ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಾಪುರ: ನವರಾತ್ರಿ ಸಂಭ್ರಮದಲ್ಲಿ ಹುಲಿವೇಷದ ಸೊಬಗು

ಕೋವಿಡ್‌ ಕಾರಣದಿಂದ ಮರೆಯಾಗಿದ್ದ ಹುಲಿಗಳು ಮತ್ತೆ ಅಖಾಡದಲ್ಲಿ ಸದ್ದು
Last Updated 16 ಅಕ್ಟೋಬರ್ 2021, 19:31 IST
ಅಕ್ಷರ ಗಾತ್ರ

ಕುಂದಾಪುರ: ಕರಾವಳಿಗೂ ಹುಲಿ ವೇಷಕ್ಕೂ ಬಿಡಿಸಲಾಗದ ನಂಟು. ನವರಾತ್ರಿ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚೌತಿ ಹೀಗೆ, ಸಾಲು ಹಬ್ಬಗಳು ಬಂತೆಂದರೆ ಹುಲಿವೇಷಧಾರಿಗಳ ಕುಣಿತದ ಸೊಬಗನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗುತ್ತದೆ. ಹಬ್ಬದ ಸಂದರ್ಭದಲ್ಲಿ ಮನೆ ಮನೆಗೆ ಬರುವ ಹುಲಿ ವೇಷಧಾರಿಗಳು ಎಲ್ಲರನ್ನು ರಂಚಿಸಿ ಹಬ್ಬದ ಸಡಗರವನ್ನು ದುಪ್ಪಟ್ಟುಗೊಳಿಸುತ್ತಾರೆ.

ಕಳೆದೆರಡು ವರ್ಷಗಳಿಂದ ಹಬ್ಬಗಳ ಆಚರಣೆಗೆ ಅಂಟಿದ್ದ ಕೋವಿಡ್-19 ಹೆಮ್ಮಾರಿಯಿಂದ ತಾತ್ಕಾಲಿಕವಾಗಿ ಕಣ್ಮರೆಯಾಗಿದ್ದ ಹುಲಿ ವೇಷ ಈ ಬಾರಿಯ ದಸರಾ ಆಚರಣೆಯ ಸಂದರ್ಭದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಹುಲಿ ವೇಷಧಾರಿಗಳನ್ನು ನೋಡಿ ವೇಷ ಪ್ರಿಯರಲ್ಲಿ ಸಂತೋಷ ಮನೆಮಾಡಿದರು.

ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದಲ್ಲಿ ಹುಲಿವೇಷದ ಪರಂಪರೆ ಇದ್ದರೂ ಪ್ರದೇಶದಿಂದ ಪ್ರದೇಶಕ್ಕೆ ವೇಷ-ಭೂಷಣ, ಕುಣಿತ, ಹಿಮ್ಮೇಳಗಳಲ್ಲಿ ಭಿನ್ನತೆ ಇರುತ್ತದೆ. ಕುಂದಾಪುರ ಭಾಗದಲ್ಲಿ ತಾಸಿ ಹಾಗೂ ಸುತ್ತುಮೋರಿ ಪ್ರಾಧಾನ್ಯತೆ ಹೊಂದಿರುವ ಹಿಮ್ಮೇಳವನ್ನು ಹೊಂದಿರುವ ಹುಲಿ ವೇಷಗಳಿಗೆ ನವರಾತ್ರಿಯಲ್ಲಿ ಭಾರಿ ಬೇಡಿಕೆ ಇದೆ. ಹರಕೆಗಾಗಿ ವೇಷ ಹಾಕುವವರ ಸಂಖ್ಯೆಯೂ ಹೆಚ್ಚಿದೆ.

ಕುಂದಾಪುರದ ಟಿ.ಟಿ ರಸ್ತೆಯ ಭರತ್ಕಲ್‌ನ ಬಸವೇಶ್ವರ ಯುವಕ ಮಂಡಲದವರ ಆಶ್ರಯದಲ್ಲಿ ಟಿ.ಟಿ ಟೈಗರ್ಸ್ ಸಂಘಟನೆ 21 ವರ್ಷಗಳಿಂದ ಹುಲಿವೇಷ ಹಾಕುತ್ತಾ ಬಂದಿದ್ದು, ಈ ವರ್ಷವೂ ವಿಭಿನ್ನವಾಗಿ ಹುಲಿವೇಷ ಹಾಕಿದ್ದಾರೆ. ಎರಡು ವರ್ಷಗಳಿಂದ ಕೋವಿಡ್‌ ಕಾರಣಕ್ಕೆ ಜನರಿಂದ ದೂರವಾಗಿದ್ದ ಹುಲಿ ವೇಷ ಕಲೆಯ ಸವಿಯನ್ನು ಮತ್ತೆ ಉಣಬಡಿಸಬೇಕು, ಹುಲಿವೇಷ ಕುಣಿತದ ಸೊಬಗನ್ನು ಜನ ಮತ್ತೆ ಸವಿಯಬೇಕು ಎಂಬು ಉದ್ದೇಶದಿಂದ ಬಣ್ಣ ಹಾಕಿ ಪೇಟೆ ಸುತ್ತುತ್ತಿದ್ದಾರೆ.

ನಾಗರಾಜ್, ರೋಹಿತ್, ಚರಣ್, ನಯನ್ ಕುಮಾರ್ ಉಸ್ತುವಾರಿಯಲ್ಲಿ ಯುವಕರ ತಂಡವೊಂದು ಉಡುಪಿ, ಮಂಗಳೂರಿಗರಿಗಿಂತ ಭಿನ್ನವಾಗಿ ಹುಲಿವೇಷ ಬಣ್ಣ ಹಚ್ಚಿ ನೂತನ ಶೈಲಿಯ ಹುಲಿ ಹೆಜ್ಜೆ ಹಾಕುತ್ತಾ ಕಲಾಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ನವರಾತ್ರಿಯ 8 ದಿನಗಳ ಕಾಲ ಬಣ್ಣ ಹಚ್ಚಿಕೊಂಡಿದ್ದ ವೇಷಧಾರಿಗಳು ಕುಂದೇಶ್ವರ ದೇವಸ್ಥಾನದ ಸಾರ್ವಜನಿಕ ಶಾರದೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿ ಈ ವರ್ಷದ ಕುಣಿತವನ್ನು ಕೊನೆಗೊಳಿಸಿದ್ದಾರೆ.

ಟಿ.ಟಿ ಟೈಗರ್ಸ್ ಹುಲಿವೇಷ ತಂಡವನ್ನು ಹುಟ್ಟು ಹಾಕಿದ್ದು ವಿಲ್ಫ್ರೇಡ್ ಡಿಸೋಜಾ. ಅವರ ನಂತರ ಶಿಷ್ಯಂದಿರು ತಂಡವನ್ನು ಯಶ್ವಸಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಪ್ರತಿ ವರ್ಷ ಕುಂದಾಪುರ ಪರಿಸರದಲ್ಲಿನ ಜನರು ಟಿ.ಟಿ ಟೈಗರ್ಸ್ ತಂಡ ಮನೆಯ ಅಂಗಳಕ್ಕೆ ಬರುವುದನ್ನು ಕಾತರದಿಂದ ಕಾಯುವಷ್ಟು ಪ್ರಸಿದ್ಧಿ ಪಡೆದಿದೆ ತಂಡ.

ಹುಲಿ ವೇಷ ತಂಡದೊಂದಿಗೆ ಕೋವಿ ಹಿಡಿದು ಬರುವ ಬೇಟೆಗಾರನಿಗೂ ತಂಡದಲ್ಲಿ ಪ್ರಾಧಾನ್ಯತೆ ಇದೆ. ಕುಣಿತದ ಕೊನೆಯಲ್ಲಿ ಹೊಂಚಿ ಹಾಕಿ ಕುಳಿತಿರುವ ಬೇಟೆಗಾರ 'ಡಂ ಪಚಾಕ್' ಎಂದು ಗಟ್ಟಿಯಾಗಿ ಕೂಗುವುದರೊಂದಿಗೆ ಕುಣಿತ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT