ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಿಭಕ್ತ ಕುಟುಂಬದ ಸ್ವಾವಲಂಬಿ ಕೃಷಿ

ಒಗ್ಗಟ್ಟಿನ ದುಡಿಮೆ, ತಾಂತ್ರಿಕ ಸ್ಪರ್ಶ: ಕೃಷ್ಣ ನಾಯ್ಕ ಬೆಳ್ವೆ ಕುಟುಂಬದ ಸಾಧನೆ
Last Updated 10 ಜೂನ್ 2022, 3:02 IST
ಅಕ್ಷರ ಗಾತ್ರ

ಸಿದ್ದಾಪುರ: ಒಗ್ಗಟ್ಟಿನ ದುಡಿಮೆ, ಕಠಿಣ ಪರಿಶ್ರಮ, ದೃಢ ನಿರ್ಧಾರ, ತಾಂತ್ರಿಕತೆ ಅಳವಡಿಸಿಕೊಂಡರೆ ಕೃಷಿಯಲ್ಲಿಯೂ ಯಶಸ್ಸು ಸಾಧಿಸಬಹುದು ಎನ್ನುವುದನ್ನು ಬೆಳ್ವೆ ಗುಮ್ಮೊಲದ ಪ್ರಗತಿಪರ ಕೃಷಿಕ ಕೃಷ್ಣ ನಾಯ್ಕ ಅವರು ಸಾಧಿಸಿ ತೋರಿಸಿದ್ದಾರೆ.

ಕೃಷಿ ಮಾಡಲು ಅನೇಕರಿಗೆ ಮನಸ್ಸಿದ್ದರೂ ಕೂಲಿಯಾಳುಗಳ ಸಮಸ್ಯೆ ಮತ್ತು ನೀರಿನ ಕೊರತೆಯಿಂದ ಹಿಂದೇಟು ಹಾಕುವರೇ ಹೆಚ್ಚು. ಕೃಷ್ಣ ನಾಯ್ಕ ಅವರದು ಅವಿಭಕ್ತ ಕುಟುಂಬ. ಕುಟುಂಬದ ಸದಸ್ಯರು ಒಗ್ಗಟ್ಟಾಗಿ ದುಡಿಯುವ ಮೂಲಕ ಕೂಲಿಯಾಳು ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ತಮ್ಮ ಪರಿಶ್ರಮದ ಜತೆಗೆ ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಂಡಿರುವುದರಿಂದ ಈ ಕುಟುಂಬಕ್ಕೆ ಕೃಷಿ ಸರಳವೂ, ಸುಲಭವೂ ಲಾಭದಾಯಕವೂ ಆಗಿದೆ.

ಮೂರೂವರೆ ಎಕರೆ ಭೂಮಿಯಲ್ಲಿ ಅಡಿಕೆ, ತೆಂಗು, ಭತ್ತ ಬೆಳೆಯುತ್ತಾರೆ. ಸುಮಾರು 2 ಎಕರೆ ಗದ್ದೆಯಲ್ಲಿ ಎರಡು ಬಾರಿ ಬೆಳೆ ತೆಗೆಯುತ್ತಾರೆ. ಮುಂಗಾರು ಮಳೆ ಪ್ರಾರಂಭದಲ್ಲಿ ನಡೆಯುವ ಖಾತೆ ಬೇಸಾಯದಲ್ಲಿ 23ರಿಂದ 26 ಕ್ವಿಂಟಲ್‌ ಭತ್ತ ಬೆಳೆದಿರುವುದು ಈ ಕುಟುಂಬದ ಸಾಧನೆ. ಹಿಂಗಾರು ಆರಂಭಗೊಂಡಾಗ ಸುಗ್ಗಿ ಬೆಳೆಯಲ್ಲೂ 5 ರಿಂದ 6 ಕ್ವಿಂಟಲ್‌ನಷ್ಟು ಭತ್ತ ಬೆಳೆಯುತ್ತಾರೆ.

ಭತ್ತದ ಗದ್ದೆಯಲ್ಲಿ ಉಳುಮೆ ಮಾಡಲು ಟಿಲ್ಲರ್‌ ಬಳಸುತ್ತಾರೆ. ಈ ವರ್ಷ ಮಿಷನ್ ಮೂಲಕ ನಾಟಿ ಮಾಡುವ ಪದ್ಧತಿ ಅಳವಡಿಸಿಕೊಂಡಿರುವುದರಿಂದ ಖರ್ಚು ಕಡಿಮೆಯಾಗಿದೆ.
‘ಭತ್ತದ ನಾಟಿಗೆ ಕೂಲಿಯಾಳುಗಳನ್ನು ಬಳಸಿಕೊಂಡಿದ್ದರೆ ₹5ರಿಂದ ₹6 ಸಾವಿರ ಖರ್ಚಾಗುತ್ತಿತ್ತು. ಮಿಷನ್ ನಾಟಿ ಪದ್ದತಿಯಲ್ಲಿ 1 ಎಕರೆ ಗದ್ದೆಯನ್ನು ಕೇವಲ 2 ಗಂಟೆಯಲ್ಲಿ ನಾಟಿ ಮಾಡಬಹುದು. ಕೇವಲ ₹2,600 ಖರ್ಚಾಗಿದೆ’ ಎನ್ನುತ್ತಾರೆಕೃಷ್ಣ ನಾಯ್ಕ.

‘ಧರ್ಮಸ್ಥಳ ಪ್ರಗತಿ ಬಂಧು ಸ್ವಸಹಾಯ ಗುಂಪಿನಿಂದಾಗಿ ಕೂಲಿಯಾಳುಗಳ ಸಮಸ್ಯೆ ನಿವಾರಣೆ ಆಗಿದೆ. ಗುಂಪಿನ ಸದಸ್ಯರು ವಾರಕ್ಕೊಮ್ಮೆ ಒಬ್ಬ ಸದಸ್ಯರ ಮನೆಯಲ್ಲಿ ಕೆಲಸ ಮಾಡುವುದರಿಂದಾಗಿ ತೋಟದ ಕೆಲಸಗಳಿಗೆ ಹೊರಗಿನಿಂದ ಕೂಲಿಯಾಳುಗಳನ್ನು ಅವಲಂಬಿಸುವುದು
ತಪ್ಪಿದೆ.

ಒಂದೂವರೆ ಎಕರೆಯಲ್ಲಿ ಅಡಿಕೆ ಹಾಗೂ ತೆಂಗಿನ ತೋಟ ಇದೆ. ಕಳೆದ ವರ್ಷ 5 ಕ್ವಿಂಟಾಲ್ ಅಡಿಕೆ ಇಳುವರಿ ಬಂದಿದೆ. ಮನೆಗೆ ಬಳಕೆ ಮಾಡಿ ಉಳಿದ 5 ಸಾವಿರ ತೆಂಗಿನ ಕಾಯಿಗಳನ್ನು ಮಾರಾಟ ಮಾಡಿದ್ದೇವೆ. ಹೈನುಗಾರಿಕೆ ಮಾಡುತ್ತಿರುವುದರಿಂದ ಕೊಟ್ಟಿಗೆ ಗೊಬ್ಬರ ತೋಟ ಹಾಗೂ ಬೇಸಾಯಕ್ಕೆ ಬಳಕೆಯಾಗುತ್ತದೆ’ ಎಂದು ಕೃಷ್ಣ ನಾಯ್ಕ ತಮ್ಮ ಕುಟುಂಬದ ಕೃಷಿ ಚಟುವಟಿಕೆಗಳನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT