇನ್‌ಸ್ಪೆಕ್ಟರ್ ಮಂಜುನಾಥ, ಕಾನ್‌ಸ್ಟೆಬಲ್‌ ಸಂತೋಷ್, ಜಿಲ್ಲಾ ಕಮಾಂಡೆಂಟ್ ಡಾ.ಪ್ರಶಾಂತ ಶೆಟ್ಟಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಕೃಷ್ಣ ಪ್ರಸಾದ್ ಕೂಡ್ಲು ಅವರನ್ನು ಸನ್ಮಾನಿಸಲಾಯಿತು.

ಉಡುಪಿಯ ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣ ಪ್ರಸಾದ್ ಇದ್ದರು. ಜಿಲ್ಲಾ ಗೃಹ ರಕ್ಷಕದಳದ ಸೆಕೆಂಡ್ ಇನ್ ಕಮಾಂಡ್ ಕೆ.ಸಿ. ರಾಜೇಶ್ ಸ್ವಾಗತಿಸಿದರು. ಪ್ರಥಮ ದರ್ಜೆ ಸಹಾಯಕಿ ಶ್ಯಾಮಲಾ ವಂದಿಸಿದರು, ಸಾಯಿನಾಥ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.