ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಗೂ ಮುನ್ನವೇ ಬಾಯಾರಿದೆ ನಗರ

ಟ್ಯಾಂಕರ್‌ ನೀರಿಗೆ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣ
Last Updated 28 ಫೆಬ್ರುವರಿ 2018, 20:39 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೆಲವು ಭಾಗಗಳಲ್ಲಿ ಈಗಲೇ ನೀರಿನ ಟ್ಯಾಂಕರ್‌ಗಳ ಓಡಾಟದ ಸದ್ದು ಕೇಳಿಸುತ್ತಿದೆ.‌ ಬೇಸಿಗೆ ಆರಂಭಕ್ಕೂ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ದಟ್ಟೈಸಿದೆ.

ನೆಲಮಟ್ಟದ ಜಲಾಗರಗಳನ್ನೇ ಅವಲಂಬಿಸಿರುವ ಶಾಂತಿನಗರ, ಸಿ.ವಿ.ರಾಮನ್‌ ನಗರ, ಮಹದೇವಪುರ ಮತ್ತು ಕೆ.ಆರ್.ಪುರದ ನಿವಾಸಿಗಳು ಈಗಾಗಲೇ ನೀರಿನ ಕೊರತೆಯನ್ನು ಅನುಭವಿಸುತ್ತಿದ್ದಾರೆ. ವಾರದಿಂದ ಕಾವೇರಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎನ್ನುವುದು ಈ ಭಾಗದ ಜನರ ಅಭಿಪ್ರಾಯ. ಕೊಳವೆಬಾವಿಗಳನ್ನು ಬಳಸದ ಅನೇಕ ಮನೆಗಳು ಕಾವೇರಿ ನೀರು ಬರದಿದ್ದಾಗ ಟ್ಯಾಂಕರ್‌ ನೀರನ್ನೇ ಅವಲಂಬಿಸಬೇಕಾದ ಸ್ಥಿತಿ ಇದೆ.

‘ಒಂದು ವಾರದಿಂದ ಕಾವೇರಿ ನೀರು ಪೂರೈಕೆ ಆಗಿಲ್ಲ. ಈಗಲೇ ಹೀಗಾದರೆ ಮುಂದಿನ ದಿನಗಳನ್ನು ನೆನಪಿಸಿಕೊಂಡರೆ ಆತಂಕವಾಗುತ್ತದೆ. ನಮ್ಮ ಸಂಪ್‌ನಲ್ಲಿ ಸ್ವಲ್ಪವೇ ನೀರಿದೆ. ನಾವೂ ಟ್ಯಾಂಕರ್‌ ನೀರಿನ ಮೊರೆ ಹೋಗಬೇಕಾಗಬಹುದು’ ಎಂದು ಸಿ.ವಿ.ರಾಮನ್‌ ನಗರದ ಸೀತಮ್ಮ ತಿಳಿಸಿದರು.

‘ಐದು ವರ್ಷಗಳಿಂದ ನೀರು ಪೂರೈಕೆಯಲ್ಲಿ ಯಾವುದೇ ತೊಂದರೆ ಉಂಟಾಗಿರಲಿಲ್ಲ. ಕಳೆದ ಬಾರಿ ಮಳೆ ವಿಳಂಬವಾಗಿದ್ದರೂ ಬೇಸಿಗೆ ಮುಗಿಯುವವರೆಗೂ ನೀರು ಪೂರೈಕೆ ಆಗಿತ್ತು. ಆದರೆ, ಈ ಬಾರಿ ಈಗಲೇ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ’ ಎಂದು ದೂರಿದರು.

ಬೇಸಿಗೆಯಲ್ಲಿ ನೀರಿನ ಬೇಡಿಕೆ ಪ್ರಮಾಣ ಶೇ 30ರಷ್ಟು ಜಾಸ್ತಿಯಾಗುತ್ತದೆ. ಕಾವೇರಿ ಕಣಿವೆಯ ಜಲಾಶಯಗಳಲ್ಲಿಯೂ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಅಂತರ್ಜಲದ ಅತೀ ಅವಲಂಬನೆಯಿಂದಾಗಿ ಕೊಳವೆಬಾವಿಗಳು ಬತ್ತಲಾರಂಭಿಸಿವೆ.

ಜಲಮಂಡಳಿ ಪ್ರಧಾನ ಮುಖ್ಯ ಎಂಜಿನಿಯರ್‌ ಕೆಂಪರಾಮಯ್ಯ, ‘ವಿದ್ಯುತ್‌ ವ್ಯತ್ಯಯದಿಂದ ಸ್ಥಳೀಯವಾಗಿ ನೀರು ಪಂಪ್‌ ಮಾಡುವಲ್ಲಿ ತೊಂದರೆ ಆಗುತ್ತದೆ. ಅಲ್ಲದೆ, ಬೇಸಿಗೆಯಲ್ಲಿ ನೀರಿನ ಬೇಡಿಕೆಯೂ ಹೆಚ್ಚಾಗುತ್ತದೆ. ಹೆಚ್ಚಾದ ಬೇಡಿಕೆಗೆ ತಕ್ಕಂತೆ ನೀರು ಪೂರೈಸಲು ಆಗದಿರುವುದರಿಂದ ಅಲ್ಲಿ ಅಭಾವ ಕಾಡುತ್ತದೆ’ ಎಂದು ತಿಳಿಸಿದರು.

‘ದೂರು ಬಂದ ಕೂಡಲೇ ಸ್ಪಂದಿಸುವಂತೆ ಎಂಜಿನಿಯರ್‌ಗಳಿಗೆ ಸೂಚಿಸಿದ್ದೇನೆ. ಜೊತೆಗೆ ಮಿತ ಬಳಕೆಗೆ ಉತ್ತೇಜನ ನೀಡುತ್ತಿದ್ದೇವೆ. ಬೇಸಿಗೆಗೆ ಸಮಸ್ಯೆಯಾಗದಂತೆ ಕ್ರಿಯಾಯೋಜನೆ ರೂಪಿಸುತ್ತಿದ್ದೇವೆ’ ಎಂದು ಹೇಳಿದರು.

ಈಗಿನಿಂದ ಬೇಸಿಗೆ ಅಂತ್ಯದವರೆಗೆ (ಜೂನ್ ವರೆಗೆ) ಒಟ್ಟು 6 ಟಿಎಂಸಿ ಅಡಿ ನೀರು ಬೇಕಿದೆ. ಕೆಆರ್‌ಎಸ್, ಹೇಮಾವತಿ, ಹಾರಂಗಿ ಹಾಗೂ ಕಬಿನಿ ಜಲಾಶಯಗಳಲ್ಲಿ ಒಟ್ಟು 25 ಟಿಎಂಸಿ ಅಡಿ ನೀರು ಲಭ್ಯ. ನಾಲ್ಕು ಜಲಾಶಯಗಳಲ್ಲಿ ಬಳಸಲು ಸಾಧ್ಯವಾಗದ ನೀರು (ಡೆಡ್ ಸ್ಟೋರೇಜ್) 10 ಟಿಎಂಸಿ ಅಡಿ. ಈ ಜಲಾಶಯಗಳಿಂದಲೇ ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಬೇಕಿದೆ. ಇದಕ್ಕೆ 6 ಟಿಎಂಸಿ ಅಡಿ ನೀರು ಮೀಸಲಿಟ್ಟರೂ ನಗರಕ್ಕೆ ಸಾಕಾಗುವಷ್ಟು ನೀರು ಜಲಾಶಯಗಳಲ್ಲಿದೆ ಎಂದು ವಿವರಿಸಿದರು.

ಕಾವೇರಿಯ ಐದು ಹಂತಗಳ ಯೋಜನೆ ಮೂಲಕ ಬೇಸಿಗೆಯಲ್ಲಿ ನಗರಕ್ಕೆ 140 ಕೋಟಿ ಲೀಟರ್‌ ನೀರು ಸರಬರಾಜು ಮಾಡಲಾಗುತ್ತದೆ. ಮಳೆಗಾಲದಲ್ಲಿ ಬೇಡಿಕೆ ಸ್ವಲ್ಪ ಕಡಿಮೆ ಇರುತ್ತದೆ. ಜಲಮಂಡಳಿ ಪ್ರಸ್ತುತ 135 ಕೋಟಿ ಲೀಟರ್‌ ಪೂರೈಕೆ ಮಾಡುತ್ತಿದೆ. ನಗರಕ್ಕೆ ತಿಂಗಳಿಗೆ 1.5 ಟಿಎಂಸಿ ಅಡಿ ನೀರು ಅಗತ್ಯ ಇದೆ.

ಜಲಮಂಡಳಿಯು ನಗರದ ಕೇಂದ್ರ ಭಾಗದ ಜನರಿಗೆ ಎರಡು ದಿನಕ್ಕೊಮ್ಮೆ ಕಾವೇರಿ ನೀರು ಒದಗಿಸುತ್ತಿದೆ. ನಗರಕ್ಕೆ ಹೊಸದಾಗಿ ಸೇರ್ಪಡೆಯಾದ ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಯ ಜನರಿಗೆ ನಾಲ್ಕೈದು ದಿನಕ್ಕೊಮ್ಮೆ ಮಾತ್ರ ಕಾವೇರಿ ನೀರು ಸಿಗುತ್ತದೆ. 110 ಹಳ್ಳಿಗಳ ಜನರು ಕೊಳವೆಬಾವಿ ನೀರನ್ನು ನೆಚ್ಚಿಕೊಂಡಿದ್ದಾರೆ.

ನೀರಿನ ಮಿತ ಬಳಕೆಗೆ ಜನ ಮುಂದಾಗಬೇಕು

‘ಕಾವೇರಿನ ನೀರಿನ ಸಂಪರ್ಕ ಹೊಂದಿಲ್ಲದವರು ಹಾಗೂ ಕೊಳವೆ ಬಾವಿ ಹೊಂದಿರದವರು ಟ್ಯಾಂಕರ್‌ ನೀರಿನ ಮೊರೆ ಹೋಗುತ್ತಾರೆ. ಮಳೆ ನೀರನ್ನು ಸಂಗ್ರಹಿಸುವ ಬಗ್ಗೆಯೂ ಅವರು ಆಲೋಚಿಸಬೇಕಿದೆ. ನೀರನ್ನು ಮಿತವಾಗಿ ಬಳಸಿದರೆ, ಅಭಾವ ಕಾಣುವುದಿಲ್ಲ. ಜಾಗೃತರಾಗದಿದ್ದರೆ ತೊಂದರೆ ತಪ್ಪಿದ್ದಲ್ಲ’ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್‌. ಶ್ರೀನಿವಾಸ ರೆಡ್ಡಿ ಅಭಿಪ್ರಾಯಪಟ್ಟರು.

* ಪುನರ್‌ ಬಳಕೆ ಹಾಗೂ ಮಳೆನೀರು ಸಂಗ್ರಹವನ್ನು ಕಡ್ಡಾಯಗೊಳಿಸಿದಾಗ ಮಾತ್ರ ಅಗತ್ಯವಿರುವಷ್ಟು ನೀರನ್ನು ಪೂರೈಸಲು ಸಾಧ್ಯ
–ಎಂ.ಎನ್. ತಿಪ್ಪೆಸ್ವಾಮಿ, ಜಲ ಮಂಡಳಿಯ ನಿವೃತ್ತ ಮುಖ್ಯ ಎಂಜಿನಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT