ಶುಕ್ರವಾರ, ಏಪ್ರಿಲ್ 10, 2020
19 °C
‘ದೇಶಿ ಕ್ರೀಡೆಗಳಿಗೆ ಅಂತರರಾಷ್ಟ್ರೀಯ ಮನ್ನಣೆ ಅಗತ್ಯ’

ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಟ್ಟದ ಕೊಕ್ಕೊ ಪಂದ್ಯಾವಳಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಉಡುಪಿ: ಭಾರತೀಯ ಸಂಸ್ಕೃತಿ ಹಾಗೂ ಕ್ರೀಡೆಗಳನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡಿಂಗ್ ಮಾಡುವಲ್ಲಿ ವಿಫಲರಾಗಿದ್ದೇವೆ. ಈ ನಿಟ್ಟಿನಲ್ಲಿ ದೇಶೀಯ ಕ್ರೀಡೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.

ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸೋಮವಾರ ಅಜ್ಜರ ಕಾಡು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಟ್ಟದ ಮಹಿಳೆಯರ ಕೊಕ್ಕೊ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಹೆಚ್ಚಿನ ಶಾಲೆಗಳು ಹಾಗೂ ಕಾಲೇಜಿನಲ್ಲಿ ಆಟದ ಮೈದಾನಗಳೇ ಇಲ್ಲ.ಪರಿಣಾಮ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಕಂಪ್ಯೂಟರ್‌ಗಳಲ್ಲಿ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ದೈಹಿಕ ಪರಿಶ್ರಮ ಇಲ್ಲವಾಗಿದೆ. ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಆದ್ಯತೆ ನೀಡಿದಾಗ ಮಾತ್ರ ಮಕ್ಕಳ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು.

ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಕಿಶೋರ್ ಕುಮಾರ್‌ ಮಾತನಾಡಿ, ‘ರಾಜ್ಯದಲ್ಲೇ ಮೊದಲ ಬಾರಿಗೆ ದಕ್ಷಿಣ ವಲಯ ಮಟ್ಟದ ಬೃಹತ್ ಕ್ರೀಡಾಕೂಟವನ್ನು ಸರ್ಕಾರಿ ಕಾಲೇಜಿನಲ್ಲಿ ಆಯೋಜಿಲಾಗಿದೆ. ಮಂಗಳೂರು ವಿವಿ ಗುಣಮಟ್ಟದ ಶಿಕ್ಷಣಕ್ಕೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆದುಕೊಂಡಿದೆ. ದೇಶದ 700 ವಿಶ್ವವಿದ್ಯಾಲಯದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಕ್ರೀಡಾ ಕ್ಷೇತ್ರದಲ್ಲಿ 10ನೇ ಸ್ಥಾನ ಪಡೆದುಕೊಂಡಿದೆ ಎಂದು ಮಾಹಿತಿ ನೀಡಿದರು.

ವಿಶ್ವವಿದ್ಯಾಲಯ ಮಟ್ಟದಲ್ಲಿ ಪದಕ ಗಳಿಸಿದ ಕ್ರೀಡಾಪಟುಗಳಿಗೆ ₹ 30,000 ನಗದು ಹಾಗೂ ₹ 2 ಲಕ್ಷ ಕ್ರೀಡಾ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ ಕ್ರೀಡಾ ವಿದ್ಯಾರ್ಥಿಗಳಿಗೆ ವಿಮೆ ಸಹ ನೀಡಲಾಗುತ್ತದೆ ಎಂದರು.

ಟೂರ್ನಿಗಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಗೂ ಸೇಂಟ್‌ ಸಿಸಿಲಿಸ್ ಶಾಲೆಯಲ್ಲಿ ತಲಾ 2 ಅಂಕಣಗಳನ್ನು ನಿರ್ಮಿಸಲಾಗಿದೆ. ಹೊನಲು ಬೆಳಕಿನ ಪಂದ್ಯಗಳು ನಡೆಯಲಿದ್ದು, ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಊಟ–ವಸತಿ ವ್ಯವಸ್ಥೆ ಮಾಡಲಾಗಿದೆ. ಸುಮಾರು 70 ನಿರ್ಣಾಯಕರು, 100 ಸ್ವಯಂ ಸೇವಕರು ಭಾಗವಹಿಸಿದ್ದಾರೆ. ಕೇರಳ, ತಮಿಳುನಾಡು, ಕರ್ನಾಟ, ಆಂಧ್ರ, ತೆಲಂಗಣಾ, ಪಾಂಡಿಚೇರಿಯ ಒಟ್ಟು 56 ವಿಶ್ವವಿದ್ಯಾಲಯ ಭಾಗವಹಿಸಿದ್ದು, ಕರ್ನಾಟಕದ 14 ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳು ಪಾಲ್ಗೊಂಡಿದೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿವನಂದ ಕಾಪಶಿ ಚಾಲನೆ ನೀಡಿದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ.ರೋಷನ್‌ ಕುಮಾರ್ ಶೆಟ್ಟಿ, ರಕ್ಷಕರ ಹಾಗೂ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್‌ ಶೆಟ್ಟಿ, ನಟರಾಜ್‌, ಜೆರಾಲ್ಡ್‌ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಭಾಸ್ಕರ್ ಶೆಟ್ಟಿ ಸ್ವಾಗತಿಸಿದರು, ಸತೀಶ್‌ ಕಾರ್ಯಕ್ರಮ ನಿರ್ವಹಿಸಿದರು ಹಾಗೂ ಸೋಜನ್‌ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು